ಕೈಮಗ್ಗ ಉಡುಪು ಜಾಗೃತಿ ಮೂಡಿಸಿ
ಸಾಗರ: ಚರಕ ಗ್ರಾಮೀಣ ಹೆಣ್ಣುಮಕ್ಕಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಚರಕ ಗ್ರಾಮೀಣ ಉದ್ಯೋಗದಿಂದಾಗಿ ಸಾವಿರಾರು ಹೆಣ್ಣುಮಕ್ಕಳು, ಕುಶಲಕರ್ಮಿಗಳು ಹೊಟ್ಟೆತುಂಬ ಊಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಗಮಿತ್ರ ಗಾಡೇಕರ್ ಹೇಳಿದರು.
ತಾಲೂಕಿನ ಹೊನ್ನೇಸರದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ನವದೆಹಲಿ ರಾಷ್ಟ್ರೀಯ ನಾಟಕ ಶಾಲೆ ಹಾಗೂ ಭೀಮನಕೋಣೆ ಚರಕ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಚರಕ ಉತ್ಸವವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗೃತಿ ಮೂಡಿಸಿ: ಕೈಮಗ್ಗದಿಂದ ತಯಾರಿಸುವ ಬಟ್ಟೆಯನ್ನು ನಗರ ಹಾಗೂ ಗ್ರಾಮಗಳಲ್ಲಿ ಧರಿಸುವ ಸಂಸ್ಕೃತಿ ಬೆಳೆಸಬೇಕಾಗಿದೆ. ಥಾಯ್‌ಲ್ಯಾಂಡ್ ಹಾಗೂ ಇಂಡೋನೀಷಿಯಾದಲ್ಲಿ ಬೆರಳೆಣಿಕೆಯಷ್ಟು ನೇಕಾರರು ಇದ್ದಾರೆ. ಆ ದೇಶಗಳ ಜನರಲ್ಲಿ ಖಾದಿ ಬಟ್ಟೆಯ ಬಗ್ಗೆ ನೇಕಾರರು ಜಾಗೃತಿ ಮೂಡಿಸಿದ್ದರಿಂದ ಅವರು ಖಾದಿ ತೊಡುವತ್ತ ಒಲವು ತೋರಿದ್ದಾರೆ. ಭಾರತದಲ್ಲಿ ಲಕ್ಷಾಂತರ ನೇಕಾರರು ಇದ್ದರೂ ನಮ್ಮಲ್ಲಿ ಖಾದಿಯ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಎಲ್ಲೋ ವಿಫಲವಾಗುತ್ತಿದ್ದೇವೆ ಎಂದರು.
ಕಳೆದ ನಾಲ್ಕು ದಶಕಗಳಲ್ಲಿ ನೂಲುವ ಕೆಲಸ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನೇಕಾರಿಕೆ ನೇಪಥ್ಯಕ್ಕೆ ಸರಿದು, ನೂಲುವವರು, ನೇಕಾರರು ಪಳಯುಳಿಕೆಯಾಗುವ ಅಪಾಯವಿದೆ. ಅನ್ನ, ಬಟ್ಟೆ, ವಾಸಿಸಲು ಮನೆ ನಿರ್ಮಿಸಿಕೊಳ್ಳುವುದು ನಮ್ಮ ಶ್ರಮದ ದುಡಿಮೆಯಿಂದ ಆಗುತ್ತಿದೆ ಎನ್ನುವುದು ಹೆಮ್ಮೆಯ ವಿಷಯ. ಶೋಷಣೆ ಹಾಗೂ ಮಾಲಿನ್ಯವಿಲ್ಲದ ಪ್ರಪಂಚ ಸೃಷ್ಟಿಯಾಗಬೇಕು. ಇತ್ತೀಚಿನ ವರ್ಷಗಳಲ್ಲಿ ಕುಲದ ಜತೆಗೆ ಕುಲ ಕಸುಬು ಸಹ ನಶಿಸುತ್ತಿದೆ. ಕುಲ ಉಳಿಸಿ ಕೊಳ್ಳಲು ಸಾಧ್ಯವಾಗದೆ ಹೋದರೆ ಕನಿಷ್ಠ ಕಸುಬನ್ನಾದರೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ದೇಸಿ ಧರ್ಮದರ್ಶಿ ಸಂಸ್ಥೆ ವ್ಯವಸ್ಥಾಪಕ ಎಸ್.ಜಿ. ದೇವರಮನಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಕೈಮಗ್ಗದ ಮೂಲಕ ಉದ್ಯೋಗ ಸೃಷ್ಟಿ ಸಾಧ್ಯವಾಗಿದೆ. ಕೈಮಗ್ಗ ಮನೆಮಂದಿಯೆಲ್ಲಾ ಕೂಡಿ ಮಾಡುವ ಕೆಲಸವಾಗಿದ್ದು, ಪರಸ್ಪರ ಸಾಮರಸ್ಯ ಬೆಳೆಸುತ್ತದೆ ಎಂದರು.
ಚರಕ ಸಂಸ್ಥೆ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ಪ್ರಸನ್ನ, ಚಾಮರಾಜನಗರದ ಜಯದೇವ, ಬಿ.ವಿ. ರವೀಂದ್ರನಾಥ್, ಬಸವರಾಜ ಶೇಷಗಿರಿ ತುಮ್ಮಿನಕಟ್ಟೆ, ಬಿ.ವಿ. ರವೀಂದ್ರನಾಥ್, ವೀರಪ್ಪ ಗೊರಂಟ್ಲಿ ಹಾಜರಿದ್ದರು. ಲತಾ ಸ್ವಾಗತಿಸಿದರು. ಶ್ರೀಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಎಂ.ಎನ್.ಕುಲಕರ್ಣಿವಂದಿಸಿದರು.