ಪಠ್ಯೇತರ ಗ್ರಂಥ ಅಧ್ಯಯನ ಅವಶ್ಯ: ಕಿಮ್ಮನೆ
ಶಿವಮೊಗ್ಗ: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರು ಪಠ್ಯ ಪುಸ್ತಕಗಳನ್ನಷ್ಟೇ ಅಲ್ಲದೆ ಜ್ಞಾನಾರ್ಜನೆಗಾಗಿ ಗ್ರಂಥಾಲಯದ ಇತರೆ ಪುಸ್ತಕಗಳನ್ನು ಓದುವ ಅವಶ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಂಥಾಲಯ, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಕುಂಸಿಯಲ್ಲಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದ ಅವರು, ಉದ್ಯೋಗ ಗಿಟ್ಟಿಸುವ ಉದ್ದೇಶದಿಂದ ಅಥವಾ ಕರ್ತವ್ಯದ ಉದ್ದೇಶದಿಂದ ಶಿಕ್ಷಕ ಪಠ್ಯಗಳನ್ನು ಓದಿದರೆ ಸಾಲದು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಮ್ಮ ಹೆಚ್ಚಿನ ಜ್ಞಾನಾರ್ಜನೆಗಾಗಿ ಗ್ರಂಥಾಲಯದ ಸದ್ಬಳಕೆ ಮಾಡಿಕೊಂಡು ಪ್ರಮಂಚ ಜ್ಞಾನದ ಮೂಲಕ ತಮ್ಮ ಅನುಭವಗಳ ಮೂಲಕ ಮಕ್ಕಳಿಗೆ ಪಾಠ ಹೇಳುವಂತಾಗಬೇಕು ಎಂದರು.
ಓದು ಪ್ರತಿ ಮನುಷ್ಯನ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ತಾವೇ ಪ್ರತ್ಯಕ್ಷ ಉದಾಹರಣೆ ಎಂದ ಅವರು, ತಾವು ಬಾಲ್ಯದಲ್ಲಿ ದೇಶದ ದೊಡ್ಡ ದೊಡ್ಡ ನಾಯಕ, ಸಾಧಕರ ಜೀವನ ಚರಿತ್ರೆಗಳನ್ನು ಓದಿದೆ. ಅದರಿಂದ ಭಾರೀ ಬದಲಾವಣೆಯನ್ನೂ ಕಂಡಿರುವುದಾಗಿ ತಿಳಿಸಿದರು.
ಗ್ರಂಥಾಲಯ ಮತ್ತು ಶಾಲೆ ದೇವಾಲಯಗಳಿದ್ದಂತೆ. ಮಕ್ಕಳಿಗೆ ಒಳ್ಳೆಯ ಪುಸ್ತಕಗಳನ್ನು ಹಾಗೂ ಲೇಖನಗಳನ್ನು ಓದಲು ಅವಕಾಶ ಕಲ್ಪಸಬೇಕು. ಕೇವಲ ಪುಸ್ತಕಗಳ ಅಲಂಕಾರ ಪ್ರಯೋಜನವಿಲ್ಲ ಅವುಗಳ ಓದು ಮುಖ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಮಾತನಾಡಿ, ಟಿವಿ ಮಾಧ್ಯಮದಿಂದಾಗಿ ಜನರಿಗೆ ಓದುವ ಹವ್ಯಾಸ ಕಡಿಮೆ ಆಗಿದೆ. ಟೀವಿಗಿಂತಲೂ ಮನಸ್ಸು ಹಗುರ ಮಾಡುವ ಮಾಧ್ಯಮ ಪುಸ್ತಕ ಎಂದರು. ಗ್ರಂಥಾಲಯಗಳು ಕೇವಲ ಮಕ್ಕಳು ಹಾಗೂ ವೃದ್ಧರಿಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಅವಶ್ಯವಿದ್ದು ಗ್ರಂಥಾಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಶಾಸಕಿ ಶಾರದಾ ಪೂರ್ಯಾನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಟಿ.ಎಲ್. ಸುಂದರೇಶ್, ಗ್ರಾಪಂ ಅಧ್ಯಕ್ಷ ಎನ್.ಮಂಜಪ್ಪ, ಉಪಾಧ್ಯಕ್ಷೆ ಪಿ.ಕವಿತಾ ಪರಮೇಶ್ವರಪ್ಪ, ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಎಂ.ಆರ್. ಹರೀಶ್, ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರುದ್ರಸ್ವಾಮಿ ಇತರರು ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಗುಡ್ಡದಯ್ಯ ಸ್ವಾಗತಿಸಿ, ಶಿವಮೊಗ್ಗ ನಗರ ಕೇಂದ್ರ ಗ್ರಂಥಾಲಯದ ಅಧಿಕಾರಿ ಬಿ.ಚಂದ್ರೇಗೌಡ ನಿರೂಪಿಸಿ ವಂದಿಸಿದರು.