ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಾಜ್ಯ ಸರ್ಕಾರ 'ಕ್ರೈಂ ಭಾಗ್ಯ' ಯೋಜನೆ ಸ್ಥಾಪಿಸಲಿ: ರವಿ

Srinivasa Murthy VN
Updated On : 8 Jun 2014, 1:05 am

ಶಿವಮೊಗ್ಗ: ಇತ್ತೀಚೆಗೆ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಆರೋಪಿ ಕುಟುಂಬಕ್ಕೆ ಸರ್ಕಾರ 10 ಲಕ್ಷ ಪರಿಹಾರ ಕೊಟ್ಟಿದ್ದು ಕೋಮು ಕಾರಣಕ್ಕೆ, ಸರ್ಕಾರದವರು ಕ್ರೈಂ ಭಾಗ್ಯ ಎಂಬ ಹೊಸ ಯೋಜನೆ ಸ್ಥಾಪಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಸಮಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ಇನ್ನೂ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಸಮಾಜ ಒಡೆಯುವ ಕೆಲಸಕ್ಕೆ ಅದು ಕೈಹಾಕುತ್ತಿದೆ. ಶಾದಿ ಭಾಗ್ಯ, ಪ್ರವಾಸ ಭಾಗ್ಯ ಮುಂತಾದ ಹಲವು ಯೋಜನೆಗಳು ಜಾತಿ ಆಧಾರದಲ್ಲಿ ಮೂಡಿವೆ. ಪೊಲೀಸ್ ಇಲಾಖೆಯಲ್ಲೂ ಇದು ವಿಸ್ತಾರವಾಗಿದೆ. ಕೋಮುವಾದಿಗಳು ಎಂದು ನಮ್ಮನ್ನು ಕರೆಯುವ ಇವರು ಈಗ ಮಾಡುತ್ತಿರುವುದು ಅದನ್ನೆ ಎಂದು ಟೀಕಿಸಿದರು.
ಬಿಜೆಪಿಗೆ ಮುಂದೆ ಉತ್ತಮ ಭವಿಷ್ಯವಿದೆ. ಕಾರ್ಯಕರ್ತರು ರಾಜ್ಯದಲ್ಲಿ ಬಿಜೆಪಿ ಸಾಮ್ರಾಜ್ಯವನ್ನು ಮತ್ತೊಮ್ಮೆ ವಿಸ್ತರಿಸಬೇಕಾಗಿದೆ ಎಂದು ಕರೆ ನೀಡಿದ ಅವರು, ಮುಂಬರುವ ನಗರಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹೀಗೆ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಗಳನ್ನು ಬಿಜೆಪಿ ಹಿಡಿಯುವ ಮೂಲಕ ತಳಪಾಯ ಬಿಗಿಗೊಳಿಸಬೇಕಾಗಿದೆ ಎಂದರು.
ಇಚ್ಛಾಶಕ್ತಿ: ಮೋದಿ ಎಲ್ಲರ ಇಚ್ಛೆಯಂತೆ ಪ್ರಧಾನಿಯಾಗಿದ್ದಾರೆ. ಅವರು ಇಡುವ ಪ್ರತಿಯೊಂದು ಹೆಜ್ಜೆಯೂ ದೇಶ ಕಟ್ಟುವ ಉತ್ಸಾಹದಲ್ಲಿದೆ. ಅವರು ಇಡುವ ಹೆಜ್ಜೆಗಳಲ್ಲಿ ಸದಾ ಹೊಸತು ಕಾಣುತ್ತಿದೆ ಎಂದು ಹೇಳಿದ ಅವರು, ದೇಶ ಕಟ್ಟಲು ಬಹುಮತವೊಂದಿದ್ದರೆ ಸಾಲದು, ಇಚ್ಛಾಶಕ್ತಿಯೂ ಬೇಕು ಎಂಬ ಮಹತ್ವಾಕಾಂಕ್ಷಿಯುಳ್ಳ ಮೋದಿ ಸಂಸತ್‌ಗೆ ಪ್ರವೇಶ ಮಾಡುವ ಮುನ್ನ ಶಿರಬಾಗಿ ನಮಸ್ಕರಿಸಿ ಭಾರತದ ಸಾಂಸ್ಕೃತಿಕ ಹಿರಿಮೆ ಎತ್ತಿ ತೋರಿಸಿದ್ದಾರೆ ಎಂದು ಹೇಳಿದರು.
ಮೋದಿ ಪ್ರಧಾನಿಯಾದರೆ ಬಹಳ ಕಷ್ಟ ಎಂದು ಅನೇಕರು ಹೇಳುತ್ತಿದ್ದರು. ಆದರೆ, ಇಂದು ಅದೇ ವಿರೋಧಿಗಳು ಮೋದಿಯ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ, ರ್ಜನಪೀಠ ಪ್ರಶಸ್ತಿ ಪಡೆದವರೂ ಕೂಡ ಮೋದಿಯವರ ಹೆಜ್ಜೆಗಳನ್ನು ಗೌರವಿಸುವಷ್ಟರ ಮಟ್ಟಿಗೆ ಅವರ ನಡೆ ಇದೆ ಎಂದರು.
ಕಾಂಗ್ರೆಸ್ ಮುಕ್ತ ಭಾರತ: ಬಿಜೆಪಿಯ ಪ್ರಮುಖ ಗುರಿ ಎಂದರೆ ಕಾಂಗ್ರೆಸ್ ಮುಕ್ತ ಭಾರತ. ಅಂದರೆ ಕಾಂಗ್ರೆಸ್‌ಅನ್ನು ನಿರ್ನಾಮಗೊಳಿಸುವುದು ಎಂದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ನ ಮನಸ್ಸು ಮಲಿನತೆಯಿಂದ- ಭ್ರಷ್ಟಾಚಾರದಿಂದ ಕೂಡಿದೆ. ಕಾಂಗ್ರೆಸ್ ಮುಕ್ತ ಎಂದರೆ ಭ್ರಷ್ಟಾಚಾರ ಮುಕ್ತ, ಬೆಲೆ ಏರಿಕೆ ಮುಕ್ತ ಎಂದರು.
ಶಿಕಾರಿಪುರದಲ್ಲಿ ಗೆಲ್ಲೋಣ: ಶಿಕಾರಿಪುರದಲ್ಲಿ ವಿಧಾನಸಭಾ ಚುನಾವಣೆ ಸದ್ಯದಲ್ಲಿಯೇ ಎದುರಾಗಲಿದೆ. ಅಲ್ಲಿ ಬಿಜೆಪಿಯನ್ನು ಅತ್ಯಂತ ಹೆಚ್ಚು ಮತಗಳಿಂದ ಗೆಲ್ಲಿಸಬೇಕಾಗಿದೆ ಎಂದು ಸಿಟಿ ರವಿ ಹೇಳಿದರು.
ಯಡಿಯೂರಪ್ಪನವರನ್ನು ಕ್ಷೇತ್ರದಲ್ಲಿ 3.65 ಲಕ್ಷ ಮತಗಳಿಂದ ಹೇಗೆ ಗೆಲ್ಲಿಸಿದರೋ ಹಾಗೆಯೇ ಇಲ್ಲೂ ಕೂಡ 60 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ಲಬೇಕಾಗಿದೆ. ಅಲ್ಲಿ ಬಿಜೆಪಿ ಮತಗಳ ಅಣೆಕಟ್ಟು ಕಟ್ಟೋಣ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಆಯನೂರು ಮಂಜುನಾಥ್, ಮಾಜಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಕೆ.ಜಿ. ಕುಮಾರಸ್ವಾಮಿ, ಪ್ರಮುಖರಾದ ಗಿರೀಶ್ ಪಟೇಲ್, ಎನ್. ಜೆ. ರಾಜಶೇಖರ್, ದತ್ತಾತ್ರಿ, ದೇವದಾಸ್ ನಾಯಕ್, ಮಹದೇವಪ್ಪ, ಲಕ್ಷ್ಮಣ್, ಮಂಜುನಾಥ್, ನಟರಾಜ್, ರಾಮಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement