ಯೂಟ್ಯೂಬ್‌ನಲ್ಲಿ ಬಿಜೆಪಿ- ಕಾಂಗ್ರೆಸ್ ಜಾಹಿರಾತು ಫೈಟ್
-ವಿಶೇಷ ವರದಿ
ಶಿವಮೊಗ್ಗ: ಯುವ ಮತದಾರರನ್ನು ಸೆಳೆದುಕೊಳ್ಳುವ ನಿಟ್ಟಿನಲ್ಲಿ ಅಂತರ್ಜಾಲ ಜಾಹೀರಾತಿಗೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳು, ಅಲ್ಲೇ ತಮ್ಮ ಎದುರಾಳಿಗಳ ವಿರುದ್ಧ ಯುದ್ಧವನ್ನೂ ಹೂಡಿವೆ.
ಇಂತಹ ಸಮರಕ್ಕೊಂದು ಉದಾಹರಣೆ ಕಳೆದ ಎರಡು ದಿನಗಳಿಂದ ಯೂಟ್ಯೂಬ್ ತಾಣದಲ್ಲಿ ಕಾಣಲ್ಪಟ್ಟಿದೆ. ಇನ್ನೂ ಮತದಾನಕ್ಕೆ ದಿನಗಳು ಬಾಕಿ ಇವೆ. ಈ ಮಧ್ಯೆಯೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯೂಟ್ಯೂಬ್ ಜಾಹೀರಾತು ಸಮರ ಆರಂಭವಾಗಿದೆ.
ಯೂಟ್ಯೂಬ್‌ನಲ್ಲಿ ನಮೋ ಜಾಹಿರಾತು ಕಾಣಿಸಿಕೊಂಡು ಬಹು ದಿನಗಳೇ ಕಳೆದವು. ಗುಜರಾತ್ ಅಭಿವೃದ್ಧಿ, ಏಕ್ ಭಾರತ್ ಶ್ರೇಷ್ಠ ಭಾರತ್ ಜಾಹೀರಾತುಗಳು ಸಾಕಷ್ಟು ಜನಪ್ರಿಯತೆಗಳು ಗಳಿಸಿದ್ದವು. ಇತ್ತೀಚೆಗಷ್ಟೇ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಬಿಜೆಪಿಯು ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸೇರಿದಂತೆ ಮುಖಂಡರಾದ ಸುಷ್ಮಾ ಸ್ವರಾಜ್, ರಾಜನಾಥ್‌ಸಿಂಗ್, ಅರುಣ್ ಜೇಟ್ಲಿ ಅವರು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದ ವಿಡಿಯೋ ತುಣುಕುಗಳ ಕನ್ನಡ ಅವತರಣಿಕೆಯನ್ನು ಜಾಹೀರಾತು ಮೂಲಕ ಖಾಸಗಿ ವೆಬ್‌ಸೈಟ್‌ನಗಳಲ್ಲಿ ಪ್ರಚುರಪಡಿಸಿ, ಯುವ ಮತದಾರರನ್ನು ಸೆಳೆಯುತ್ತಿದೆ.
ಸಮರ: ಯಾವುದು ಸತ್ಯ, ಇದು ಕಾಂಗ್ರೆಸ್‌ನ ಜಾಹೀರಾತಿನ ಮುಖ್ಯಾಂಶ. ಗುಜರಾತ್ ಶಿಕ್ಷಣ, ಅಭಿವೃದ್ಧಿ, ಕ್ರೀಡಾ ನೀತಿ ಹೀಗೆ ವಿವಿಧ ವಿಚಾರಗಳನ್ನು ಇಟ್ಟುಕೊಂಡು ಗ್ರಾಫ್ ಸಹಿತ ಅಂಕಿ- ಅಂಶಗಳನ್ನೊಳಗೊಂಡ ಜಾಹೀರಾತು ಸೃಷ್ಟಿಸಿ ಅದನ್ನು ಯೂಟ್ಯೂಬ್‌ನಲ್ಲಿ ಪ್ರಚಾರಕ್ಕೆ ಮುಂದಾಗಿದೆ.
ನರೇಂದ್ರ ಮೋದಿಯ ಭಾಷಣಗಳ ತುಣುಕು ಮತ್ತು ಅಂಕಿ- ಅಂಶ ತೋರಿಸಿ ಯಾವುದೇ ಸತ್ಯ ನೀವೇ ನೋಡಿ ಎಂಬುದು ಜಾಹೀರಾತುಗಳ ಸಾರಾಂಶ.
ಉದಾಹರಣೆಗೆ, ದೇಶದ ಕ್ರೀಡಾ ನೀತಿಯೇ ಸರಿ ಇಲ್ಲ, ಹೀಗಾಗಿ ದೇಶಕ್ಕೆ ಒಲಿಂಪಿಕ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕಗಳು ಬರುತ್ತಿಲ್ಲ ಎಂಬ ನರೇಂದ್ರ ಮೋದಿಯ ಸಾರ್ವಜನಿಕ ಸಮಾರಂಭದ ಭಾಷಣದ ತುಣುಕನ್ನು ಜಾಹೀರಾತಿನಲ್ಲಿ ಪ್ರದರ್ಶಿಸಿ, ನಂತರ ಗುಜರಾತ್‌ನ ಕ್ರೀಡಾ ಸಾಧನೆ ಪ್ರದರ್ಶಿಸಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಗುಜರಾತ್ ತೀರಾ ಹಿಂದುಳಿದಿದೆ, ದೇಶೀಯ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಗುಜರಾತ್ ಪ್ರಮುಖ ಸ್ಥಾನ ಗಳಿಸಿಲ್ಲ ಎಂಬುದನ್ನು ಗ್ರಾಫ್‌ನಲ್ಲಿ ತೋರಿಸಲಾಗಿದೆ.
ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಗುಜರಾತ್‌ನ ಸಾಧನೆ ಮತ್ತು ಇಡೀ ಭಾರತದ ಸಾಧನೆಯನ್ನು ಅಂಕಿ- ಅಂಶಗಳಲ್ಲಿ ತೋರಿಸಿ ಯಾವುದು ಸತ್ಯ ನೀವೇ ನಿರ್ಧರಿಸಿ ಎಂದು ಕಾಂಗ್ರೆಸ್ ಜಾಹೀರಾತು ಹೇಳುತ್ತಿದೆ.