ಸಾಮರಸ್ಯದಿಂದ ಬದುಕಿದರೆ ಸಮಾಜದಲ್ಲಿ ಶಾಂತಿ: ಶ್ರೀ
ಸೊರಬ: ಜನರಲ್ಲಿ ಧಾರ್ಮಿಕ ಭಾವನೆಗಳಿಗೆ ಕೊರತೆ ಇಲ್ಲ. ಆದರೆ ದಿನನಿತ್ಯದ ಜಂಜಾಟಗಳಿಂದ ಸಮಯದ ಕೊರತೆಯಿಂದಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತದೆ. ಒಗ್ಗಟ್ಟಾಗಿ ಗ್ರಾಮದ ಜನತೆ ಜಾತ್ಯತೀತ ಮನೋಭಾವದಿಂದ ಪರಸ್ಪರ ಸಾಮರಸ್ಯ ಬದುಕು ಸಾಧಿಸಿದಾಗ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮಿಗಳು ನುಡಿದರು.
ತಾಲೂಕಿನ ಹಸ್ವಿ ಗ್ರಾಮದಲ್ಲಿ ಈಶ್ವರ ಬಸವೇಶ್ವರ ದೇವಾಲಯ ಹಾಗೂ ಶ್ರೀ ದುರ್ಗಾದೇವಿ ನೂತನ ದೇವಾಲಯಗಳನ್ನು ಉದ್ಘಾಟಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಾಗಡಿ ಮುರುಗಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಇಂದಿನ ತಲೆಮಾರಿನವರು ತಮ್ಮ ಮೂಲ ಪರಂಪರೆಯನ್ನು ಕಡೆಗಣಿಸಿದ್ದಾರೆ. ವಿಜ್ಞಾನದ ಆವಿಷ್ಕಾರವಾದಂತೆಲ್ಲ ಜನತೆ ಆಲಸಿಗಳಾಗುತ್ತಿದ್ದಾರೆ. ಜಾಗತೀಕ ಪೈಪೋಟಿಯ ನಡುವೆ ಸಂಸ್ಕೃತಿ ವಿನಾಶದೆಡೆಗೆ ಸಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಶಾಂತಾಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮೂಡಿ ವಿರಕ್ತ ಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದುರ್ಗಾದೇವಿ ಟ್ರಸ್ಟ್ ಅಧ್ಯಕ್ಷ ಜಯಶೀಲಗೌಡರು ಅಧ್ಯಕ್ಷತೆ ವಹಿಸಿದ್ದರು.
ಶನಿವಾರದಿಂದಲೇ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೂರ್ಣಕುಂಭ ಉತ್ಸವದೊಂದಿಗೆ ದೇವರ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು.
ವೇದಿಕೆಯಲ್ಲಿ ಟ್ರಸ್ಟ್ನ ಗೌರವಾಧ್ಯಕ್ಷ ಶಿವಾಜಿಗೌಡರು, ಗ್ರಾಪಂ ಸದಸ್ಯ ಪರಶುರಾಮ, ಜಿಪಂ ಮಾಜಿ ಸದಸ್ಯ ಎ.ಎಲ್. ಅರವಿಂದ, ಬಿ. ಜಯದೇವಪ್ಪ ಶಿವಮೊಗ್ಗ, ಕೃಷ್ಣಾ ಅಣ್ಣಯ್ಯಗೌಡ, ಶ್ರೀ ಜಗದೀಶ ಅರಣ್ಯಾಧಿಕಾರಿ, ಶಿವಲಿಂಗ ಗೌಡರು, ವೀರಪ್ಪಗೌಡರು, ಷಣ್ಮೂಖ ಗೌಡ, ವೀರಭದ್ರಗೌಡ, ಧರ್ಮಪ್ಪಗೌಡ, ಪಾಲಾಕ್ಷಯ್ಯ, ವಾಣಿಜ್ಯ ತೆರಿಗೆ ಅಧಿಕಾರಿ ವೀರೇಂದ್ರ ಕುಮಾರ, ವೆಂಕಟೇಶ ಹಾಜರಿದ್ದರು.