ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಪರೇಷನ್ ಪುಂಡಾನೆ ಶುರು

Srinivasa Murthy VN
Updated On : 5 Jun 2014, 1:02 am

ಅರಣ್ಯ ಸಿಬ್ಬಂದಿಯನ್ನು ತ್ರಿಶಂಕು ಸ್ಥಿತಿಗೆ ತಂದ ಬನ್ನೇರುಘಟ್ಟದ ಕಾಡಾನೆ
-ವಿಶೇಷ ವರದಿ
ಅಮ್ಮನಗುಡ್ಡ (ಕುಕ್ಕವಾಡೇಶ್ವರಿ): ಒಂದು ಬಲಿ ತೆಗೆದುಕೊಂಡು ನಾಲ್ವರಿಗೆ ಗಂಭೀರವಾಗಿ ಘಾಸಿ ಮಾಡಿದ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆ ಬುಧವಾರ ಶಿವಮೊಗ್ಗ ವಲಯ ಅರಣ್ಯ ವ್ಯಾಪ್ತಿಯ ಕುಕ್ಕುವಾಡ- ಉಬ್ರಾಣಿ ಪ್ರದೇಶದ ಅಮ್ಮನಗುಡ್ಡದಲ್ಲಿ ನಡೆಯಿತು. ಆದರೆ, ಮೊದಲ ದಿನ ಅರಣ್ಯ ಇಲಾಖೆಯವರನ್ನು ಇನ್ನಿಲ್ಲದಂತೆ ಕಾಡಿದ ಆನೆ, ಕುರುಹುಗಳನ್ನು ಅಲ್ಲಲ್ಲಿ ತೋರ್ಪಡಿಸಿ ಕಣ್ಣಿಗೆ ಕಾಣದಂತೆ ನಾಪತ್ತೆಯಾಗಿ ತ್ರಿಶಂಕು ಸ್ಥಿತಿ ತಲುಪುವಂತೆ ಮಾಡಿತು.
ಹೊಳೆಹೊನ್ನೂರು ಭಾಗದ ದಾನವಾಡಿಯ ರುದ್ರೇಶ್ ಎಂಬವರನ್ನು ಬಲಿ ತೆಗೆದುಕೊಂಡ ಈ ಕಾಡಾನೆ, ಎರಡು ದಿನಗಳ ಹಿಂದಷ್ಟೇ ಮತ್ತೆ ನಾಲ್ವರಿಗೆ ಘಾಸಿಗೊಳಿಸಿ ಕಬ್ಬು, ಬಾಳೆ, ಅಡಕೆ ತೋಟಗಳನ್ನು ಹಾನಿಗೊಳಿಸಿ ಜನರಲ್ಲಿ ಭಯಹುಟ್ಟುವಂತೆ ಮಾಡಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆಯವರು ಈ ಆನೆ ಹಿಡಿಯುವ ಕಾರ್ಯಾಚರಣೆಗೆ ಕೈಹಾಕಿದರು.
ಸೋಮವಾರ ಮತ್ತು ಮಂಗಳವಾರ ಶಿವಮೊಗ್ಗ ಜಿಲ್ಲೆಯ ಗಡಿ ಭಾಗವಾದ ಯಡೇಹಳ್ಳಿ, ಕಲ್ಲಾಪುರ, ಸಾರಥಿ, ಹೊಸೂರು, ಕಾಡಂಚಿನಲ್ಲಿ ಈ ಆನೆ ಸುತ್ತಾಡಿದೆ. ಆದರೆ, ಮಂಗಳವಾರ ಮಧ್ಯಾಹ್ನದ ನಂತರ ಅದು ಜನರ ಕಣ್ಣಿಗೆ ಕಾಣಿಸಿಕೊಂಡಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಆನೆಯ ಹೆಜ್ಜೆಗುರುತು ಮತ್ತು ಲದ್ದಿಯ ಆಧಾರದ ಮೇಲೆ ಆನೆ ಹಿಡಿಯು ಕಾರ್ಯಾಚರಣೆ ಆರಂಭಿಸಿದರು.
ಬುಧವಾರ ಮುಂಜಾನೆ 3 ಗಂಟೆ ಸುಮಾರಿಗೆ ಜೋಳದಾಳು ಗ್ರಾಮದ ಮೂಲಕವಾಗಿ 45 ಸಾವಿರ ಎಕರೆ ವಿಶಾಲ ವ್ಯಾಪ್ತಿಯ ಅಮ್ಮನಗುಡ್ಡ ದಟ್ಟ ಅರಣ್ಯವನ್ನು ಪ್ರವೇಶ ಮಾಡಿದೆ. ತಕ್ಷಣವೇ ಅರಣ್ಯ ಇಲಾಖೆಯ 8 ಸಿಬ್ಬಂದಿಯ ತಂಡ ಕಾಡು ಸೇರಿ ಆನೆ ಹಿಂಬಾಲಿಸಿದೆ. ತನ್ನ ಹಿಂದೆ ಏನೋ ಷಡ್ಯಂತ್ರ ನಡೆಯುತ್ತಿರುವುದನ್ನು ಅರಿತ ಆ ಕಾಡಾನೆ ಬಹು ವೇಗದಿಂದ ಹೆಜ್ಜೆ ಹಾಕುತ್ತಾ ಸಾಗಿದೆ. ಬೆಳಗ್ಗೆ 9.30ರವರೆಗೆ ಕಾಣಿಸಿಕೊಂಡ ಆನೆ ನಂತರ ಏಕಾಏಕಿ ನಾಪತ್ತೆಯಾಗಿದೆ. ಈ ಮಧ್ಯೆ 9.30ಕ್ಕೆ ಪಶುವೈದ್ಯರು, ಸಿಬ್ಬಂದಿಯ ಮತ್ತೊಂದು ತಂಡ ಹೊರಟಿತು. ಅದೇ ರೀತಿ ಕಾಡಾನೆ ಕೆಡವಲು ಅಗತ್ಯವಾದ 5 ಆನೆಗಳೂ ಕಾಡಿನತ್ತ ಮುಖ ಮಾಡಿದವು. ಆದರೆ, ಯಾವುದೂ ಪ್ರಯೋಜನಕ್ಕೆ ಬಾರದಾಯಿತು. ಸಂಜೆ 6 ಗಂಟೆವರೆಗೆ ಹುಡುಕಾಡಿದರೂ ಪುಂಡಾನೆ ಮಾತ್ರ ಸಿಗಲೇ ಇಲ್ಲ. ಹೀಗಾಗಿ ಕಾಡಿನೊಳಗೆ ಹೋಗಿದ್ದ ಸಿಬ್ಬಂದಿ ತಂಡ ವಾಪಸ್ಸಾಯಿತು. ಕಾಡಿನಂಚಿನಲ್ಲಿ ಮಾರ್ಗದರ್ಶನ ಮಾಡುತ್ತಿದ್ದ ಅಧಿಕಾರಿಗಳ ತಂಡ ಬೇಸರದಿಂದ ಗುರುವಾರಕ್ಕೆ ಕಾರ್ಯಾಚರಣೆ ಮುಂದೂಡಿತು.
ಪಂಟರ್‌ಗೆ ಕೈಕೊಟ್ಟಿತು: ಮೈಸೂರಿನ ಸುಮಾರು 45 ಹರೆಯದ ಅಕ್ರಂ ಅರಣ್ಯ ಇಲಾಖೆ ಪಾಲಿಕೆ ಆನೆ ಹಿಡಿಯುವ ಪಂಟರ್. ಆನೆ ವಿಚಾರದಲ್ಲಿ ಧೈರ್ಯಶಾಲಿ ಎಂದು ಕರೆಸಿಕೊಳ್ಳುವ ಅಕ್ರಂ ನೇತೃತ್ವದಲ್ಲಿ ಮಾವುತರು, ಫಾರೆಸ್ಟರ್, ಗಾರ್ಡ್ ಇರುವ ತಂಡ ಬುಧವಾರ ಕಾರ್ಯಾಚರಣೆಗಿಳಿದಿತ್ತು. ಆದರೆ, ಕಾಡಾನೆ ಮಾತ್ರ ಈ ತಂಡಕ್ಕೆ ಕುರುಹುಗಳನ್ನಷ್ಟೇ ಕೊಡುತ್ತಾ ತಾನು ಮಂಗಮಾಯವಾಯಿತು.
ಸಕಲ ಸಿದ್ಧತೆ: ಬುಧವಾರ ಬೆಳಗ್ಗೆ ಜೋಳದಾಳ್ ಗ್ರಾಮದಲ್ಲಿ ಆನೆ ಹಿಡಿಯುವ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಂಗಳವಾರ ಸಂಜೆಯೇ ಎರಡು ಆನೆಗಳನ್ನು ಇಲ್ಲಿಗೆ ತರಲಾಗಿತ್ತು. ಉಳಿದವನ್ನು ಬುಧವಾರ ಬೆಳಗ್ಗೆ ಇಲ್ಲಿಗೆ ತರಲಾಯಿತು. ಸಕ್ರೆಬೈಲಿನ ಇಂದಿರಾ, ಗಂಗೆ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿವೆ. ಉಳಿದಂತೆ ಹರ್ಷ, ಗೋಪಾಲಸ್ವಾಮಿ, ವಿಕ್ರಮ್ ಸಹ ಜತೆಗಿವೆ. ಇವುಗಳಲ್ಲಿ ದುಬಾರೆಯ ಎರಡು ಆನೆ ಸೇರಿವೆ. ದಾಂಡೇಲಿಯಿಂದ ಎರಡು ಆನೆ ತರಿಸಲಾಗಿದ್ದು, ಅವನ್ನು ಸಕ್ರೆಬೈಲಿನಲ್ಲಿ ಇರಿಸಲಾಗಿದೆ.
ಅದೇ ರೀತಿ ಪಶು ವೈದ್ಯರು, ಮಂಪರು ಬರುವ ಔಷಧಿ, ಎರಡು ಗನ್, ಆನೆಗೆ ಬಳಸಲು ಒಂದು ಟ್ಯಾಂಕರ್ ನೀರನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ.
ಇದು ಬನ್ನೇರುಘಟ್ಟದ ಆನೆ: ಇಷ್ಟು ದಿನಗಳವರೆಗೆ ಕಬ್ಬಿನಗದ್ದೆ, ತೋಟಗಳಲ್ಲಿ ಇದ್ದ ಆನೆ ಜನರ ಭಯದಿಂದ ಕಾಡನ್ನು ಸೇರಿದೆ. ಕಾಡು ವಿಶಾಲ ಮತ್ತು ದಟ್ಟವಾಗಿರುವುದರಿಂದ ಆನೆ ಹಿಡಿಯುವುದು ಅಷ್ಟು ಸುಲಭದ ಮಾತಲ್ಲ ಎಂದು ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡುತ್ತಿರುವ ಹಿರಿಯ ಅಧಿಕಾರಿ ರವಿಕುಮಾರ್ ವಿವರಿಸುತ್ತಾರೆ.
ಸುಮಾರು 15ರಿಂದ 18 ವರ್ಷ ವಯಸ್ಸಿನ ಈ ಆನೆ ಬನ್ನೇರುಘಟ್ಟ ಅರಣ್ಯದ್ದೆಂದು ಅಂದಾಜಿಸಲಾಗಿದೆ. ಸೋಮವಾರ ಆನೆಯನ್ನು ಕಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಅದರ ಚಹರೆಯನ್ನು ಇಲಾಖೆಗೆ ರವಾನಿಸಿದ್ದು, ಬನ್ನೇರುಘಟ್ಟದಿಂದ ಇದು ತಮ್ಮ ವ್ಯಾಪ್ತಿಗೆ ಸೇರಿದಂತಹ ಆನೆ ಎಂದು ಖಚಿತಪಡಿಸಿದ್ದಾರೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಬನ್ನೇರಘಟ್ಟದಿಂದ ಇಲ್ಲಿಗೆ ಹೇಗೆ ಬಂತೆಂಬ ಪ್ರಶ್ನೆಗೆ, ಆನೆ ಹಂತ- ಹಂತವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶ ಹಾದು ಇಲ್ಲಿಗೆ ಬಂದಿರುವ ಸಾಧ್ಯತೆ ಇದೆ ಎಂದು ಉತ್ತರಿಸುತ್ತಾರೆ. ಕಾರ್ಯಾಚರಣೆ ಮುಂದುವರಿಯುತ್ತದೆ, ಇಲ್ಲಿ ಹಿಡಿದ ಆನೆಯನ್ನು ಬನ್ನೇರುಘಟ್ಟಕ್ಕೆ ರವಾನಿಸುವ ಉದ್ದೇಶವಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕಾಡಿನೊಳಗೆ ನುಗ್ಗಿರುವ ಆನೆ ಬಹಳ ವೇಗವಾಗಿ ಚಲಿಸುತ್ತಿದೆ. ಅದನ್ನು ಟ್ರ್ಯಾಕ್ ಮಾಡುವುದು ಕಷ್ಟವಾಗುತ್ತಿದೆ. ನಮ್ಮ ತಂಡದವರು ಸಾಕಷ್ಟು ಪ್ರಯತ್ನ ನಡೆಸಿದರು. ಒಂದು ದಿನದಲ್ಲಿ ಸುಮಾರು 25 ಕಿಲೋಮೀಟರ್‌ಗಿಂತ ಹೆಚ್ಚು ಚಲಿಸಿದೆ. ಗುರುವಾರ ಅದು ಎಲ್ಲಿದೆ ಎಂದು ಹುಡುಕಿ ಕಾರ್ಯಾಚರಣೆ ಆರಂಭಿಸುತ್ತೇವೆ.
-ಮಂಜುನಾಥ್, ಡಿಎಫ್‌ಒ, ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement