ಸಂಕಟಕ್ಕೆ ಸಿಲುಕಿದ ಶುಂಠಿ ಬೆಳೆಗಾರ
ತ್ಯಾಗರ್ತಿ: ಇಲ್ಲಿಗೆ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬಿತ್ತನೆ ಮಾಡಿದ ಶುಂಠಿ ಬೀಜ ಮೊಳಕೆಯೊಡೆಯುತ್ತಿದ್ದಂತೆ ಕರಗಿ ಹೋಗಿದ್ದು, ರೈತರು ಕಂಗಾಲಾಗುವಂತಾಗಿದೆ.
ಶುಂಠಿ ಬೆಳೆ ಉತ್ತಮವಾಗಿ ಬರುತ್ತದೆ ಎಂದು ಖಾಸಗಿ ಗೊಬ್ಬರ ಕಂಪನಿ ಪ್ರಚಾರಕರ ಮೋಡಿಗೆ ರೈತರು ಬಲೆ ಬಿದ್ದು ಆ ಗೊಬ್ಬರ ಬಳಸಿದ್ದಾರೆ. ಇದೀಗ ತಮ್ಮ ಹೊಲದ ಶುಂಠಿ ಬೆಳೆ ಹಾಳಾಗಲು ಈ ಗೊಬ್ಬರವೇ ಕಾರಣವಾಗಿದ್ದು ಈ ಗೊಬ್ಬರ ಕಂಪನಿ ವಿತರಕರು ಮತ್ತು ಪ್ರಚಾರಕರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೈದರಾಬಾದ್ ಮೂಲದ ಕಂಪನಿಯ ಗೊಬ್ಬರವನ್ನು ಹಲವು ರೈತರು ಖರೀದಿಸಿ ಕೃಷಿಗೆ ಬಳಸಿದ್ದು ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ದನದ ಗೊಬ್ಬರದಂತೆ ಫಲವತ್ತಾಗಿರುತ್ತದೆ. ಶುಂಠಿ ಬೀಜ ನೆಡುವಾಗ ಬೀಜದ ಮೇಲೆ ಸರಾಸರಿ 100 ಗ್ರಾಂನಷ್ಟು ಹಾಕಬೇಕು ಎಂದು ಕಂಪನಿಯ ಪ್ರಚಾರಕರು ತಿಳಿಸಿದ್ದರು. ಮೇ ತಿಂಗಳ 2ನೇ ವಾರದಲ್ಲಿ ಕಂಪನಿಯ ಪ್ರಚಾರಕರು ಗೊಬ್ಬರದ ಸ್ಯಾಂಪಲ್ ತಂದು ರೈತರ ಮನೆ ಮನೆಗೆ ಓಡಾಡಿ ಪ್ರಚಾರ ನಡೆಸಿದ್ದರು.
ಕಳೆದ ಸಾಲಿನಲ್ಲಿ ಈ ಗೊಬ್ಬರ ಬಳಸಿ ಬಂಪರ್ ಫಸಲು ಪಡೆದ ರೈತರ ಬಗ್ಗೆ ಕಥೆ ಹೇಳಿ ನಂಬಿಸಿದ್ದರು. ಅವರ ಮಾತಿಗೆ ಮರುಳಾಗಿ ಐಗಿನಬೈಲು, ಚೆನ್ನಶೆಟ್ಟಿಕೊಪ್ಪ, ಹೊಸೂರು, ಜಂಬೆಕೊಪ್ಪ, ಬ್ಯಾಡರಕೊಪ್ಪ, ಜಂಬೂರಮನೆ, ಹೊಸಗುಂದ ಭಾಗಗಳ ಸುಮಾರು 50ಕ್ಕೂ ಹೆಚ್ಚು ರೈತರು ಈ ಗೊಬ್ಬರ ಖರೀದಿಸಿದ್ದರು. ಜೂನ್ ಆರಂಭದಲ್ಲಿ ಶುಂಠಿ ಕೃಷಿ ಕೈಗೊಂಡು ಈ ಗೊಬ್ಬರ ಬಳಸಿದ್ದರು. ಇದೀಗ ಮೊಳಕೆಯಲ್ಲಿಯೇ ಶುಂಠಿ ಕರಗಿ ಹೋಗಿ ಬೆಳೆ ಬಾರದಂತಾಗಿದೆ. ಈಗ ಹಲವು ರೈತರ ಶುಂಠಿ ಹೊಲ ಮೊಳಕೆಯಿಲ್ಲದೆ ಒಣಗಿನಿಂತಿದೆ. 40 ಕಿ.ಗ್ರಾಂ ತೂಕದ ಈ ಗೊಬ್ಬರಕ್ಕೆ ರು. 699 ನಂತೆ ವಿತರಕರು ಮಾರಾಟ ಮಾಡಿದ್ದರು. ರೈತರ ಮನೆ ಬಾಗಿಲಿಗೇ ಗೊಬ್ಬರ ವಿತರಿಸಿದ ಕಾರಣ ಯಾವ ರೈತರಿಗೂ ರಶೀದಿ ಕೊಟ್ಟಿಲ್ಲ. ಕೆಲ ರೈತರು 10ರಿಂದ 20ಚೀಲದ ವರೆಗೂ ಸಹ ಈ ಗೊಬ್ಬರ ಖರೀದಿಸಿ ಕೃಷಿ ನಡೆಸಿದ್ದಾರೆ. ಕ್ವಿಂಟಾಲ್ ಒಂದಕ್ಕೆ ರು. 10 ಸಾವಿರ ಶುಂಠಿ ಬೀಜ ಖರೀದಿಸಿ, ದುಬಾರಿ ಕೂಲಿ ನೀಡಿ, ಕೊಳವೆ ಬಾವಿ ಅಥವಾ ತೆರೆದ ಬಾವಿಗೆ ಮೋಟಾರು ಅಳವಡಿಸಿ, ನೀರಾವರಿ ವ್ಯವಸ್ಥೆ ರೂಪಿಸಿಕೊಂಡು ಅತ್ಯಧಿಕ ಹಣ ವೆಚ್ಚ ಮಾಡಿದ ರೈತರು ಈಗ ಮೊಳಕೆ ಬಾರದೆ ಒಣಗುತ್ತಿರುವ ಶುಂಠಿ ಹೊಲವನ್ನು ನೋಡಿ ಕಣ್ಣೀರು ಹಾಕುವ ಪರಿಸ್ಥಿತಿ ಉಂಟಾಗಿದೆ. ಗೊಬ್ಬರ ವಿತರಣೆ ಮಾಡಿದ ಏಜೆಂಟರಿಗೆ ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದರೆ ಸ್ವಿಚ್ ಆಫ್ ಎಂಬ ಪ್ರತಿಕ್ರಿಯೆ ಬರುತ್ತಿದ್ದು ರೈತರು ಇನ್ನಷ್ಟು ಕಂಗಾಲಾಗುವಂತೆ ಮಾಡಿದೆ. ಈ ಕಂಪನಿಯ ಗೊಬ್ಬರ ಬಳಕೆಯಿಂದ ತಮಗೆ ಮೋಸವಾಗಿದ್ದು ತಮಗೆ ನ್ಯಾಯ ಒದಗಿಸಿಕೊಡುವಂತೆ ಆನಂದ, ಎಸ್.ಅರ್.ನಾಗಪ್ಪ ಚೆನ್ನಶೆಟ್ಟಿಕೊಪ್ಪ, ದಿನೇಶ ಐಗಿನಬೈಲು, ದುರ್ಗಪ್ಪ, ಗಾಳಿಪುರ ಮಂಜಪ್ಪ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.