ಸಂಗೀತ, ನೃತ್ಯ ಕಲೆ ಪೋಷಿಸಿ
ಸಾಗರ: ಭಾರತೀಯ ಸಂಗೀತ ಹಾಗೂ ನೃತ್ಯ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘಟತ ಪ್ರಯತ್ನ ಅಗತ್ಯ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ಪರಿಣಿತಿ ಕಲಾಕೇಂದ್ರ ಶನಿವಾರ ಹಮ್ಮಿಕೊಂಡಿದ್ದ ನಾಟ್ಯ ವೈಭವ-ಸಂಸ್ಕೃತಿ ಅನಾವರಣ ಕಾರ್ಯಕ್ರಮದಲ್ಲಿ, ಕಲೆ, ಸಾಹಿತ್ಯ, ನೃತ್ಯ ಹಾಗೂ ಸಂಗೀತ ಕ್ಷೇತ್ರಗಳಿಗೆ ಒತ್ತು ನೀಡಿದಷ್ಟು ಸಮಾಜ ಆರೋಗ್ಯಕರ ಆಗಿರುತ್ತದೆ ಎಂದರು.
ಕಲೆ ಎಲ್ಲರನ್ನೂ ತನ್ನತ್ತ ಆಕರ್ಷಿಸುವುದಿಲ್ಲ. ಸುದೀರ್ಘ ಪ್ರಯತ್ನ ಹಾಗೂ ತನ್ಮಯತೆ ಇದ್ದಾಗ ಮಾತ್ರ ನೃತ್ಯ ಹಾಗೂ ಸಂಗೀತ ಪ್ರಕಾರಗಳಲ್ಲಿ ಸಿದ್ಧಿ ಪಡೆದುಕೊಳ್ಳಬಹುದು. ಯಾರು ನಿರಂತರವಾಗಿ ಕಲೆಯನ್ನು ಸಿದ್ಧಿಸಿಕೊಳ್ಳುತ್ತಾರೋ ಅಂತಹವರು ಪ್ರಸಿದ್ಧಿ ಹೊಂದುತ್ತಾರೆ. ದೇಶೀ ನೃತ್ಯಪ್ರಕಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಬಿ.ಎನ್. ಚಂದ್ರಶೇಖರ್ ಮಾತನಾಡಿ, ಮಕ್ಕಳು ದೂರದರ್ಶನ, ಕಂಪ್ಯೂಟರ್, ಮೊಬೈಲ್ ಗುಂಗಿನಿಂದ ಹೊರಬಂದು ಭಾರತೀಯ ಸಂಸ್ಕೃತಿ ಕಲಾ ಪ್ರಕಾರಗಳನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಲಕ್ಷ್ಮೀ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ.ಎಸ್. ಅರುಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ರಮೇಶ್ ಸ್ವಾಗತಿಸಿದರು. ಅರುಣ ಘಾಟೆ ನಿರೂಪಿಸಿ, ವಿದ್ವಾನ್ ಗೋಪಾಲ ವಂದಿಸಿದರು.
ತಾಪಂ ಸಭೆ ಮುಂದೂಡಿಕೆ: ಬಿಜೆಪಿ ಸದಸ್ಯರ ಅಸಮಾಧಾನ
ಹೊಸನಗರ: ವಿಧಾನ ಸಭಾಧ್ಯಕ್ಷ ಕಾಗೋಡುತಿಮ್ಮಪ್ಪ ಅವರ ಅಭಿವೃದ್ಧಿ ಸಭೆ ನೆಪವೊಡ್ಡಿದ ಅಧಿಕಾರಿಗಳು ಭಾನುವಾರ ನಡೆಯಬೇಕಿದ್ದ ತಾಪಂ ಸಾಮಾನ್ಯ ಸಭೆಯನ್ನು ಮುಂದೂಡಿದ ಪ್ರಸಂಗದಿಂದ ಸಭೆಯಲ್ಲಿದ್ದ ಬಿಜೆಪಿ ಸದಸ್ಯರು ಅಸಮಾದಾನ ಸೂಚಿಸಿ ಸಭೆಯಲ್ಲಿ ಗದ್ದಲ ನಡೆಸಿದ ಘಟನೆ ತಾಪಂ ಸಭಾಂಗಣದಲ್ಲಿ ನಡೆಯಿತು.
ಮುಂಚಿತವಾಗಿ ನಿಗದಿಯಾಗಿದ್ದ ತಾಪಂ ಸಾಮಾನ್ಯ ಸಭೆಗೆ ಅಧ್ಯಕ್ಷರು, ಸದಸ್ಯರೆಲ್ಲರೂ ಆಗಮಿಸಿದ್ದರು. ಇನ್ನೇನು ಸಭೆ ಕಾರ್ಯಾಕಲಾಪ ಪ್ರಾರಂಭವಾಗಬೇಕು ಎನ್ನುವಾಗ ಮಧ್ಯ ಪ್ರವೇಶಿಸಿದ ತಾಪಂ ಅಧಿಕಾರಿಗಳು, ಇಂದು ಕಾಗೋಡು ಸಭೆ ನಡೆಯುವುದರಿಂದ ಎರಡೆರಡು ಸಭೆ ನಡೆಸಲು ಕಷ್ಟವಾಗುತ್ತೆ. ಅಧ್ಯಕ್ಷರಿಗೂ ಕಷ್ಟ ಹಾಗಾಗಿ ಸಾಮಾನ್ಯ ಸಭೆ ರದ್ದು ಮಾಡಿ ಮುಂದೂಡಲು ಅಣಿಯಾದರು.
ಅಸಮಾಧಾನ: ಆಗ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರಾದ ಸುಮಾ, ಮಂಜುನಾಥ್ ಗೌಡ, ವೀರೇಶ್ ಆಲುವಳ್ಳಿ, ಸಾಮಾನ್ಯ ಸಭೆ ನಡೆಯುವುದೇ 3 ತಿಂಗಳಿಗೊಮ್ಮೆ. ಅದರಲ್ಲಿ ಕಾಗೋಡು ಸಭೆ ನೆಪದಲ್ಲಿ ಸಭೆ ರದ್ದಾದರೆ ಜನರಿಗೆ ಏನು ಉತ್ತರಿಸೋದು. ದಿಡೀರ್ ಸಭೆ ರದ್ದು ಮಾಡುವ ಅಧಿಕಾರಿಗಳ ವರ್ತನೆ ಸಾಧುವಲ್ಲ ಸಭೆ ನಡೆಯಲಿ ಎಂದು ಹಠ ಹಿಡಿದರು.
ಆಗ ಕಾಂಗ್ರೆಸ್ ಸದಸ್ಯರಾದ ಗೀತಾ ನಿಂಗಪ್ಪ, ಕುಬೇರಪ್ಪ ಮಾತನಾಡಿ, ತಾಲೂಕು ಅಭಿವೃದ್ಧಿಯಲ್ಲಿ ಸಲ್ಲದ ಅಸಮಾಧಾನ ಬೇಡ. ಕಾಗೋಡು ಅಭಿವೃದ್ಧಿ ಪರ ಸಭೆ ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ ಸಭೆ ಮುಂದೂಡಲಿ ಎಂದು ಹೇಳಿದರು.
ಸಭೆಯಲ್ಲಿ ಒಮ್ಮೆ ಕಾವೇರಿದ ವಾತವರಣ ನಿರ್ಮಾಣವಾಗಿ ಪರ ವಿರೋಧ ಚರ್ಚೆಗಳು ನಡೆದವು. ಕೊನೆಗೆ ಅಧ್ಯಕ್ಷೆ ನಾಗರತ್ನ ದೇವರಾಜ್ ಸೂಚನೆ ಮೇರೆಗೆ ಸಭೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಲಾಯಿತು.