ಚಹಾ ಹಂಚಿ ಬಿಜೆಪಿ ಕಾರ್ಯಕರ್ತರ ಪ್ರಚಾರ
ಶಿವಮೊಗ್ಗ: ಚಹಾ ಮಾರಲು ಅಂಜುವುದಿಲ್ಲ, ದೇಶ ಮಾರಲು ಬಿಡುವುದಿಲ್ಲ ಎಂಬ ಘೋಷಣೆಯೊಂದಿಗೆ ಬಿಜೆಪಿ ಕಾರ್ಯಕರ್ತರು ಯುವಮೋರ್ಚಾ ನೇತೃತ್ವದಲ್ಲಿ ಮಂಗಳವಾರ ಟೀ ಮಾರುವ ಮೂಲಕ ಗಮನ ಸೆಳೆದರು.
ಇಲ್ಲಿನ ಶಿವಪ್ಪನಾಯಕ ವೃತ್ತದಲ್ಲಿ ನರೇಂದ್ರ ಮೋದಿ ಟೀ ಸ್ಟಾಲ್ ಹಾಕಿದ್ದ ಕಾರ್ಯಕರ್ತರು, ಈ ರಸ್ತೆಯಲ್ಲಿ ಸಾಗಿ ಬರುವ ಪಾದಚಾರಿಗಳಿಗೆ ಟೀ ಕೊಟ್ಟು ಪ್ರಚಾರ ಮಾಡಿದರು. ಹಾಗೆಯೇ ನಿಮ್ಮ ಧ್ವನಿ ನಮ್ಮ ಪ್ರಣಾಳಿಕೆ ಎಂಬ ಪತ್ರವನ್ನು ಸಾರ್ವಜನಿಕರಿಗೆ ನೀಡಿ, ಅವರ ನಿರೀಕ್ಷೆಗಳನ್ನು ದಾಖಲು ಮಾಡಿಕೊಂಡರು.
ಸಲಹೆ ನಮೂದಿಸಲು ಅವಕಾಶ: ಒಳ್ಳೆಯ ಆಡಳಿತ, ರಾಷ್ಟ್ರೀಯ ಸುರಕ್ಷತೆ, ಮೂಲಸೌಕರ್ಯ, ಸುಸ್ಥಿರ ಆರ್ಥಿಕತೆ, ಸಾಮಾಜಿಕ ಅಭಿವೃದ್ಧಿ, ಇಂಧನ ಸುರಕ್ಷತೆ, ಆರೋಗ್ಯ, ಶಿಕ್ಷಣ, ಆರೋಗ್ಯ, ಪರಿಸರ, ಜಲ ನಿರ್ವಹಣೆ ಸೇರಿದಂತೆ ಒಟ್ಟಾರೆ 15 ಅಂಶಗಳು ಕರಪತ್ರದಲ್ಲಿದ್ದು, ಉತ್ತಮ ಭಾರತಕ್ಕಾಗಿ ನನ್ನ ಸಲಹೆ ಏನೆಂಬುದನ್ನು ಸಾರ್ವಜನಿಕರು ನಮೂದಿಸಲು ಅವಕಾಶ ಕಲ್ಪಿಸಲಾಗಿತ್ತು.
ತರಾಟೆ: ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ರಾಜಕೀಯ ಪಕ್ಷಗಳಲ್ಲಿ ಆರೋಪ ಪ್ರತ್ಯಾರೋಪ ಸಹಜ. ಆದರೆ, ಚಹಾ ಮಾರುವ ಬಡವರನ್ನು ಹೀಯಾಳಿಸುವ ಕಾಂಗ್ರೆಸ್ ಮುಖಂಡರ ನಿಲುವು ಸರಿಯಲ್ಲ ಎಂದು ಹೇಳಿದರು.
ಚಹಾ ಮಾರಿ ಸ್ವಾಭಿಮಾನದ ಬದುಕು ಸಾಗಿಸುತ್ತಾ ದೇಶಪ್ರೇಮ ಮೈಗೂಡಿಸಿಕೊಂಡು ರಾಜಕೀಯ ಕ್ಷೇತ್ರ ಪ್ರವೇಶಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿಯವರು ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಕಾಣಲು ಯುವಜನತೆ ಉತ್ಸಾಹದಿಂದ ಕಾರ್ಯೋನ್ಮುಖರಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಭವಾನಿರಾವ್ ಮೋರೆ ಮಾತನಾಡಿ, ಮೋದಿಯವರು ಈಗಾಗಲೇ ಮುಖ್ಯಮಂತ್ರಿಯಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿ ಗುಜರಾತ್ನ ಜನರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ ಅವರೊಬ್ಬ ನಂಬಿಕಸ್ತ ವ್ಯಕ್ತಿಯಾಗಿದ್ದು, ದೇಶವನ್ನು ಮುನ್ನೆಡೆಸಲು ಅತ್ಯಂತ ಸಮರ್ಥ ಎಂದು ಪ್ರತಿಪಾದಿಸಿದರು.
ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಬಿಜೆಪಿಯ ಪ್ರಮುಖರಾದ ಗಿರೀಶ್ ಪಟೇಲ್, ಎಸ್.ಎನ್. ಚನ್ನಬಸಪ್ಪ, ಮಧುಸೂಧನ್, ಪಾಲಿಕೆ ಸದಸ್ಯರಾದ ಅರ್ಚನಾ ಬಳ್ಳೆಕೆರೆ ಸಂತೋಷ್, ಸಿ.ಎಚ್. ಮಾಲತೇಶ್, ಮೋಹನ ರೆಡ್ಡಿ, ಎಸ್. ರಮೇಶ್, ಸುರೇಖಾ ಮುರಳೀಧರ್, ಎನ್.ಜೆ. ರಾಜಶೇಖರ್, ಹೃಷಿಕೇಶ ಪೈ, ನಟರಾಜ್, ಹಿರಣ್ಣಯ್ಯ ಮತ್ತಿತರರು ಇದ್ದರು.