ಶಿಕ್ಷಣ ಇಲಾಖೆಯಲ್ಲಿ ದುಡಿವ ಎಂಜಿನಿಯರ್‌ಗಳಿಗೆ 10 ತಿಂಗಳಿಂದ ಸಂಬಳವಿಲ್ಲ
-ವಿಶೇಷ ವರದಿ
ಶಿವಮೊಗ್ಗ: ಶಿಕ್ಷಣ ಸಚಿವರೇ ಎಲ್ಲಿದ್ದೀರಾ...
ನಿಮ್ಮ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸಿವಿಲ್ ಎಂಜಿನಿಯರ್‌ಗಳಿಗೆ ಕಳೆದ 10 ತಿಂಗಳಿಂದ ಸಂಬಳವಾಗಿಲ್ಲ. ಉದ್ಯೋಗ ಜಗತ್ತಿಗೆ ಕಾಲಿಟ್ಟು ಖುಷಿಯಲ್ಲಿದ್ದ 200ಕ್ಕೂ ಹೆಚ್ಚು ಎಂಜಿನಿಯರ್‌ಗಳು ಸರ್ಕಾರದ ನಿರ್ಲಕ್ಷ್ಯ ಧೋರಣೆ ಪರಿಣಾಮ ಮಾನಸಿಕವಾಗಿ ಕೃಶವಾಗಿ ಹೋಗಿದ್ದಾರೆ.
ಹಿನ್ನೆಲೆ: ಸರ್ವ ಶಿಕ್ಷಣ ಅಭಿಯಾನದಡಿ ನಡೆಯುವ ಸಿವಿಲ್ ಕಾಮಗಾರಿಗಳ ಉಸ್ತುವಾರಿಗಾಗಿ ರಾಜ್ಯದ ಎಲ್ಲಾ ಶೈಕ್ಷಣಿಕ ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ಸಿವಿಎಲ್ ಎಂಜಿನಿಯರಿಂಗ್ ಕೋರ್ಸ್ ಪೂರೈಸಿದ ಅಭ್ಯರ್ಥಿಗಳನ್ನು ಖಾಸಗಿ ಗುತ್ತಿಗೆ ಸಂಸ್ಥೆಯ ಮೂಲಕ ನೇಮಕ ಮಾಡಿಕೊಂಡ ಶಿಕ್ಷಣ ಇಲಾಖೆ ಅವರಿಗೆ ಮಾಸಿಕ ವೇತನ ಕೊಡುವ ಗೋಜಿಗೆ ಮಾತ್ರ ಹೋಗಿಲ್ಲ.
ಅಚ್ಚರಿ ಎಂದರೆ, ಕೆಲಸಕ್ಕೆ ಸೇರಿ 10 ತಿಂಗಳಾಗಿದ್ದರೂ 200ಕ್ಕೂ ಹೆಚ್ಚು ಎಂಜಿನಿಯರ್‌ಗಳು ಈವರೆಗೆ ಒಂದು ತಿಂಗಳ ಸಂಬಳವನ್ನೂ ಕಂಡಿಲ್ಲ. ಅದಾಗ ತಾನೇ ಎಂಜಿನಿಯರಿಂಗ್ ಪದವಿ ಪೂರೈಸಿದ್ದ ಯುವಕರಿಗೆ ಕೆಲಸ ಸಿಕ್ಕಿದ ಖುಷಿಯಲ್ಲಿದ್ದರು. ಆದರೆ, ತಿಂಗಳು ಉರುಳಿದಂತೆ ಕಂಗಾಲಾಗಿದ್ದಾರೆ, ಸಂಬಳವಿಲ್ಲದೇ ರೋಸಿ ಹೋಗಿದ್ದಾರೆ.
ಈ ವಿಷಯ ತಿಳಿದಿದ್ದರೂ ಸಹ ಸರ್ಕಾರ ಮಾತ್ರ ತನಗೇನು ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಕೆಲಸ ನಿರ್ವಹಿಸುತ್ತಿರುವ ಎಂಜಿನಿಯರ್‌ಗಳ ಆಕ್ರೋಶಕ್ಕೂ ಕಾರಣವಾಗಿದೆ. ಆಸ್ಟ್ರಿಕ್ ಎಂಬ ಖಾಸಗಿ ಕಂಪನಿಯು ಎಂಜಿನಿಯರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದು, ಸರ್ಕಾರಿ ಸೇವೆಗೆ ನೀಡಿದೆ.
ಶಿಕ್ಷಣ ಇಲಾಖೆ ಎಲ್ಲಾ ಬ್ಲಾಕ್‌ಗೂ ಒಬ್ಬೊಬ್ಬ ಎಂಜಿನಿಯರ್ ನೇಮಿಸಲಾಗಿತ್ತು. ಜೊತೆಗೆ ಜಿಲ್ಲೆಗೆ ಉಸ್ತುವಾರಿ ಎಂಜಿನಿಯರ್ ಸಹ ಇದ್ದಾರೆ. ಕಳೆದ 10 ತಿಂಗಳಿಂದೀಚೆಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಕಟ್ಟಡದ ದುರಸ್ತಿ, ವಿಸ್ತರಣಾ ಕೊಠಡಿ ನಿರ್ಮಾಣ ಸೇರಿದಂತೆ ಶಾಲಾ ಆವರಣದ ಎಲ್ಲಾ ಸಿವಿಲ್ ಕಾಮಗಾರಿ ಇವರ ಪ್ರಸ್ತಾವನೆಯ ಪ್ರಕಾರವೇ ನಡೆದಿದೆ. ನಂತರ ಕಾಮಗಾರಿ ಉಸ್ತುವಾರಿಯೂ ಇವರದ್ದೇ. ಹಳ್ಳಿ ಹಳ್ಳಿ ಸುತ್ತಿ ಕೆಲಸ ಮಾಡಿರುವ ಈ ಎಂಜಿನಿಯರ್‌ಗಳು ಇದೀಗ ಸಂಪೂರ್ಣ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು, ಶಾಲೆಯ ಉಸ್ತುವಾರಿ ಮಾಡಲು ಹೋಗಿಬರುವ ಪೆಟ್ರೋಲ್ ಖರ್ಚಿಗೂ ಪರದಾಡುತ್ತಿದ್ದಾರೆ.
'ಕನ್ನಡಪ್ರಭ'ಕ್ಕೆ ಈ ಸಂಗತಿಯನ್ನು ವಿವರಿಸಿದ ಎಂಜಿನಿಯರ್ ಜಗದೀಶ್ವರ (ಹೆಸರು ಬದಲಿಸಲಾಗಿದೆ), ವೇತನ ನೀಡುವಂತೆ ನಮಗೆ ಕೆಲಸ ನೀಡಿದ ಗುತ್ತಿಗೆ ಸಂಸ್ಥೆ ಸೇರಿದಂತೆ, ಸರ್ಕಾರದ ಎಲ್ಲಾ ಹಂತದ ಅಧಿಕಾರಿಗಳು, ಮಂತ್ರಿಗಳಿಗೂ ಮನವಿ ಮಾಡಿದ್ದೇವೆ. ಆದರೆ, ಯಾರೂ ನಮ್ಮ ಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೇ ತಿಂಗಳಲ್ಲಿ ನೇಮಕಾತಿ ನಡೆದಿದೆ. ಅಂದಿನಿಂದ ಇಂದಿನ ವರೆಗೆ ಸರ್ಕಾರದಿಂದ ಒಂದು ಪೈಸೆ ಹಣ ಬಂದಿಲ್ಲ. ನಮ್ಮ ಸ್ವಂತ ಹಣದಲ್ಲಿ ಶಾಲೆ ಶಾಲೆ ಸುತ್ತಿ ಕಾಮಗಾರಿ ನಿರ್ವಹಿಸಿದ್ದೇವೆ. ಇಂದು, ನಾಳೆ ವೇತನ ಬರಬಹುದೆಂದು ಕಾದು ಕಾದು ಸುಸ್ತಾಗಿ ಹೋಗಿದೆ. ಇನ್ನು ಅನಿರ್ಧಿಷ್ಟಾವಧಿ ಹೋರಾಟವೊಂದೇ ಉಳಿದಿರುವ ದಾರಿ ಎಂದು ಹೇಳಿದರು.
ಎಸ್‌ಎಸ್‌ಎ ಕಚೇರಿಯ ಅಧಿಕಾರಿಗಳ ಪ್ರಕಾರ, ಕೆಲವು ತಾಂತ್ರಿಕ ದೋಷದ ಕಾರಣದಿಂದ ವೇತನವಾಗಿಲ್ಲ. ಹಾಗೆಯೇ ಈ ವ್ಯವಸ್ಥೆಯನ್ನು ಮುಂದುವರಿಸುವ ಆಲೋಚನೆಯೂ ಕಡಿಮೆ ಇದೆ ಎಂದು ಅಭಿಪ್ರಾಯಿಸುತ್ತಾರೆ. ಆಸ್ಟ್ರಿಕ್ ಕಂಪನಿ ಮಾತ್ರ, ನಾವು ಸರ್ಕಾರಕ್ಕೆ ಸಂಬಂಧ ಪಟ್ಟ ಬಿಲ್‌ಗಳನ್ನು ಸಲ್ಲಿಸಿದ್ದೇವೆ. ಅವರು ಪಾವತಿಸಿದ ತಕ್ಷಣವೇ ಎಂಜಿನಿಯರ್‌ಗಳಿಗೆ ವೇತನ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಾರೆ. 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್‌ಗಳಿಗೆ ಮಾಸಿಕ 24,614 ವೇತನ, 5500 ರುಪಾಯಿ ಭತ್ಯೆ, 204 ಬ್ಲಾಕ್ ಎಂಜಿನಿಯರ್‌ಗಳಿಗೆ 17,647 ವೇತನ ಮತ್ತು 5500 ಭತ್ಯೆ ನಿಗದಿ ಮಾಡಲಾಗಿದೆ.
ಕೆಲಸದ ಆರ್ಡರ್‌ಗೆ 15 ಸಾವಿರ ಡಿಮ್ಯಾಂಡ್
ಈ ಕೆಲಸಕ್ಕೆ ಸೇರಿದ ಅನೇಕ ಎಂಜಿನಿಯರ್‌ಗಳು ಕೆಲಸದ ಆರ್ಡರ್ ಪಡೆಯುವ ಮುನ್ನ 15 ಸಾವಿರ ರುಪಾಯಿಯ ಡಿಡಿಯನ್ನು ಸಂಸ್ಥೆಗೆ ಸಲ್ಲಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಈಗಾಗಲೇ ಸರ್ಕಾರ 70ಕ್ಕೂ ಹೆಚ್ಚು ಎಂಜಿನಿಯರ್‌ಗಳನ್ನು ಸೇವೆಯಿಂದ ಕೈಬಿಟ್ಟಿದ್ದು, ಇಂತಹವರು ಕೆಲಸವೂ ಇಲ್ಲದೇ, 15 ಸಾವಿರ ಮುಂಗಡ ಪಾವತಿಯೂ ಇಲ್ಲದೇ ತಬ್ಬಿಬ್ಬಾಗಿದ್ದಾರೆ. ಅಂತಿಮವಾಗಿ ತಮಗಾಗಿರುವ ಅನ್ಯಾಯವನ್ನು ಸರಿಪಡಿಸಿಕೊಂಡುವಂತೆ ಲೋಕಾಯುಕ್ತ ಮೊರೆ ಹೋಗಲೂ ಸಹ ನಿರ್ಧರಿಸಿದ್ದಾರೆ.