ಲಕ್ಷ್ಮೀನಾರಾಯಣ ಭಟ್ಟ ಆಯ್ಕೆ
ಶಿವಮೊಗ್ಗ: ಮುಂಬರುವ ಮಾರ್ಚ್ನಲ್ಲಿ ನಡೆಯಲಿರುವ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಆಯ್ಕೆಯಾಗಿದ್ದಾರೆ.
ಸಾಹಿತ್ಯ ಪರಿಷತ್ನ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 75ರ ಹರೆಯದ ಭಟ್ಟರದ್ದು ಭಾವಗೀತೆ, ಸಾಹಿತ್ಯ ವಿಮರ್ಶೆ, ಅನುವಾದ, ನವ್ಯಕವಿತೆ, ಮಕ್ಕಳಿಗಾಗಿ ಗೀತೆಗಳ ರಚನೆ, ಮುಂತಾದ ಹಲವರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಅಲ್ಲದೆ, ತ್ರಿಭಾಷಾ ಪಂಡಿತ. ಕನ್ನಡ, ಸಂಸ್ಕೃತ, ಇಂಗ್ಲಿಷ್ನಲ್ಲಿ ಸಮರ್ಥವಾಗಿ ಕೃತಿರಚನೆ ಮಾಡಬಲ್ಲವರಾಗಿದ್ದಾರೆ.
1936 ಅಕ್ಟೋಬರ 29ರಂದು ಶಿವಮೊಗ್ಗದಲ್ಲಿ ಹುಟ್ಟಿದರು. ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಶಿವಮೊಗ್ಗದಲ್ಲಿಯೇ ಇಂಟರ್ ಮೀಡಿಯೆಟ್ ಮುಗಿಸಿ, ಕನ್ನಡ ಎಂಎ ಆನರ್ಸ್ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಗಳಿಸಿದರು. ತೀನಂಶ್ರೀ ಮಾರ್ಗದರ್ಶನದಲ್ಲಿ ಸಂಶೋಧನಾ ವೃತ್ತಿ ಕೈಗೊಂಡರು. 1965ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. ನಂತರ ರೀಡರ್, ನಿರ್ದೇಶಕರಾದರು.
ಶಿಶು ಸಾಹಿತ್ಯ ಅವರಿಗೆ ಬಹುಪ್ರಿಯ ಪ್ರಾಕಾರಗಳಲ್ಲಿ ಒಂದಾದರೆ, ಅವರ ಹಲವು ಅನುವಾದ ಕೃತಿಗಳಿಗೆ ಪ್ರಶಸ್ತಿ ಹುಡುಕಿ ಬಂದಿವೆ.
ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಸಮಗ್ರ ವ್ಯವಸಾಯಕ್ಕೆ ಶಿವರಾಮ ಕಾರಂತ ಪ್ರಶಸ್ತಿ ಪಡೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಅವರ ಮಡಿಲು ಸೇರಿವೆ.
ಇನ್ನು ಭಟ್ಟರು ರಚಿಸಿದ ಗೀತ ಕಾವ್ಯಗಳ ಸಂಖ್ಯೆ ಅಪಾರ. ಸಿ.ಅಶ್ವತ್ಥ್, ಶಿವಮೊಗ್ಗ ಸುಬ್ಬಣ್ಣ, ಅನೇಕ ಗಾಯಕರು ಭಟ್ಟರ ಗೀತೆಗಳನ್ನು ಹಾಡಿ ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಇವರು ಈ ಬಾರಿಯ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಮುನ್ನೆಡೆಸಲಿದ್ದಾರೆ.