ಮನೆಗಂದಾಯ ವಸೂಲಿ ಆಂದೋಲನ
ಚಿಕ್ಕಮಗಳೂರು: ನಗರಸಭೆ ಮಂಗಳವಾರದಿಂದ ನಗರದಲ್ಲಿ ತೆರಿಗೆ ವಸೂಲಾತಿ ಆಂದೋಲನ ಹಮ್ಮಿಕೊಂಡಿದ್ದು, ಮೊದಲ ದಿನದಂದು 1.23 ಲಕ್ಷ ತೆರಿಗೆ ವಸೂಲಾಗಿದೆ.
ನಗರದ 18 ವಾರ್ಡ್ ವ್ಯಾಪ್ತಿಯಲ್ಲಿರುವ ಅಂಡೇಛತ್ರ ಬಳಿ ತೆರಿಗೆ ವಸೂಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಪೌರಾಯುಕ್ತ ನಾಗಭೂಷಣ್, ಕಳೆದ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಮನೆ, ನೀರು, ಉದ್ದಿಮೆ, ಕಟ್ಟಡ ಸೇರಿದಂತೆ ಇತ್ಯಾದಿ ತೆರಿಗೆಗಳನ್ನು ಆಂದೋಲನ ಮೂಲಕ ವಸೂಲಿ ಮಾಡಲಾಗುತ್ತಿದೆ ಎಂದರು.
ಮನೆ ಬಾಗಿಲಿಗೆ ತೆರಳಿ ತೆರಿಗೆ ಸಂಗ್ರಹ: ನಗರಸಭೆ ವ್ಯಾಪ್ತಿಯಲ್ಲಿ ಯಾವುದೆ ಅಭಿವೃದ್ಧಿ ಕಾರ್ಯಗಳು ನಡೆಯಲು ಸರ್ಕಾರದಿಂದ ಅನುದಾನ ಮಂಜೂರಾಗಬೇಕಾದರೆ ಮನೆ ಮತ್ತು ಕಟ್ಟಡಗಳ ಮಾಲೀಕರು ಸಕಾಲದಲ್ಲಿ ತೆರಿಗೆ ಹಣಗಳನ್ನು ಪಾವತಿಸಿದರೆ ಮಾತ್ರ ಸಾಧ್ಯವಾಗುತ್ತದೆ. ಈ ಸಂಬಂಧ ನಗರದ 35 ವಾರ್ಡ್‌ಗಳಲ್ಲಿ ತೆರಿಗೆ ವಸೂಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ನಿತ್ಯ ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ ನಗರಸಭೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದು, ಪ್ರತಿಯೊಂದು ವಾರ್ಡ್‌ನಲ್ಲಿ 2 ದಿನ ಮನೆ ಬಾಗಿಲಿಗೆ ತೆರಳಿ ಕಂದಾಯದ ಹಣ ಸಂಗ್ರಹಣೆ ಮಾಡಲಾಗುತ್ತದೆ ಎಂದು ಹೇಳಿದರು.
ಕಂದಾಯಾಧಿಕಾರಿ ಪಿ. ಗುರುಮೂರ್ತಿ ಮಾತನಾಡಿ, ನಗರಸಭೆಯ ಒಟ್ಟು 70ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದು, 3 ತಂಡಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಾರ್ಡ್‌ಗಳಲ್ಲಿ ಎರಡು ದಿನದಂತೆ ಮಾರ್ಚ್ 31 ರವರೆಗೆ 35 ವಾರ್ಡ್‌ಗಳಲ್ಲೂ ತೆರಿಗೆ ವಸೂಲಾತಿ ಮಾಡಲಾಗುತ್ತದೆ ಎಂದರು.
2014- 15 ನೇ ಸಾಲಿನ ನೀರಿನ ಕಂದಾಯವನ್ನು ಸ್ವಯಂ ಪ್ರೇರಿತರಾಗಿ ಬಂದು ಏಪ್ರಿಲ್ ತಿಂಗಳೊಳಗೆ ಸಕಾಲದಲ್ಲಿ ಹಣ ಪಾವತಿಸಿದರೆ ಶೇ. 5ರಷ್ಟು ವಿನಾಯಿತಿ ನೀಡಲಾಗುವುದು, ನಿಗದಿತ ಅವಧಿಯಲ್ಲಿ ತೆರಿಗೆ ಕಟ್ಟದಿದ್ದರೆ ಶೇ. 2ರಷ್ಟು ಹಣವನ್ನು ಬಡ್ಡಿಯಾಗಿ ವಸೂಲಿ ಮಾಡಲಾಗುವುದು ಎಂದು ತಿಳಿಸಿದರು. ಆರಂಭದ ದಿನ ಕನಿಷ್ಟ 1800 ಗಳಿಂದ ಗರಿಷ್ಠ 9760 ವರೆಗೆ ವಿವಿಧ ಕಂದಾಯಗಳನ್ನು ಸಾರ್ವಜನಿಕರು ಪಾವತಿಸಿದ್ದಾರೆ. ಅಧಿಕಾರಿ ಅಥವಾ ಸಿಬ್ಬಂದಿಗಳು ಮನೆ ಬಾಗಿಲಿಗೆ ಬಂದಾಗ ಬಾಕಿ ಅಥವಾ ಕಟ್ಟಬೇಕಾದ ತೆರಿಗೆ ಹಣವನ್ನು ನೀಡಿ ಸಹಕರಿಸಬೇಕು, ಸಕಾಲದಲ್ಲಿ ಕಂದಾಯ ಕಟ್ಟಿದರೆ ಮಾತ್ರ ಸರ್ಕಾರದಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರಲು ಸಾಧ್ಯ ಎಂದರು. ನೀರು ಅಥವಾ ಮನೆ ಕಂದಾಯಗಳನ್ನು ಸರಿಯಾಗಿ ಪಾವತಿಸದೆ ಇದ್ದಲ್ಲಿ ಯಾವ ಒತ್ತಡಕ್ಕೂ ಮಣಿಯದೆ ನಿಯಮಾನುಸಾರವಾಗಿ ಮೂಲಬೂತ ಸೌಕರ್ಯಗಳನ್ನು ಕಡಿತಗೊಳಿಸಲಾಗುವುದಾಗಿ ಎಚ್ಚರಿಸಿದ್ದಾರೆ. ವ್ಯವಸ್ಥಾಪಕ ಕಾಂತರಾಜ್, ಎಂಜಿನಿಯರ್ ಚಂದನ್, ಲೋಕೇಶ್, ಚಂದ್ರಕಾಂತ್, ರಾಜಸ್ವ ನಿರೀಕ್ಷಕರಾದ ದೀಪಕ್, ರಮೇಶ್ ನಾಯ್‌ಡು, ಮಮತಾ, ನಗರಸಭೆ ಸದಸ್ಯ ಅಬ್ದುಲ್ ರೆಹಮಾನ್ ಕುರೇಶಿ, ಸ್ಥಳೀಯರಾದ ಮಧು ಹಾಜರಿದ್ದರು.