ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪೇದೆ ಸೇರಿ 9 ಮಂದಿ ಮೇಲೆ ಹಲ್ಲೆ

Srinivasa Murthy VN
Updated On : 17 Mar 2014, 10:18 am

ಕ.ಪ್ರ.ವಾರ್ತೆ ಸೊರಬ ಮಾ.16
ಜಮೀನಿನ ವಿವಾದಕ್ಕೆ ಸಂಬಂಧಪಟ್ಟಂತೆ ಜಮೀನಿನ ಮಾಲೀಕ ಹಾಗೂ ಕರ್ತವ್ಯನಿರತ ಪೊಲೀಸರ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ ಘಟನೆ ತಾಲೂಕಿನ ಅಂದವಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಅಂದವಳ್ಳಿ ಗ್ರಾಮದ ಸ.ನಂ. 236 ರಲ್ಲಿ ಕಳೆದ 38 ವರ್ಷಗಳ ಹಿಂದೆ ದರಖಾಸ್ತು ಮಂಜೂರಾತಿಯಲ್ಲಿ ಗ್ರಾಮಸ್ಥರಲ್ಲದ ಕೆಲವು ಖಾಸಗಿ ವ್ಯಕ್ತಿಗಳು ಕಂದಾಯ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸಾಗುವಳಿ ಮಾಡದೇ ಕಾನೂನುಬಾಹಿರವಾಗಿ ಆರ್‌ಟಿಸಿಯಂತಹ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಸ.ನಂ. 412, 4413, 414, 415, 416 ಮತ್ತು 417 ರಲ್ಲಿ ಸುಮಾರು 30 ಎಕರೆ ಪ್ರದೇಶವನ್ನು ಸಾಗುವಳಿ ಇಲ್ಲದೇ ಕಬಳಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಕಳೆದ 4 ತಿಂಗಳ ಹಿಂದೆ ಅಂದವಳ್ಳಿ ಗ್ರಾಮಸ್ಥರು ತಹಸೀಲ್ದಾರರಿಗೆ ದೂರು ನೀಡಿದ್ದರು.
ಭರವಸೆ ನೀಡಿದ್ದರು: ದೂರಿನ ಮೇರೆಗೆ ಅಂದಿನ ತಹಸೀಲ್ದಾರ್ ಪಿ.ಜಿ. ನಟರಾಜ್ ಸ್ಥಳ ಪರಿಶೀಲನೆ ನಡೆಸಿದ ಸಮಯದಲ್ಲಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ನಂತರ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಹೊರಟಿರುವ ವ್ಯಕ್ತಿಯನ್ನು ಸರ್ಕಾರಿ ಜಾಗದಿಂದ ತೆರವುಗೊಳಿಸುವ ಬಗ್ಗೆ ವಿವರವಾದ ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು ಎಂಬ ಭರವಸೆ ನೀಡಿದ್ದರು.
ಕಳೆದ ಶುಕ್ರವಾರ ರಾತ್ರಿ ಯಲಸಿ ಹನುಮಂತಪ್ಪ ಸ.ನಂ. 412ರ ತನ್ನ ಜಮೀನಿನಲ್ಲಿ ಕೊಳವೆಬಾವಿ ತೆಗೆಸಲು ಲಾರಿಯೊಂದಿಗೆ ತೆರಳಿದಾಗ ಇದನ್ನು ಗ್ರಾಮಸ್ಥರು ವಿರೋಧಿಸಿದ್ದಾರೆ. ಮಾತಿಗೆ ಮಾತು ನಡೆದು ಅಂತಿಮವಾಗಿ ಗುಂಪಾಗಿ ಬಂದ ಅಂದವಳ್ಳಿ ಗ್ರಾಮಸ್ಥರು ಯಲಸಿ ಹನುಮಂತಪ್ಪ ಅವರನ್ನು ಥಳಿಸಿದ್ದಾರೆ. ಅವರ ಕಾರನ್ನು ಕುಟ್ಟಿ  ನುಜ್ಜುಗುಜ್ಜು ಮಾಡಿದ್ದಾರೆ. ಅಲ್ಲಿದ್ದ ಕೊಳವೆಬಾವಿ ಲಾರಿಯ ಮೇಲೂ ಸಹ ಕಲ್ಲು ತೂರಾಟ ನಡೆಸಿ, ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.
ಏಳು ಕಾರ್ಮಿಕರ ಮೇಲೆ ಹಲ್ಲೆ:  7 ಜನ ಕಾರ್ಮಿಕರನ್ನು ಕೂಡ ಥಳಿಸಿದ್ದು, ಗಾಯಗೊಂಡ ಕಾರ್ಮಿಕರನ್ನು ಸೊರಬ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಎಸ್‌ಐ ಅವರಿಂದ ನಿಯೋಜನೆಗೊಂಡು ಸ್ಥಳದಲ್ಲಿ ಕರ್ತವ್ಯನಿರತರಾಗಿದ್ದ ಮುಖ್ಯ ಪೇದೆ ಎನ್. ಆನಂದ ಅವರ ಮೇಲೆ ಮುಗಿಬಿದ್ದ ಗ್ರಾಮಸ್ಥರು, ಬಟ್ಟೆ ಹಿಡಿದ ಎಳೆದಾಡಿ ಹಲ್ಲೆಗೆ ಪ್ರಯತ್ನಿಸಿ, ಮುಖ್ಯ ಪೇದೆಯ ಸರ್ಕಾರಿ ದ್ವಿಚಕ್ರ ವಾಹನ (ಕೆಎ 14, ಜಿ. 863) ಜಖಂಗೊಳಿಸಿದ್ದಾರೆ.  ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಮೀನು ಮಾಲೀಕ ಯಲಸಿ ಹನುಮಂತಪ್ಪ ಮತ್ತು ಕರ್ತವ್ಯನಿರತ ಮುಖ್ಯಪೇದೆ ಎನ್.ಆನಂದ ಅವರ ದೂರಿನನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಾದ ಜಿಲ್ಲಾ ಪಂಚಾಯಿತಿ ಸದಸ್ಯ ಗುರುಕುಮಾರ್ ಪಾಟೀಲ್ ಮತ್ತು ಡಿಸಿಸಿ ಬ್ಯಾಂಕ್ ನೌಕರ ರಾಜು ಸೇರಿ 32 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
10 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಬ್‌ಇನ್ಸ್‌ಪೆಕ್ಟರ್ ಭೀಮನಗೌಡ ತಿಳಿಸಿದ್ದಾರೆ. ಡಿವೈಸ್ಪಿಸೈಯದ್ ಇಸಾಕ್, ವೃತ್ತ ನಿರೀಕ್ಷಕ ಡಿ.ನಾಗರಾಜು, ಪಿಎಸ್‌ಐ ಭೀಮನಗೌಡ ಘಟನೆ ಸ್ಥಳಕ್ಕೆ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement