ರಂಗದಾಸೋಹ ವಚನ ರಂಗೋತ್ಸವ ಉದ್ಘಾಟನೆ
ಭದ್ರಾವತಿ: ಬೆಂಗಳೂರಿನ ರಂಗಮಂಡಲ ಸಾಂಸ್ಕೃತಿಕ ಸಂಸ್ಥೆ ವಿವಿಧ ಸಾಂಸ್ಕೃತಿಕ ಪ್ರಾಕಾರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವಿಲಿಯಮ್ ಶೇಕ್ಸ್ಪಿಯರ್ನ ಮ್ಯಾಕ್ಬೆತ್ನಿಂದ ಹಿಡಿದು ಲಂಕೇಶ್ ಅವರ ಸಂಕ್ರಾಂತಿ ವರೆಗೆ ವೈವಿಧ್ಯಮಯ ರಂಗಪ್ರಯೋಗ ಮಾಡಿದೆಯಲ್ಲದೇ ಜಾನಪದ ಮತ್ತು ವಚನಸಾಹಿತ್ಯ ಹಾಗೂ ವಚನ ಚಳವಳಿ ಕುರಿತು ನಾಟಕಗಳನ್ನೂ ಯಶಸ್ವಿಯಾಗಿ ಪ್ರದರ್ಶಿಸಿದೆ ಎಂದು ರಂಗಮಂಡಲದ ಅಧ್ಯಕ್ಷ ಡಿ.ಬಿ.ಮಲ್ಲಿಕಾರ್ಜುನಯ್ಯಸ್ವಾಮಿ ಮಹಾಮನೆ ತಿಳಿಸಿದರು.
ಶನಿವಾರ ರಾತ್ರಿ ಪಟ್ಟಣದ ಬಸವೇಶ್ವರ ಸಭಾಭವನದ ಆವರಣದಲ್ಲಿ ಏರ್ಪಡಿಸಿದ್ದ ರಂಗದಾಸೋಹ ವಚನ ರಂಗೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕ ಮಾತನಾಡಿದರು.
ಪ್ರತಿಕೃತಿ ನಿರ್ಮಾಣ: ಮೈಸೂರು ಕಾಗದ ಕಾರ್ಖಾನೆಯ ಹಣಕಾಸು ವಿಭಾಗದ ಸಹಾಯಕ ಮಹಾಪ್ರಬಂಧಕ ಲಕ್ಷ್ಮಿನಾರಾಯಣಪ್ಪ ರಂಗಕರ್ಮಿ ಹಾಗೂ ರಂಗನಿರ್ದೇಶಕ ಎಸ್.ಜಿ. ಶಂಕರಮೂರ್ತಿ ಅವರ ವ್ಯಕ್ತಿತ್ವ ಕುರಿತು ಮಾತನಾಡಿ, ಶಂಕರಮೂರ್ತಿ ಮೂಲತಃ ಶಿಲ್ಪಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವರನಟ ರಾಜ್ಕುಮಾರ್ ಅವರ ನಿವಾಸದಲ್ಲಿ 3 ತಿಂಗಳು ಮೊಕ್ಕಾಂ ಹೂಡಿ ಅವರ ಪ್ರತಿಕೃತಿ ನಿರ್ಮಿಸಿದ ಕೀರ್ತಿ ಸಂಪಾದಿಸಿದವರು ಎಂದು ತಿಳಿಸಿದರು.
ರಂಗನಿರ್ದೇಶಕ ಎಸ್.ಜಿ.ಶಂಕರಮೂರ್ತಿ ದಂಪತಿಯನ್ನು ಈ ಸಂದರ್ಭದಲ್ಲಿ ರಂಗದಾಸೋಹಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಹಿರಿಯ ರಂಗಕಲಾವಿದರಾದ ಲಕ್ಷ್ಮಿನಾರಾಯಣಪ್ಪ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗಯ್ಯ, ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಶ್ರೀಮಠದ ರಂಗಸಂಘಟಕ ಮಲ್ಲಯ್ಯ ಹಾಗೂ ನಗರಸಭಾ ಸದಸ್ಯ ಶಿವರಾಜ್ ಆಗಮಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಭದ್ರಾವತಿ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್.ಸದಾಶಿವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಂಗಜಾಗೃತಿ ಪರಿಷತ್ತಿನ ಅಧ್ಯಕ್ಷ ಗುಬ್ಬಿ ಪ್ರಕಾಶ್ ಸ್ವಾಗತಿಸಿದರು. ಎಸ್.ಜಿ. ಶಂಕರಮೂರ್ತಿ ರಚಿಸಿ ನಿರ್ದೇಶಿಸಿದ ಈಸಕ್ಕಿಯಾಕೆ ನಿನಗ್ಯಾಕೆ ವಚನ ಚಳವಳಿ ಕುರಿತ ನಾಟಕವನ್ನು ಪ್ರದರ್ಶಿಸಲಾಯಿತು.