ಬೆಳ್ಳಂಬೆಳಗ್ಗೆ ಬಿಎಸ್‌ವೈ ಮತಯಾಚನೆ
ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾನುವಾರ ಬೆಳಗ್ಗೆ ಕೊಳಚೆ ಪ್ರದೇಶವೆಂದೇ ಗುರುತಿಸಿಕೊಂಡಿರುವ ವಿನಾಯಕ ನಗರ ಹಾಗೂ ಹನುಮಂತ ನಗರದಲ್ಲಿ ಮಿಂಚಿನ ಸಂಚಾರ ನಡೆಸಿ ಮತಯಾಚಿಸಿದರು.
ಬೆಳಗ್ಗೆ 7.30ರಿಂದ 8.30ರ ವರೆಗೆ ಒಂದು ಗಂಟೆ ಕಾಲ ಮತ ಯಾಚನೆ ನಡೆಸಿದ ಅವರು, ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಬಿಜೆಪಿಗೇ ಮತ ಕೊಡಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಪ್ರದೇಶಗಳಿಗೆ ಆಗಬೇಕಿರುವ ಕಾರ್ಯಗಳ ಬಗ್ಗೆ ಗಮನ ಹರಿಸುವಂತೆ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು. ಎಲ್ಲಾ ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ 20 ಕ್ಷೇತ್ರಗಳಲ್ಲಿ ಗೆಲುವು ಖಚಿತ ಎಂದು ಪುನರುಚ್ಚರಿಸಿದರು.
ಚುನಾವಣಾ ಪೂರ್ವ ಸಮೀಕ್ಷೆಯೂ ಸಹ ಇದನ್ನೆ ಹೇಳಿದೆ. ಅಲ್ಲದೇ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ತಮ್ಮ ಎದುರಾಳಿಯಾಗಿ ಬೇರೆ ಪಕ್ಷದಿಂದ ಯಾರು ನಿಲ್ಲುತ್ತಿದ್ದಾರೆ ಎಂದು ನಾನು ಚಿಂತಿಸುವುದಿಲ್ಲ. ಯಾರೇ ಎದುರಾಳಿ ಆದರೂ ತಮಗೆ ಭಯವಿಲ್ಲ. ಜಿಲ್ಲೆಯಾದ್ಯಂತ ನಡೆದಿರುವ ಅಭಿವೃದ್ಧಿ ಕಾರ್ಯ ಗಮನಿಸಿ ಜನತೆ ತಮ್ಮನ್ನು ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಚಾರದಲ್ಲಿ ಬಿಜೆಪಿ ಮುಖಂಡರಾದ ಡಿ.ಎಸ್. ಅರುಣ್, ಮಹಾನಗರ ಪಾಲಿಕೆ ಸದಸ್ಯ ಸತೀಶ್, ನಗರಸಭೆ ಮಾಜಿ ಸದಸ್ಯ ಎಂ. ಶಂಕರ್, ಎಸ್.ಎಸ್. ಜ್ಯೋತಿಪ್ರಕಾಶ್, ಬಳ್ಳೇಕೆರೆ ಸಂತೋಷ್, ದಿವಾಕರ್, ಉಮೇಶ್, ರಾಜೇಶ್ ಕಾಮತ್, ಪುರುಷೋತ್ತಮ್, ಎನ್.ಜೆ. ರಾಜಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಒಂದು ಗಂಟೆ ಕಾಲ ಪ್ರಚಾರ ನಡೆಸಿದ ಅವರು ನಂತರ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದರು.