ಅಧಿಕ ಡೊನೇಶನ್: ಆಕ್ರೋಶ
ಹೊಸನಗರ: ತಾಲೂಕಿನ ನಗರ ವಿದ್ಯಾಸಂಸ್ಥೆಯಿಂದ ಕಾಲೇಜು ಮತ್ತು ಪ್ರೌಢಶಾಲೆಗಳ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಾಗರಿಕರು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಯುಸಿಗೆ ಉಚಿತ ಪ್ರವೇಶ ಎಂದು ಗಲ್ಲಿ ಗಲ್ಲಿಗಳಲ್ಲಿ ಫ್ಲೆಕ್ಸ್ ಮೂಲಕ ಜಾಹೀರಾತು ಹಾಕಿದ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಪ್ರವೇಶ ಸಂದರ್ಭದಲ್ಲಿ ಬರೋಬ್ಬರಿ 6 ಸಾವಿರ ವಸೂಲಿ ಮಾಡಲಾಗುತ್ತಿದೆ. ಹೆಚ್ಚಿನ ಡೊನೇಶನ್ ವಸೂಲಿ ಮಾಡುವ ಹಾಗಿದ್ದರೆ ಉಚಿತ ಪ್ರವೇಶ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಆಕರ್ಷಿಸುವ ಅಗತ್ಯವೇನಿತ್ತು, ಸುಳ್ಳು ಪ್ರಚಾರ ನೀಡಿದ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ದಿಕ್ಕು ತಪ್ಪಿಸಿದೆ ಎಂದು ಆರೋಪಿಸಿದ್ದಾರೆ.
ಪಿಯುಸಿ ಪ್ರವೇಶಕ್ಕೆ ಎಸ್ಸಿ ಮತ್ತು ಹೆಣ್ಣುಮಕ್ಕಳಿಗೆ 161, ಒಬಿಸಿಗೆ 681, ಮತ್ತು ಸಾಮಾನ್ಯ ವಿದ್ಯಾರ್ಥಿಗಳಿಗೆ 1181 ಶುಲ್ಕ ನಿಗದಿ ಮಾಡಿದ್ದರೂ ಅದನ್ನು ಉಲ್ಲಂಘಿಸಿ 6 ಸಾವಿರ ವಸೂಲಿಗೆ ಮುಂದಾಗಿರುವ ಕ್ರಮವನ್ನು ಖಂಡಿಸಿದ್ದಾರೆ.
ಸಚಿವರ ಸೂಚನೆ: ನಗರಕ್ಕೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಆಗಮಿಸಿದ ಸಂದರ್ಭದಲ್ಲಿ ಹೈಸ್ಕೂಲು ವಿಭಾಗದಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ನೀಡಿದ ಪೋಷಕರು ತಮ್ಮ ಅಳಲು ತೋಡಿಕೊಂಡರು. ಶಾಲಾ ಮುಖ್ಯೋಪಾಧ್ಯಾಯರನ್ನು ಕರೆಸಿಕೊಂಡು ಸರ್ಕಾರ ನಿಗದಿಪಡಿಸಿದ ಶುಲ್ಕ ಪಡೆದು ಪ್ರವೇಶ ನೀಡಬೇಕು. ಇಲ್ಲವಾದಲ್ಲಿ ನನ್ನ ಗಮನಕ್ಕೆ ತನ್ನಿ ನಾನು ಬಗೆಹರಿಸುತ್ತೇನೆ ಎಂದು ಸೂಚಿಸಿದ್ದರು. ಆದರೆ, ಸಚಿವರ ಸೂಚನೆ ಧಿಕ್ಕರಿಸಿ ಹೆಚ್ಚಿನ ಶುಲ್ಕ ವಸೂಲಿ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರಿ ನಿಗದಿಪಡಿಸಿದ ದರದಂತೆ ಶುಲ್ಕ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಬೇಕಾಗುತ್ತದೆ. ವಿದ್ಯಾಸಂಸ್ಥೆ ದುಂಡಾವರ್ತನೆ ಮುಂದುವರಿಸಿ ಶುಲ್ಕಕ್ಕಾಗಿ ಮಕ್ಕಳಿಗೆ ಹಿಂಸೆ ನೀಡಿದಲ್ಲಿ ಮಕ್ಕಳ ಆಯೋಗಕ್ಕೆ ದೂರು ನೀಡಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಕರುಣಾಕರಶೆಟ್ಟಿ, ಕಮಲಾಕ್ಷ ನಗರ, ಕೇಶವ ಬೈಸೆ, ಶಂಕರನಾರಾಯಣ ಜೋಯ್ಸ್, ಚಂದ್ರಶೇಖರ ಶೆಟ್ಟಿ, ರಾಘು, ಕೆ.ಪಿ. ನಾಗರಾಜ್ ಮತ್ತಿತರರು ಎಚ್ಚರಿಸಿದ್ದಾರೆ.