ತಪ್ಪಾಯ್ತು ತಿದ್ಕೋತೀವಿ
(ನಿನ್ನೆಯಿಂದ ಮುಂದುವರಿದಿದ್ದು)
'29ನೆಯ ಪ್ರಶ್ನೆಯನ್ನು ಶಿಕ್ಷಕರೂ ಸಹ ಅರ್ಥಮಾಡಿಕೊಳ್ಳುವಲ್ಲಿ ಎಡವಲು ಸಾಧ್ಯವಿದೆ. ಪ್ರಶ್ನೆ ಹೀಗಿದೆ: ' ಈ ಪದ್ಯಗಳು ಮಾತ್ರ ಗಣಗಳ ಗುಂಪಿಗೆ ಸೇರುವುದಿಲ್ಲ' 'ಈ ಪದ್ಯಗಳು ಮಾತ್ರಾ ಗಣಗಳ ಗುಂಪಿಗೆ ಸೇರುವುದಿಲ್ಲ' ಎಂದರ್ಥವೇ? ಅಥವಾ 'ಈ ಪದ್ಯಗಳು ಮಾತ್ರ, ಗಣಗಳ ಗುಂಪಿಗೆ ಸೇರುವುದಿಲ್ಲ' ಎಂದರ್ಥವೇ? ಸ್ಪಷ್ಟವಾಗಿಲ್ಲ. ಕೊಟ್ಟಿರುವ ಉತ್ತರಗಳಲ್ಲಿ ಆಧುನಿಕವಾದ 'ಭಾವಗೀತೆ'ಗಳು ಛಂದೋನೀತಿಯಿಂದ ವಿನಾಯಿತಿಗೊಳಗಾಗಬಹುದಾದುದರಿಂದ ಅದುವೇ ಉತ್ತರವೋ ಎಂಬುದು ನನಗೂ ಅರ್ಥವಾಗಲಿಲ್ಲ. 'ಜಾನಪದ ಗೀತೆ'ಯೂ ಛಂದೋಬದ್ಧ ಶಾಸ್ತ್ರ ಪರಿಮಿತಿಯಿಂದ ಅತೀತವಾದುದು. ಯಾವುದು ಸರಿಯಾದ ಉತ್ತರವೆಂಬುದನ್ನು ನಿಖರವಾದ ವಿವರಣೆಯೊಂದಿಗೆ ಪ್ರಶ್ನಿಸಿದ ಗುರುಗಳು ನೀಡುವರೇ?'
'32ನೇ ಪ್ರಶ್ನೆಗೆ ನೀಡಿರುವ ಉತ್ತರಗಳಲ್ಲಿ 'ಉಪಮಾನ' ಎಂದು ಬಳಸಿರುವುದೂ ಸಾಧುವಲ್ಲ. 'ಉಪಮಾ ಅಲಂಕಾರ' ಎಂದೆನ್ನುತ್ತಾರೆಯೇ ವಿನಾ (ವಿನಃ ಎಂದು ಬರೆಯಬೇಡಿ) 'ಉಪಮಾನ ಅಲಂಕಾರ' ಎಂದು ಹೇಳುವುದಿಲ್ಲ.'
'33ನೇ ಪ್ರಶ್ನೆ: 'ಕನ್ನಡ ಅಕ್ಷರದಲ್ಲಿರುವ ಯೋಗ ವಾಹಕಗಳು' ಎಂದು ಬಳಸಿದ್ದಾರೆ. 'ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಕಗಳು' ಎಂದೆನ್ನಬೇಕು. 34ನೇಯ ಪ್ರಶ್ನೆಗೆ ನೀಡಿದ ಆಯ್ಕೆ ಉತ್ತರಗಳಲ್ಲಿ 'ತದ್ಧತಾಂತಭಾವನಾಮ' ತದ್ಧತಾಂತ ಅವ್ಯಯ' ಎಂದು ಅಕ್ಷರದೋಷಗಳಿವೆ. ಅವು 'ತದ್ಧಿತಾಂತ ಭಾವನಾಮ' 'ತದ್ಧಿತಾಂತಾವ್ಯಯ' ಎಂದಾಗಬೇಕು.'
'3ನೇಯ ಪ್ರಶ್ನೆ 'ಕೆಳಗಿನವುಗಳಲ್ಲಿ ಗುಣವಾಚಕಕ್ಕೆ ಉದಾಹರಣೆ' ಎಂದು ಪ್ರಶ್ನಿಸಿ ನೀಡಿರುವ ಆಯ್ಕೆ ಉತ್ತರಗಳಲ್ಲಿ 'ಕರಿಯ' 'ಕಮ್ಮಿ' ಪದಗಳನ್ನೂ ನೀಡಿರುತ್ತಾರೆ-ಕರಿಕೋಟು, ಕರಿಯ ಕೋಟು (ಕಪ್ಪು ಕೋಟು) ಎಂದು ಬಳಸಿದಾಗ 'ಕರಿಯ' ಎಂಬುದು ಗುಣವಾಚಕವಾಗುತ್ತದೆ.'
"ಕಡಿಮೆ' ಎಂಬರ್ಥದಲ್ಲಿ ಬಳಕೆಯಾಗುವ 'ಕಮ್ಮಿ' ಎಂಬ ಪದವೂ ಗುಣವಾಚಕವಾಗಬಲ್ಲದು. ಹೀಗಿರುವಾಗ ಪ್ರಶ್ನೆ ಸಾಧುವೆಂದು ಹೇಳಲಾಗದು.'
'ಪ್ರಶ್ನೆ ಪತ್ರಿಕೆ ತಯಾರಿಸುವುದೂ ಒಂದು ಕಲೆ. ಕೂಲಂಕಷವಾಗಿ ಪರಿಶೀಲನೆ ಮಾಡದೆ ಪ್ರಶ್ನೆ ಪತ್ರಿಕೆ ನೀಡುವುದು ಅಪೇಕ್ಷಣೀಯವಲ್ಲ. ಗುರುಗಳು ಸುಧಾರಿಸಿಕೊಳ್ಳುವುದು ಲೇಸೆಂದು ಭಾವಿಸುತ್ತೇನೆ' ಎಂದಿದ್ದಾರೆ.
ಮೈಸೂರಿನ ಕುವೆಂಪುನಗರದಿಂದ ಸಿ. ದಿನಮಣಿ ರಾವ್ ಅವರು ಬರೆಯುತ್ತಾರೆ- 'ಜು.25ರಂದು ಪುಟ 8ರಲ್ಲಿ 'ಉಪನ್ಯಾಸಕರನ್ನು ಕೆಪಿಎಸ್ಸಿ ನೇಮಕ ಮಾಡಿಕೊಳ್ಳಬೇಕೋ ಅಥವಾ ಸಿಇಟಿ ಕೌನ್ಸೆಲಿಂಗ್ ಮುಖಾಂತರ ಭರ್ತಿ ಮಾಡಿಕೊಳ್ಳಬೇಕೋ...' ಈ ಮಾಹಿತಿಯಲ್ಲಿ ಆರ್. ವಿ. ದೇಶಪಾಂಡೆ ಉನ್ನತ ಶಿಕ್ಷಣ ಸಚಿವ ಎಂದು ಪಕ್ಕದಲ್ಲಿ ಭಾವಚಿತ್ರ ಪ್ರಕಟಿಸಿದ್ದೀರಿ.'
'ಆದರೆ ಜು.2ರಂದು ಪ್ರಕಟಿಸಿದ ಮತ್ತು ಜು.25ರಂದು ಪ್ರಕಟಿಸಿದ ದೇಶಪಾಂಡೆ ಅವರ ಫೋಟೋಗೂ ವ್ಯತ್ಯಾಸವಿದೆ. ಜು.25ರಂದು ಪ್ರಕಟಿಸಿದ ಫೋಟೊ ದೇಶಪಾಂಡೆ ಅವರದ್ದೇ ಹೌದೋ ಅಲ್ಲವೋ ಎಂಬ ಅನುಮಾನ ಮೂಡುತ್ತಿದೆ' ಎಂದಿದ್ದಾರೆ.
ಥಟ್ಟನೆ ನೋಡಿದರೆ ಈ ರೀತಿ ಅನುಮಾನ ಮೂಡುವುದು ಸಹಜ. ಆದರೆ ಎರಡೂ ದೇಶಪಾಂಡೆ ಅವರದ್ದೇ ಫೋಟೊ.
-ವಿಶ್ವೇಶ್ವರಭಟ್