ಅಂರ್ತಜಲ ವೃದ್ಧಿಗೆ ಆದ್ಯತೆ ಅಗತ್ಯ: ನೇತ್ರಾವತಿ
ಸೊರಬ: ಅರಣ್ಯ ಕಡಿತಲೆ, ರಾಸಾಯನಿಕ ಗೊಬ್ಬರ ಬಳಕೆ, ಹಲವು ಕಾರಣಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಭೂಮಿಯಲ್ಲಿ ನೀರು ಇಂಗುವ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಸಂಪನ್ಮೂಲ ಅಧಿಕಾರಿ ನೇತ್ರಾವತಿ ಬಿ. ಸೊನಲೆ ವಿಷಾದ ವ್ಯಕ್ತಪಡಿಸಿದರು.
ಆನವಟ್ಟಿಯ ಗ್ರಾಪಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಸ್ನೇಹಾ ಸ್ವಯಂ ಸೇವಾ ಸಂಸ್ಥೆ ತಾಪಂ ಹಮ್ಮಿಕೊಂಡಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತು ಗ್ರಾಪಂ ಸದಸ್ಯರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಪೋಷಕಾಂಶಗಳ ಕೊರತೆಯಿಂದ ಭೂಮಿ ಗಟ್ಟಿಯಾಗುತ್ತಿದೆ. ಮರದ ಬೇರುಗಳು ನೆಲದ ಆಳಕ್ಕೆ ಇಳಿಯುತ್ತಿಲ್ಲ. ಇದರಿಂದ ಇಂಗುವ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಕಡಿಮೆಯಾಗುತ್ತಿದೆ. ಭೂಮಿಯಿಂದ 50 ಅಡಿ ಕೆಳಗೆ ಶುದ್ಧ ಜಲ ದೊರಕುತ್ತದೆ. ಆಳ ಹೆಚ್ಚು ಹೋದಂತೆ ಖನಿಜಯುಕ್ತ ನೀರು ದೊರಕುತ್ತಿದ್ದು, ಇದರಿಂದ ವಿಚಿತ್ರ ಕಾಯಿಲೆಗಳು ಬರುತ್ತಿವೆ. ಇವುಗಳನ್ನು ಹತೋಟಿಗೆ ತರಲು ಮತ್ತೆ ಮತ್ತೆ ಯೋಜನೆ ಹಮ್ಮಿಕೊಳ್ಳಬೇಕಿದೆ. ಆದ್ದರಿಂದ ಕೆರೆ, ಬಾವಿ, ಕಲ್ಯಾಣಿ, ಕೃಷಿ ಹೊಂಡ, ಕುಡಿಯುವ ನೀರಿನ ಹೊಂಡ ಮುಂತಾದವುಗಳನ್ನು ಶುದ್ಧೀಕರಿಸಿ ಮಳೆಯ ನೀರನ್ನು ಹೆಚ್ಚು ಪ್ರಮಾಣದಲ್ಲಿ ಇಂಗುವಂತೆ ಮಾಡಿದಾಗ ಅಂರ್ತಜಲ ಹೆಚ್ಚುವುದರೊಂದಿಗೆ ಶುದ್ಧ ಜೀವಜಲವು ದೊರೆಯುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲೂ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ರಚಿಸಲು ಅವಕಾಶವಿದ್ದು, ರಚಿಸಿಕೊಂಡ ಸಮಿತಿಗಳು ಕ್ರಿಯಾಶೀಲವಾಗದಿರುವುದು ಖೇದಕರ ಸಂಗತಿ ಎಂದರು.
ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಹಿರಿಯ ಸದಸ್ಯರಾದ ಮಂಜಪ್ಪ, ಕಲಂದರ್ಸಾಬ್ ಸೇರಿದಂತೆ ಎಲ್ಲಾ ಗ್ರಾಪಂ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಉಪನ್ಯಾಸಕ ಮುರುಗೇಂದ್ರಪ್ಪ, ಸಂಸ್ಥೆಯ ಶಿವಾನಂದ ಕೊಳಗಿ, ಅಭಿಲಾಷ, ತರಬೇತಿ ಆಯೋಜಕ ವೆಂಕಟೇಶ ಚನ್ನಗಿರಿ ಮತ್ತಿತರರು ಪಾಲ್ಗೊಂಡಿದ್ದರು.