ಸಭೆಗೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ
ತೀರ್ಥಹಳ್ಳಿ: ಹಲವಾರು ಕಚೇರಿ ಪತ್ರಗಳಿಗೆ ಉತ್ತರ ನೀಡದೆ, ಸಭೆಗೂ ಹಾಜರಾಗದೇ ಇರುವ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಿ, ಅಮಾನತುಗೊಳಿಸಿ ಎಂದು ಸಚಿವ ಕಿಮ್ಮನೆ ರತ್ನಾಕರ್ ಸೂಚಿಸಿದರು.
ತಾಲೂಕಿನ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಣ್ಣನೀರಾವರಿ ನಿಗಮ, ನಿರ್ಮಿತಿ ಕೇಂದ್ರ ಹಾಗೂ ಕೆಡಿಎಸ್‌ಆರ್‌ಪಿ ಸಂಸ್ಥೆಗಳು ತಾಲೂಕಿನಲ್ಲಿ ಹಲವಾರು ಕಾಮಗಾರಿ ನಡೆಸಿದ್ದು, ಕಳಪೆ ಗುಣಮಟ್ಟದ್ದಾಗಿದೆ ಎಂದು ತಾಪಂ ಸದಸ್ಯ ಕೆಸ್ತೂರು ಮಂಜುನಾಥ್ ಸಭೆಯ ಗಮನಕ್ಕೆ ತಂದರು.
ಆಗ ಕಳಪೆ ಕಾಮಗಾರಿಯಾಗಿದ್ದರೆ ಸಂಬಂಧಿಸಿದ ಅಧಿಕಾರಿಯ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಚಿವರು ತಿಳಿಸಿದರು.
ಮಂಗನ ಕಾಯಿಲೆ: ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ತಾಲೂಕಿನಲ್ಲಿ ಇದುವರೆಗೂ 116 ರೋಗಿಗಳಲ್ಲಿ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಈ ಕಾಯಿಲೆಯಿಂದ ಒಬ್ಬರು ಮೃತಪಟ್ಟಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು. ಮಂಗನ ಕಾಯಿಲೆಯ ರಕ್ತ ತಪಾಸಣಾ ಕೇಂದ್ರವನ್ನು ಶಿವಮೊಗ್ಗದಲ್ಲಿಯೇ ತೆರೆಯಬೇಕು, ಇದಕ್ಕೆ ನೀಡುವ ಲಸಿಕೆಯನ್ನು ಮುಂಗಡವಾಗಿಯೇ ದಾಸ್ತಾನು ಮಾಡಿಕೊಳ್ಳಬೇಕು ಎಂದು ಹೇಳಿದರು. ಮಂಗನ ಕಾಯಿಲೆ ಪೀಡಿತ ಪ್ರದೇಶದ ಗ್ರಾಮಸ್ಥರು ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದು, ಗ್ರಾಮಸ್ಥರು ಲಸಿಕೆ ತೆಗೆದುಕೊಳಅಳುವಂತೆ ಮನವೊಲಿಸಬೇಕು ಎಂದು ಸಚಿವರು ಹೇಳಿದರು.
ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಸೊಳ್ಳೆಕಾಟ ವಿಪರೀತವಾಗಿದ್ದು, ಪ್ರತಿ ಮಂಚಕ್ಕೂ ಸೊಳ್ಳೆಪರದೆ ಅಳವಡಿಸುವ ಬಗ್ಗೆ ಕ್ರಮತೆಗೆದುಕೊಳ್ಳಲು ಸೂಚಿಸಿದರು.
ಕಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಚ್. ಭಾಗ್ಯಕ್ಷ್ಮಿ, ತಹಸೀಲ್ದಾರ್ ಅಹೋಬಲಯ್ಯ, ಬಾಳೇಹಳ್ಳಿ ಪ್ರಭಾಕರ್, ತಾಪಂ ಅಧ್ಯಕ್ಷ ಹೊಸಳ್ಳಿ ಸುಧಾಕರ್ ಭಾಗವಹಿಸಿದ್ದರು. ಜಿಪಂ ಸದಸ್ಯರದ ಶೃತಿ ವೆಂಕಟೇಶ್, ಹಾರೊಗೊಳಿಗೆ ಪದ್ಮನಾಭ, ಡಾ. ಸುಂದರೇಶ್, ನಾಗರಾಜಶೆಟ್ಟಿ, ಜಿ.ಎಸ್. ನಾರಾಯಣ ರಾವ್ ಮತ್ತು ಇಲಾಖೆ ಅಧಿಕಾರಿಗಳು ಹಾಜರಿದ್ದರು.