ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೆಕ್ಕೆಜೋಳ ಸುಸ್ಥಿರ ಉದ್ಪಾದನೆ: ತರಬೇತಿ

Srinivasa Murthy VN
Updated On : 25 May 2014, 10:54 am

ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಕೃಷಿ ಇಲಾಖೆ, ಆಶ್ರಯದಲ್ಲಿ ಮೇ 26ರಂದು ಬೆಳಿಗ್ಗೆ 10ಗಂಟೆಗೆ ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೆಕ್ಕೆ ಜೋಳದಲ್ಲಿ ಸುಸ್ಥಿರ ಉತ್ಪಾದನಾ ತಾಂತ್ರಿಕತೆಗಳು ಈ ವಿಷಯ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ತರಬೇತಿಯನ್ನು ಅಂತ ರಾಷ್ಟ್ರೀಯ ಮೆಕ್ಕೆಜೋಳ ಮತ್ತು ಗೋದಿ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಕೇಂದ್ರ ಇಕ್ರಿಸ್ಯಾಟ್, ಹೈದರಾಬಾದ್‌ನ ವಿಜ್ಞಾನಿಯಾದ ಡಾ. ಎ.ಆರ್. ಸದಾನಂದ ಉದ್ಘಾಟಿಸುವರು. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ.ವಾಸುದೇವಪ್ಪರವರು ಅಧ್ಯಕ್ಷತೆ ವಹಿಸುವರು. ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ. ಮಧುಸೂದನ, ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಪಿ. ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ. ಟಿ.ಎಚ್. ಗೌಡ, ಸಹ ಸಂಶೋಧನಾ ನಿರ್ದೇಶಕ ಡಾ. ವೈ.ವಿಶ್ವನಾಥ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸುವರು. ಮೆಕ್ಕೆ ಜೋಳದ ಹೈಬ್ರಿಡ್ ತಳಿಗಳ ಪರಿಚಯವನ್ನು ಡಾ. ಎಚ್.ಡಿ.ಮೋಹನಕುಮಾರ್, ಮೆಕ್ಕೆ ಜೋಳದ ಉತ್ಪಾದಕತೆಯಲ್ಲಿ ಸುಸ್ಥಿರ ಕೃಷಿ ವಿಧಾನಗಳ ಬಗ್ಗೆ ಡಾ. ಎಂ. ದಿನೇಶ್ ಕುಮಾರ್, ಮಣ್ಣಿನ ಆರೋಗ್ಯ ಸುಧಾರಣೆಗಾಗಿ ಮುಸುಕಿನ ಜೋಳದ ದಂಟಿನ ಕಾಂಪೋಸ್ಟ್ಬ್‌ಳಕೆ ಬಗ್ಗೆ ಡಾ. ಟಿ.ಎಸ್. ವಾಗೀಶ್, ಮೆಕ್ಕೆಜೋಳದ ಪ್ರಮುಖ ರೋಗಗಳು ಮತ್ತು ನಿರ್ವಹಣೆ ಕ್ರಮಗಳ ಬಗ್ಗೆ ಡಾ. ಸಿ. ಕರೇಗೌಡ ಹಾಗೂ ಮೆಕ್ಕೆಜೋಳದ ಪ್ರಮುಖ ಕೀಟಗಳು ಮತ್ತು ನಿರ್ವಹಣೆ ಕ್ರಮಗಳ ಬಗ್ಗೆ ಡಾ. ಬಿ.ಸಿ. ಹನುಮಂತಸ್ವಾಮಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ತಿಳಿಸಿಕೊಡಲಿದ್ದಾರೆ.

ಮೂಳೆ ಸಾಂದ್ರತಾ ಶಿಬಿರ ಇಂದು
ಶಿವಮೊಗ್ಗ: ಇಲ್ಲಿನ ಜಗನ್ನಾಥ ನರ್ಸಿಂಗ್ ಹೋಂನಲ್ಲಿ ಮೇ 25 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಶೇ.50 ರಿಯಾಯಿತಿ ದರಲ್ಲಿ ಡೆಕ್ಸಾ ಯಂತ್ರದಿಂದ ಮೂಳೆ ಸಾಂದ್ರತೆ ಪರೀಕ್ಷೆ ನಡೆಸುವ ಶಿಬಿರ ಹಮ್ಮಿಕೊಳ್ಳಲಾಗಿದೆ. ಸೊಂಟ, ಭುಜ, ಕುತ್ತಿಗೆ ಅಥವಾ ಬೆನ್ನು ನೋವಿನ ತೊಂದರೆಗೆ ಒಳಗಾಗಿರುವವರು, 25 ವರ್ಷ ಮೇಲ್ಪಟ್ಟ ಪುರುಷರು, ಋತುಸ್ರಾವ ನಿಂತಿರುವ ಮಹಿಳೆಯರು, ಗರ್ಭಕೋಶ ಚಿಕಿತ್ಸೆಗೆ ಒಳಗಾಗಿರುವವರು, ಸಕ್ಕರೆ ಖಾಯಿಲೆ, ರಕ್ತದ ಒತ್ತಡ, ಅರ್ಥರೈಟಿಸ್, ಸ್ತೂಲ ಕಾಯ ಇತರೆ ರೋಗಗಳಿಂದ ನರಳುತ್ತಿರುವವರು ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯುವುದರಿಂದ ಎಲ್ಲಾ ತರಹದ ಮೂಳೆ ರೋಗಗಳನ್ನು ಮತ್ತು ತೊಂದರೆಗಳನ್ನು ತಡೆಗಟ್ಟಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ 2 ಸಾವಿರಕ್ಕೂ ಹೆಚ್ಚು ಜನರು ಸದುಪಯೋಗ ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗೆ 94481 49872 ಸಂಪರ್ಕಿಸಬಹುದು ಎಂದು ಡೆಕ್ಸಾ ಸ್ಕ್ಯಾನಿಂಗ್ ಸೆಂಟರ್ ತಿಳಿಸಿದೆ.

'ಡಾ.ಮಾಧವ ಗಾಡ್ಗೀಳ್ ಸಮಿತಿ ವರದಿ ಜಾರಿಗೊಳಿಸಲಿ'
ಚಿಕ್ಕಮಗಳೂರು: ಪಶ್ಚಿಮಘಟ್ಟ ಪ್ರದೇಶದ ಸಂರಕ್ಷಣೆಗಾಗಿ ಡಾ. ಮಾಧವ ಗಾಡ್ಗೀಳ್ ಸಮಿತಿ ನೀಡಿರುವ ವರದಿಯನ್ನು ಜಾರಿಗೊಳಿಸುವಂತೆ ಜನಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಸದಸ್ಯ ಹಾಗೂ ಪಶ್ಚಿಮಘಟ್ಟ ಸಂರಕ್ಷಣಾ ಹೋರಾಟ ವೇದಿಕೆ ಸಂಚಾಲಕ ನಾಗೇಶ್ ಅಂಗೀರಸ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಡಾ. ಕಸ್ತೂರಿ ರಂಗನ್ ವರದಿ ಕುರಿತು ಸರ್ಕಾರ ತನ್ನ ಗುಪ್ತ ಅಜೆಂಡಾವನ್ನು ಜಾರಿಗೊಳಿಸಿ ಪಶ್ಚಿಮಘಟ್ಟವನ್ನು ನಾಶಪಡಿಸಲು ಕಾರಣವಾಗಿರುವ ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಕಿರು ಜಲವಿದ್ಯುತ್ ಯೋಜನೆಗೆ ಅವಕಾಶ ನೀಡಬೇಕೆಂದು ರಾಜ್ಯ ಸಚಿವ ಸಂಪುಟದ ಉಪ ಸಮಿತಿ ಏಪ್ರಿಲ್ 30ರಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಕೇಳುತ್ತಿರುವ ಸರ್ಕಾರದ ಕ್ರಮ ಸಂಶಯಕ್ಕೆಡೆ ಮಾಡಿಕೊಟ್ಟಿದೆ. ಸಚಿವ ಸಂಪುಟದ ಉಪ ಸಮಿತಿಯಲ್ಲಿರುವ ಸಚಿವರೊಬ್ಬರು ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಡಾ. ಮಾಧವ ಗಾಡ್ಗೀಳ್ ವರದಿಯನ್ನು ಮೂಲೆ ಗುಂಪು ಮಾಡಿದ ಸರ್ಕಾರಗಳು ಇದೀಗ ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿಯ ವಿರುದ್ಧವಾದ ತೀರ್ಮಾನವನ್ನು ತೆಗೆದುಕೊಂಡು ತಾನಿನ್ನೂ ಗಣಿಗಾರಿಕೆ ಲಾಭಿಯಿಂದ ಹೊರ ಬಂದಿಲ್ಲವೆಂಬ ಸಂದೇಶವನ್ನು ನೀಡಿದ್ದು, ಸರ್ಕಾರ ಈ ನಿಲುವನ್ನು ವೇದಿಕೆ ಖಂಡಿಸುತ್ತದೆ ಎಂದರು.
ಕೇಂದ್ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇರಳದಲ್ಲಿ ಪಶ್ಚಿಮಘಟ್ಟಗಳ ಬಗ್ಗೆ ಹೈರೇಂಜ್ ಹಿಲ್ ಕೌನ್ಸಿಲ್ ನೇತೃತ್ವದಲ್ಲಿ ನಡೆದ ಚಳವಳಿನ್ನು ನೆಪ ಮಾಡಿಕೊಂಡು ಚುನಾವಣಾ ಲಾಭದ ಉದ್ದೇಶದಿಂದ ಕರಡು ಘೋಷಣೆ ಹೊರಡಿಸಿದೆ ಎಂದು ಹೇಳಿದರು.

ವಿಧಾನಪರಿಷತ್ ಸಭಾಪತಿ ಜಿಲ್ಲಾ ಪ್ರವಾಸ
ಶಿವಮೊಗ್ಗ: ವಿಧಾನ ಪರಿಷತ್‌ನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಇಂದು ಬೆಳಗ್ಗೆ 11 ಗಂಟೆಗೆ ಸಾಗರಕ್ಕೆ ತೆರಳಿ, 11.30ಕ್ಕೆ ಭೀಮನಕೋಣೆ-ನುಂಗರವಳ್ಳಿ ಗ್ರಾಮದ ಬುದ್ಧಿಮಾಂಧ್ಯ ಮಕ್ಕಳ ಶಾಲೆಗೆ ಭೇಟಿ ನೀಡಿ, ಪರಿವೀಕ್ಷಣೆ ನಡೆಸುವರು. ಮಧ್ಯಾಹ್ನ 12.30ಕ್ಕೆ ಹೊಸನಗರಕ್ಕೆ ತೆರಳಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. 2 ಗಂಟೆಗೆ ಹೊಸನಗರ ತಾಲೂಕಿನ ಜೇನಿಗ್ರಾಮದಲ್ಲಿರುವ ಅನಾಥಮಕ್ಕಳ ಶಾಲೆಗೆ ಭೇಟಿ ನೀಡಿ, ಪರಿವೀಕ್ಷಣೆ ನಡೆಸಿ, 3ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಿ, ವಾಸ್ತವ್ಯ ಮಾಡುವರು. ಮೇ 26ರಂದು ಬೆಳಿಗ್ಗೆ 9ಗಂಟೆಗೆ ಹುಬ್ಬಳ್ಳಿಗೆ ತೆರಳುವರು. ಸಂಜೆ 5 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಮೇ 27ರಂದು ಬೆಳಿಗ್ಗೆ 7.30ಕ್ಕೆ ಬೆಂಗಳೂರಿಗೆ ತೆರಳುವರು.

ಹಲವೆಡೆ ವಿದ್ಯುತ್ ವ್ಯತ್ಯಯ ಇಂದು
ಶಿವಮೊಗ್ಗ: ಆಲ್ಕೊಳ 110-11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ 25ರಂದು ಸರಬರಾಜಾಗುವ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾರ್ಯದಿಂದ ವಿದ್ಯುತ್ ನಿಲುಗಡೆ ಮಾಡುತ್ತಿರುವುದಾಗಿ ಮೆಸ್ಕಾಂ ತಿಳಿಸಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಈ ಕೇಂದ್ರದಿಂದ ಸರಬರಾಜು ಆಗುವ ಕೈಗಾರಿಕಾ ವಸಾಹತು, ಶರಾವತಿ ನಗರ, ಸಾಗರ ರಸ್ತೆ ಮತ್ತು ಸುತ್ತಮುತ್ತಲು ವಿದ್ಯುತ್ ವ್ಯತ್ಯಯವಾಗಲಿದೆ. ಮೇ 27ರಂದು ಕೆಎಚ್‌ಬಿ ಕಾಲೋನಿ, ಕಲ್ಲಹಳ್ಳಿ, 100 ಅಡಿ ರಸ್ತೆ, 60 ಅಡಿ ರಸ್ತೆ, ಕಾಶಿಪುರ, ತಿಮ್ಮಕ್ಕ ಲೇ ಔಟ್, ಕೆಂಚಪ್ಪ ಲೇಔಟ್, ವೀರಣ್ಣ ಲೇಔಟ್, ಕಾಶಿಪುರ ಮುಖ್ಯರಸ್ತೆ, ರೇಣುಕಾಂಬ ಬಡಾವಣೆ, ಪೊಲೀಸ್ ಚೌಕಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ಕೈಗಾರಿಕಾ ತರಬೇತಿ ಪ್ರವೇಶ ಪ್ರಕ್ರಿಯೆ
ಶಿವಮೊಗ್ಗ: ಉದ್ಯೋಗ ಮತ್ತು ತರಬೇತಿ ಇಲಾಖೆಯು 2014-15ನೇ ಸಾಲಿನ ಸರ್ಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರವೇಶ ಪ್ರಕ್ರಿಯೆಯು ಮೇ 20ರಿಂದ ಆರಂಭಗೊಂಡಿದ್ದು, ಪ್ರವೇಶಾರ್ಥಿಗಳು ಜೂನ್ 5ರೊಳಗಾಗಿ ಆನ್‌ಣಲೈನ್ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
 ವಿವರಗಳಿಗಾಗಿ ಅಂತರ್ಜಾಲ ತಾಣ www.emptrg.kar.nic.in v www.detkarnataka.org.in ನ್ನು ವೀಕ್ಷಿಸಬಹುದಾಗಿದೆ.ರ್ಕಾಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ.

ಪ್ರವೇಶಾರ್ಥಿಗಳಿಗೆ ಸೂಚನೆ
ಶಿವಮೊಗ್ಗ- ಸರ್ಕಾರಿ- ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಎಸಸ್ಸಿವಿಟಿ ಯೋಜನೆಯಡಿಯಲ್ಲಿ ಸಂಯೋಜನೆ ಪಡೆಯದೆ ಪ್ರವೇಶ ಮಾಡಿಕೊಳ್ಳದಂತೆ ಉದ್ಯೋಗ ಮತ್ತು ತರಬೇತಿ ಇಲಾಖೆಯ ಪ್ರಕಟಣೆ ತಿಳಿಸಿದೆ. ಪ್ರವೇಶಾರ್ಥಿಗಳು ಪ್ರವೇಶ ಪಡೆಯುವ ಮುನ್ನ ವೃತ್ತಿ- ಘಟಕಗಳು ಸಂಯೋಜನೆಗೊಂಡಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಭದ್ರಾವತಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಮುಖ್ಯವಾಹಿನಿಗೆ ಬಾಲಕಾರ್ಮಿಕ ಸದ್ದಾಂ
ಶಿವಮೊಗ್ಗ- ನಗರದ ಲಷ್ಕರ್ ಮೊಹಲ್ಲಾದ ಮೆರಬ್‌ಸ್ಟೋರಸ್‌ನ ಮೇಲೆ ಬಾಲಕಾರ್ಮಿಕ ಅಧಿಕಾರಿಗಳು ದಢೀರ್ ದಾಳಿ ನಡೆಸಿ, ಅಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಾಲಕಾರ್ಮಿಕ ಸದ್ದಾಂನನ್ನು ಕೆಲಸದಿಂದ ಮುಕ್ತಿಗೊಳಿಸಿದ್ದಾರೆ. ಆತನನ್ನು ಬಾಲಕಾರ್ಮಿಕರ ವಿಶೇಷ ವಸತಿ ಶಾಲೆಗೆ ದಾಖಲಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ ಎಂ.ಪಿ. ವಿಶ್ವನಾಥ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒತ್ತುವರಿ ತೆರವು: ಸಿಬಿಐ ತನಿಖೆ  ಬೇಡ ಮೀಗಾ ಆಗ್ರಹ
ಚಿಕ್ಕಮಗಳೂರು: ಒತ್ತುವರಿ ತೆರವು ಪ್ರಕರಣವನ್ನು ಸಿಪಿಐ ತನಿಖೆಗೆ ವಹಿಸುವಂತೆ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಸಮಾಜ ಪರಿವರ್ತನಾ ಸಮುದಾಯದ ಮುಖಂಡರಾದ ಎಸ್.ಆರ್. ಹಿರೇಮಠ್ ಅವರು ಮನವಿ ಮಾಡಿರುವುದನ್ನು ಕೆಪಿಸಿಸಿ ಕಿಸಾನ್ ಘಟಕದ ಉಪಾಧ್ಯಕ್ಷ ಸಚಿನ್ ಮೀಗಾ ಖಂಡಿಸಿದ್ದು, ಈ ಮನವಿಯಲ್ಲಿ ಹಿರೇಮಠ್ ಅವರ ವೈಯಕ್ತಿಕ ಹಿತಾಸಕ್ತಿ ಅಡಗಿದೆ ಎಂದು ಆರೋಪಿಸಿದ್ದಾರೆ.
ರೈತರು ಮತ್ತು ಕಾರ್ಮಿಕರು ಮಾಡಿರುವ ಒತ್ತುವರಿಯನ್ನು ತೆರವುಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ವಾದಿಸಿರುವ ಹಿರೇಮಠ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಇದರಿಂದಾಗಿ ರೈತರು ಹಾಗೂ ಕಾರ್ಮಿಕರು ಬೀದಿಗೆ ಬೀಳಲಿದ್ದಾರೆ. ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು. ಹಿರೇಮಠ್ ರೈತರು ಮತ್ತು ಕೂಲಿ ಕಾರ್ಮಿಕರ ಒತ್ತುವರಿಯನ್ನು ಸಿಬಿಐ ತನಿಖೆಗೆ ಒಳಪಡಿಸಲು ಮುಂದಾದರೆ ಅವರ ವಿರುದ್ಧ ರೈತರ ಹಾಗೂ ಕೂಲಿ ಕಾರ್ಮಿಕರ ಜತೆಗೂಡಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಈ ವಿಚಾರವನ್ನು ಕೂಡಲೇ ಕೈಬಿಡಬೇಕು ಎಂದಿರುವ ಮೀಗಾ, ಜೂನ್ 6ರಂದು ಒತ್ತುವರಿ ವಿಚಾರ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement