ಮೋದಿ ಪ್ರಧಾನಿಯಾಗಿಸುವುದೇ ಮತದಾರರ ಗುರಿ
ತೀರ್ಥಹಳ್ಳಿ: ಜನರೇ ಗುರುತಿಸಿದ ವ್ಯಕ್ತಿ ನರೇಂದ್ರಮೋದಿ. ಯುವ ಮತದಾರರ ಗುರಿ ಒಂದೇ ಆಗಿದ್ದು, ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಮಾಡುವುದು. ಹೀಗಾಗಿ ಮೋದಿ ಪ್ರದಾನಿ ಆಗೋದು ಸೂರ್ಯ, ಚಂದ್ರರಷ್ಟೇ ಸತ್ಯ ಎಂದು ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತೀರ್ಥಹಳ್ಳಿಯ ಮಂಡಗದ್ದೆ ಹೋಬಳಿಯ ಬೆಜ್ಜವಳ್ಳಿ ಹಾಗೂ ಕೋಣಂದೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಡಕೆ ಬೆಳೆಗಾರರ, ಬರ್ ಹುಕುಂ ರೈತರ ಸಮಸ್ಯೆ ಬಹಳ ಇದೆ. ಈ ಸಮಸ್ಯೆ ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
2013-14ರಲ್ಲಿ ರಾಜ್ಯ ಸರ್ಕಾರದ ಸಾಧನೆ ಶೂನ್ಯವಾಗಿದೆ. ಒಂದೇ ಒಂದು ಸುವರ್ಣ ಗ್ರಾಮ ಯೋಜನೆ ಆಗಿಲ್ಲ. ಶಿವಮೊಗ್ಗ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಕನಸು ಇದೆ. ಮತನೀಡಿ ಗೆಲ್ಲಿಸಿ, ಅವಕಾಶ ಕೊಡಿ ಎಂದು ಹೇಳಿದರು.
ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ರೈತರಿಗೇ ಪ್ರತ್ಯೇಕ ಬಜೆಟ್ ಮಾಡಬೇಕು ಎಂದು ಹೇಳಿದ ಅವರು, ಅಬ್ದುಲ್ ಕಲಾಂ ಅವರ ಕನಸು ನನಸು ಮಾಡಲು ಮೋದಿಯವರು ಪ್ರಧಾನಿಯಾಗಬೇಕು ಎಂದು ಹೇಳಿದರು.
ಅಪಮೌಲ್ಯವೇ ಸಾಧನೆ: 50 ವರ್ಷ ದೇಶ ಆಳಿದರೂ, ಬಡತನದ ಬಗ್ಗೆ ಕಾಂಗ್ರೆಸ್ ಸರ್ಕಾರ ಮಾತನಾಡುತ್ತಿದೆ. ರೂಪಾಯಿಯ ಅಪಮೌಲ್ಯವೇ ಕೇಂದ್ರದ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ದೆಹಲಿಯಲ್ಲಿ ಶೀಲಾದೀಕ್ಷಿತ್ ಅವರ ಸರ್ಕಾರ ಧೂಳೀಪಟವಾಗಿದೆ ಎಂದವರು ಹೇಳಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಬಿಜೆಪಿ ಸರ್ಕಾರ ಎಲ್ಲಾ ಸಮುದಾಯಗಳಿಗೂ ಅನುಕೂಲ ಮಾಡಿಕೊಟ್ಟಿದೆ. ಈಡಿಗ, ಬಿಲ್ಲವ, ಸಮಾಜ ಸೇರಿದಂತೆ ಹಲವು ಸಮುದಾಯಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಮಾಡಿಕೊಟ್ಟಿದೆ ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಇತ್ತೀಚೆಗೆ ರಾಜಕೀಯ ಚರ್ಚೆಗಳು ಬೇರೆ ದಿಕ್ಕಿನಲ್ಲಿ ಸಾಗುತ್ತಿವೆ. ಕೇಂದ್ರದಲ್ಲಿ ಹೊಣೆಗೇಡಿತನದ ರಾಜಕಾರಣಿಗಳ ಆಡಳಿತದಿಂದಾಗಿ ರು. 6ಲಕ್ಷ ಕೋಟಿ ಹಗರಣ ನಡೆದಿದೆ. ದೇಶ ಬಡವಾಗುತ್ತಿದೆ, ಆದರೆ ವ್ಯಕ್ತಿ ಶ್ರೀಮಂತನಾಗುತ್ತಿದ್ದಾನೆ ಎಂದರು.