ಕರಗ ಕಟ್ಟುವ ಕಾರ್ಯಕ್ರಮ 9ರಂದು
ಭದ್ರಾವತಿ: ಪಟ್ಟಣದ ಬಿ.ಎಚ್.ರಸ್ತೆಯ 7ನೇ ತಿರುವಿನಲ್ಲಿರುವ ವಿಶ್ವಸ್ವರೂಪಿಣಿ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸೋಮವಾರ ಗಂಗಾಪೂಜೆ, ಕಂಕಣ ಧಾರಣ ಮತ್ತು ದೇವತಾ ಕಾರ್ಯಗಳ ಮೂಲಕ ಪ್ರಾರಂಭವಾಗಲಿದ್ದು, ಮಂಗಳವಾರ ಬೆಳಗ್ಗೆ ಕರಗ ಕಟ್ಟುವ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ. ಜೂ.10ರ ಮಂಗಳವಾರ ಬೆಳಗ್ಗೆ 9.30ಕ್ಕೆ ಕರಗ ಕಟ್ಟುವುದು, 10.30ಕ್ಕೆ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ನಡೆಯುವುದು. ಮಧ್ಯಾಹ್ನ 1.30ಕ್ಕೆ ದೇವಿಗೆ ಅಂಬಲಿ ಹೊಯ್ಯುವ ಕಾರ್ಯಕ್ರಮ ನಡೆಯುವುದು. ನಂತರ ತೀರ್ಥಪ್ರಸಾದ ವಿನಿಯೋಗವಾಗುವುದು. ಸಂಜೆ 8.30ಕ್ಕೆ ಅಮ್ಮನವರ ಕರಗಕ್ಕೆ ಓಕಳಿ ಆಡಿದ ನಂತರ ಭದ್ರಾ ನದಿಯಲ್ಲಿ ವಿಸರ್ಜಿಸಲಾಗುವುದು. ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಾಲಯ ಸಮಿತಿ ಕೋರಿದೆ.
ಅಧ್ಯಕ್ಷರಾಗಿ ಕೇಶವಮೂರ್ತಿ
ಶಿವಮೊಗ್ಗ: ಪ್ರವಾಸಿ ಕಾರಿನ ಚಾಲಕರ ಸಂಘದ ಅಧ್ಯಕ್ಷರಾಗಿ ಜಿ. ಕೇಶವಮೂರ್ತಿ ಆಯ್ಕೆಯಾಗಿದ್ದಾರೆ. ನಗರದಲ್ಲಿ ನಡೆದ ಸಂಘದ ಪದಾಧಿಕಾರಿ ಸಭೆಯಲ್ಲಿ 2014-15ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ನಾದನ್, ಉಪಾಧ್ಯಕ್ಷರಾಗಿ ರವಿ ಕೋಣೆಗದ್ದೆ, ಪ್ರಧಾನ ಕಾರ್ಯದರ್ಶಿಯಾಗಿ ಸಂದೇಶ್ ಕೆ.ಈ., ಸಹಕಾರ್ಯದರ್ಶಿಯಾಗಿ ರವೀಂದ್ರ ಇ., ಖಜಾಂಚಿಯಾಗಿ ನರಸಿಂಹಮೂರ್ತಿ ಜಿ. ಹಾಗೂ 9 ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.
ಗಾಡ್ಗಿಳ್ ವರದಿ ಜಾರಿಗೆ ಒತ್ತಾಯ
ಶಿವಮೊಗ್ಗ: ಪಶ್ಚಿಮ ಘಟ್ಟ ಪರಿಸರ ಸಂರಕ್ಷಣಾ ಹೋರಾಟ ವೇದಿಕೆಯು ಪ್ರೊ. ಮಾಧವ ಗಾಡ್ಗಿಳ್ ವರದಿ ಜಾರಿಗೆ ಒತ್ತಾಯಿಸಿ ಜೂ.5 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3ಗಂಟೆ ವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದೆ. ಸರ್ಕಾರ ಪಶ್ಚಿಮ ಘಟ್ಟ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗೇಶ್ ಅಂಗಿರಸ ಒತ್ತಾಯಿಸಿದ್ದಾರೆ.
ಶಿವಮೊಗ್ಗ ತಾಪಂ ಸಾಮಾನ್ಯ ಸಭೆ ನಾಳೆ
ಶಿವಮೊಗ್ಗ: ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕಮಲಮ್ಮ ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಜೂ.6ರಂದು ಬೆಳಗ್ಗೆ 11 ಗಂಟೆಗೆ ಸಾಮರ್ಥ್ಯ ಸೌಧದಲ್ಲಿ ತಾಪಂ ಸಾಮಾನ್ಯ ಸಭೆ ನಡೆಯಲಿದೆ. ತಾಪಂ ಸದಸ್ಯರು ಸಕಾಲದಲ್ಲಿ ಆಗಮಿಸಿ, ಸುಗಮ ಕಲಾಪದಲ್ಲಿ ಭಾಗವಹಿಸುವಂತೆ ಕೋರಿದೆ.
ಯಶಸ್ವಿನಿ ಯೋಜನೆ: ನೋಂದಣಿಗೆ ಅವಕಾಶ
ಶಿವಮೊಗ್ಗ: ಸಹಕಾರ ಇಲಾಖೆಯು ಯಶಸ್ವಿನಿ ಸಹಕಾರ ಆರೋಗ್ಯ ರಕ್ಷಣಾ ಯೋಜನೆಯಡಿ ಸದಸ್ಯರನ್ನು ನೋಂದಾಯಿಸಲು ನಿಗದಿಪಡಿಸಿದ್ದ ದಿನಾಂಕವನ್ನು ಜು.15ರ ವರೆಗೆ ವಿಸ್ತರಿಸಿದೆ. ಇದರೊಂದಿಗೆ ಯಶಸ್ವಿನಿ ಯೋಜನೆಯ ಮಾರ್ಗಸೂಚಿಗಳಲ್ಲಿನ ಕೆಲವು ನಿಬಂಧನೆಗಳನ್ನು ಸಡಿಲಗೊಳಿಸಿ ನೋಂದಣಿಗೆ ಅವಕಾಶ ಕಲ್ಪಿಸಿದೆ. ಅದರಂತೆ ಸದಸ್ಯತ್ವ ನೋಂದಾಯಿಸುವ ಗರಿಷ್ಠ ವಯಸ್ಸಿನ ಮಿತಿಯನ್ನು ತೆಗೆದುಹಾಕಲಾಗಿದ್ದು, ನವಜಾತ ಶಿಶುವಿನಿಂದ ಜೀವಿತಾವಧಿಯವರೆಗಿನವರು ಸೌಲಭ್ಯ ಪಡೆಯಬಹುದಾಗಿದೆ. 2014-15ನೇ ಸಾಲಿನಿಂದ ನಗರ ಸಹಕಾರಿ ಆರೋಗ್ಯ ರಕ್ಷಣೆ ಜಾರಿಗೊಳಿಸಿದ್ದು, ಈ ಯೋಜನೆಯಡಿ ನೋಂದಾಯಿಸುವ ಪ್ರತಿಯೊಬ್ಬ ಸದಸ್ಯರ ವಾರ್ಷಿಕ ವಂತಿಕೆ 1,010 ಬದಲಿಗೆ 710 ಎಂದು ನಿಗದಿಪಡಿಸಿದೆ. ಪರಿಶಿಷ್ಟ ಜಾತಿ ಪಂಗಡದವರಿಗೆ ವಂತಿಕೆ 810 ಬದಲು 500 ನಿಗದಿಪಡಿಸಿದೆ. ಅರ್ಹ ನಗರ, ಗ್ರಾಮೀಣ ಪ್ರದೇಶದ ಸಹಕಾರಿಗಳು ಯೋಜನೆಗಳ ಲಾಭ ಪಡೆಯಲು ಸಹಕಾರ ಸಂಘಗಳ ಉಪನಿಬಂಧಕರಾದ ಡಾ. ಸುನೀತಾ ಸಿದ್ರಾಮ್ ತಿಳಿಸಿದ್ದಾರೆ.