ಬಿಜೆಪಿಗೆ ವ್ಯಕ್ತಿಗಿಂತ ಪಕ್ಷ ಮುಖ್ಯ
ಕಾಂಗ್ರೆಸ್ ಧರ್ಮ ಆಧರಿಸಿ, ಜೆಡಿಎಸ್ ಜಾತಿ ವಿಷಯ ಮುಂದಿಟ್ಟು ಮತಯಾಚನೆ: ಈಶ್ವರಪ್ಪ ಟೀಕೆ
ಕನ್ನಡಪ್ರಭ ವಾರ್ತೆ ಸೊರಬ ಮಾ.24
ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷವೇ ಮುಖ್ಯ. ಆದರೂ, ನರೇಂದ್ರ ಮೋದಿ ಅವರ ಅಭಿವೃದ್ಧಿ, ಯಡಿಯೂರಪ್ಪ ಅವರ ರೈತ ನಾಯಕತ್ವದಡಿ ಮಾಡಿದ ಸಾಧನೆ ಮುಂದಿಟ್ಟುಕೊಂಡು, ದೇಶ ಹಾಗೂ ರಾಜ್ಯದಲ್ಲಿ ಮತ ಯಾಚಿಸುತ್ತಿದ್ದೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮೋ ಅವರು ಗುಜರಾತ್‌ನಲ್ಲಿ ಉತ್ತಮ ಆಡಳಿತ ನೀಡಿ ದೇಶದಲ್ಲಿಯೇ ಯಶಸ್ವಿ ನಾಯಕರಾಗಿದ್ದಾರೆ. ಗುಜರಾತ್ ಅನ್ನು ನಂ.1 ಸ್ಥಾನಕ್ಕೆ ಒಯ್ದಿದ್ದಾರೆ. ರಾಷ್ಟ್ರರಕ್ಷಣೆ ಬಗ್ಗೆ ಚೀನಾ ಮತ್ತು ಪಾಕಿಸ್ತಾನಕ್ಕೆ ಹಾಗೂ ದೇಶದ ಗಡಿ ಭಾಗದಲ್ಲಿರುವ ಇನ್ನಿತರ ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ರವಾನಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. ಯಡಿಯೂರಪ್ಪಅವರ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ರೈತಪರ ಕೃಷಿ ಬಜೆಟ್, ಸಾಲ ಮನ್ನಾ ಹಾಗೂ ಶೂನ್ಯ ಬಡ್ಡಿ ಹಾಗೂ ಹಿಂದುಳಿದ ವರ್ಗಗಳಿಗೆ ಮತ್ತು ಪ.ಜಾ.ಪ. ವರ್ಗದವರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ರಾಜ್ಯಾದ್ಯಂತ ಜನತೆಯ ಒಲವು ಪಡೆದಿದ್ದಾರೆ. ಆದ್ದರಿಂದ ಇವರಿಬ್ಬರ ಸಾಧನೆ ಮುಂದಿಟ್ಟುಕೊಂಡು ಚುನಾವಣೆ ಎದುರುಸುತ್ತಿದ್ದೇವೆಯೆ ವಿನಃ ವ್ಯಕ್ತಿ ಪ್ರತಿಷ್ಠೆಗೆ ಮಹತ್ವ ನೀಡುವ ಅವಶ್ಯಕತೆಯೇ ಇಲ್ಲ ಎಂದರು.
ಕಾಳಜಿ ಇಲ್ಲ: ವಿದ್ಯುತ್ ಕೊರತೆಯಿಂದಾಗಿ ರೈತರು ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಡಕಾಗಿ ಆತಂಕದಲ್ಲಿದ್ದಾರೆ. ನಾವು ಹಿಂದೆ ಒಂದು ಅವಧಿಯ ಆಡಳಿತ ನಡೆಸಿದರೂ ಅಗತ್ಯಕ್ಕೆ ಅನುಗುಣವಾಗಿ ಸಮಯ ಪ್ರಜ್ಞೆ ಇಟ್ಟುಕೊಂಡು, ಬೇರೆ ರಾಜ್ಯದಿಂದ ವಿದ್ಯುತ್ ಖರೀದಿಸಿ, ಪೂರೈಸಲಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರ ರೈತರ, ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲದಂತೆ ವರ್ತಿಸುತ್ತಿದೆ ಎಂದರು.
ಅಭಿವೃದ್ಧಿ ಆಧರಿಸಿ ಮತ: ಕಾಂಗ್ರೆಸ್ ಪಕ್ಷ ಧರ್ಮದ ಮೇಲೆ, ಜೆಡಿಎಸ್ ಜಾತಿ ಆಧಾರದ ಮೇಲೆ ಚುನಾವಣೆ ನಡೆಸಲು ಹೊರಟಿದ್ದು, ನಮ್ಮ ಪಕ್ಷ ಅಭಿವೃದ್ಧಿ ಆಧರಿಸಿ, ಮತಯಾಚಿಸುತ್ತಿದೆ. ಕಾಂಗ್ರೆಸ್‌ನಲ್ಲಿ ಸಚಿವರೇ ಚುನಾಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಜೆಡಿಎಸ್ ಪರ ನಿಲ್ಲಲು ಅಭ್ಯರ್ಥಿಗಳೇ ಇಲ್ಲದಂತಾಗಿದ್ದು, ಬೇರೆ ಬೇರೆ ಪಕ್ಷದ ಅತೃಪ್ತರನ್ನು ಎಳೆದು ತಂದು ಕಣಕ್ಕಿಳಿಸುತ್ತಿದ್ದಾರೆ. ಬಿಜೆಪಿಯಿಂದ ನಾಮುಂದು- ತಾಮುಂದು ಎಂದು ಅಭ್ಯರ್ಥಿಗಳ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಪಕ್ಷ ಗೆಲವಿನತ್ತ ಸಾಗುತ್ತಿದೆ ಎಂಬುದಕ್ಕೆ ದಿಕ್ಸೂಚಿಯಾಗಿದೆ. ಅಭಿವೃದ್ಧಿ ಬೆಂಬಲಿಸುವ ಜನತೆ ಎರಡೂ ಪಕ್ಷಗಳನ್ನು ತಿರಸ್ಕಾರ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.
ಎಲ್‌ಕೆಜಿ ವಿದ್ಯಾರ್ಥಿ: ಮಧು ಬಂಗಾರಪ್ಪ ರಾಜಕಾರಣದಲ್ಲಿ ಇನ್ನೂ ಎಲ್‌ಕೆಜಿ ವಿದ್ಯಾರ್ಥಿ. ಕುಮಾರ್ ಬಂಗಾರಪ್ಪ ಅವರೊಂದಿಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಬಾಲೀಶ ಹೇಳಿಕೆ ನೀಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೇಳಿಕೆ ನೀಡಿದರೆ, ದೊಡ್ಡವನಾಗುತ್ತೇನೆ ಎಂಬ ಭಾವನೆ ಅವರಿಗೆ ಇರಬಹುದು. ಇಲ್ಲಿಯವರೆಗೆ ಅವರಿಗೆ ಇಂತಹ ಆಲೋಚನೆಗಳು ಇರಲಿಲ್ಲ. ದೇವೇಗೌಡರೊಂದಿಗೆ ರಾಜಕಾರಣ ನಡೆಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಒಳ ಒಪ್ಪಂದ ಎನ್ನುವ ಪದಕ್ಕಿಂತಲೂ ಹೆಚ್ಚು ಅರ್ಥ ಬರುವ ಶಬ್ದ ಕಲಿಯಬಹುದು ಎಂದು ವ್ಯಂಗ್ಯವಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಹುಣವಳ್ಳಿ ಗಂಗಾಧರಪ್ಪ, ಎಂಎಲ್‌ಸಿ ಭಾರತಿ ಶೆಟ್ಟಿ, ಮಾಜಿ ಸಚಿವ ಹರತಾಳು ಹಾಲಪ್ಪ, ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಪಾಣಿ ರಾಜಪ್ಪ, ಎಂ.ನಾಗಪ್ಪ, ಎಂ.ಆರ್.ಪಾಟೀಲ್, ಯೋಗೀಶ್, ಗಜಾನನ ರಾವ್, ನಾಗರಾಜ ಗೌಡ ಚಿಕ್ಕಾವಲಿ, ಶಿವಯೋಗಿ ಹಾಜರಿದ್ದರು.
ಶಿಕಾರಿಪುರದಲ್ಲಿ ಬಿಜೆಪಿ ಸಭೆ
ಶಿಕಾರಿಪುರ: ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಳಿಸಲಾದ ಹಲವು ಜನಪರ ಯೋಜನೆಗಳೇ ಅವರ ಗೆಲವಿಗೆ ಶ್ರೀರಕ್ಷೆಯಾಗಲಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ತಿಳಿಸಿದರು.
ಸೋಮವಾರ ಸಂಜೆ ಪಟ್ಟಣದ ಮಾಳೇರಕೇರಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ಪಟ್ಟಣದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ದಲಿತರ ಕಾಲೋನಿ, ಅಲ್ಪಸಂಖ್ಯಾತರ ಕಲ್ಯಾಣ, ರೈತರ ಸಾಲಮನ್ನಾ ಮತ್ತಿತರ ಹಲವು ಯೋಜನೆಗಳನ್ನು ಎಲ್ಲಾ ವರ್ಗ, ಸಮುದಾಯದ ಹಿತಕ್ಕೆ ಅನುಗುಣವಾಗಿ ಜಾರಿಗೊಳಿಸಲಾಗಿದೆ ಎಂದರು.
ದಲಿತರು, ಹಿಂದುಳಿದವರು, ಮುಸ್ಲಿಂ ಸಹಿತ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಯಡಿಯೂರಪ್ಪ ಅವರು ಲೋಕಸಭೆಗೆ ಆಯ್ಕೆಯಾಗಬೇಕಾಗಿದೆ. ಕಾಲಿಗೆ ಚಕ್ರ ಕಟ್ಟಿಕೊಂಡಿರುವ ಯಡಿಯೂರಪ್ಪ ಅವರು ಕೇಂದ್ರದಲ್ಲಿ ಸಚಿವರಾದಲ್ಲಿ ಹಲವು ಯೋಜನೆಗಳು ರಾಜ್ಯಕ್ಕೆ ಬರಲಿವೆ ಎಂದರು.
ಕಾಡಾ ಮಾಜಿ ಅಧ್ಯಕ್ಷ ಶೇಖರಪ್ಪ, ಮುಖಂಡ ಗುರುಮೂರ್ತಿ, ಹಾಲಪ್ಪ, ಸೈಯದ್ ಪೀರ್, ಬಷೀರ್‌ಸಾಬ್, ಸುಕೇಂದ್ರಪ್ಪ, ಪಾಲಾಕ್ಷಪ್ಪ, ದೂಪದಹಳ್ಳಿ ರವಿ, ಪ್ರವೀಣ್‌ಶೆಟ್ಟಿ, ಗಿರೀಶ್ ಧಾರವಾಡದ, ಸಂಗಮೇಶ್, ಡಿ.ಬಿ. ಶಾಂತರಾಜ್, ತ್ಯಾಗರ್ತಿ ನೀಲಪ್ಪ, ಭೂಕಾಂತ್, ನಿಂಗಪ್ಪ, ಕ್ಯಾಂಟೀನ್ ಸತ್ಯಣ್ಣ ಮತ್ತಿತರರು ಇದ್ದರು.