ರಾಜಕಾರಣಿಗಳಿಗೆ ವಿಶೇಷ ಹಕ್ಕು, ಅಧಿಕಾರ ಬೇಡ
ರಾಜಕೀಯ ಪಕ್ಷಗಳೂ ಮಾಹಿತಿ ಹಕ್ಕಿನ ಕಾಯಿದೆಯ ವಿಧಿ ನಿಯಮಗಳಿಗೆ ಬದ್ಧವೆನ್ನುವ ಕೇಂದ್ರ ಮಾಹಿತಿ ಆಯೋಗದ ತೀರ್ಪನ್ನು ರದ್ದು ಪಡಿಸುವಂತಹ ರೀತಿಯಲ್ಲಿ ಕಾಯಿದೆಯನ್ನೇ ಬದಲಾಯಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿರುವುದು ದೇಶದಲ್ಲಿ ಜನತಾಂತ್ರಿಕ ಸಂಸ್ಥೆಗಳಲ್ಲಿನ ಪಾರದರ್ಶಕತೆಯ ಬೇಡಿಕೆಯನ್ನೇ ತಳ್ಳಿಹಾಕಿದಂತೆ ಆಗಿದೆ.
ಕೇಂದ್ರ ಮಾಹಿತಿ ಆಯೋಗದ ತೀರ್ಪು ಆರು ಪ್ರಮುಖ ಪಕ್ಷಗಳಿಗೆ ಮಾತ್ರ ಅನ್ವಯವಾಗುವಂತಹದ್ದು. ಆ ತೀರ್ಪಿನಂತೆ ಪಕ್ಷದ ಆಂತರಿಕ ವ್ಯವಹಾರಗಳನ್ನು ಕುರಿತು ಯಾರಾದರೂ ಮಾಹಿತಿಯನ್ನು ಕೇಳಿದರೆ ಅದನ್ನು ಕೊಡಬೇಕು. ಅದಕ್ಕಾಗಿ ಪಕ್ಷದಲ್ಲಿ ವಿಶೇಷ ವ್ಯವಸ್ಥೆಯಾಗಬೇಕು.
ಕೇಂದ್ರ ಮಾಹಿತಿ ಆಯೋಗದ ತೀರ್ಪು ಇತರ ಎಲ್ಲ ಸಂಸ್ಥೆಗಳಿಗೂ ಅನ್ವಯವಾಗುವಂತೆ ರಾಜಕೀಯ ಪಕ್ಷಗಳಿಗೂ ಅನ್ವಯವಾದಾಗ ಮಾತ್ರ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಅಂತರಂಗ ಶುದ್ಧಿ ಮೂಡುವುದು ಸಾಧ್ಯ. ಸರ್ಕಾರದ ಎಲ್ಲ ಹಂತಗಳಲ್ಲೂ ಪಾರದರ್ಶಕತೆಯನ್ನು ಅಪೇಕ್ಷಿಸುವ ರಾಜಕಾರಣಿಗಳು ತಮ್ಮದೇ ಆದ ಸಂಘಟನೆಗಳ ಅಂತರಂಗದ ಆಗು-ಹೋಗುಗಳನ್ನು ಕುರಿತಂತೆ ಪಾರದರ್ಶಕತೆಗೆ ವಿರೋಧವಾಗಿರುವುದೇಕೆ? ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ. ಪಕ್ಷದ ಆಂತರಿಕ ವೇದಿಕೆಗಳಲ್ಲಿ ಅವು ಚರ್ಚೆಯಾಗಲೂಬಹುದು. ಅದನ್ನೆಲ್ಲ ಬಹಿರಂಗಪಡಿಸುವುದು ಕಷ್ಟವೆನ್ನುವುದು ಕೆಲವು ಪಕ್ಷಗಳ ವಾದ. ಅದು ಅರ್ಥವಾಗುವಂತಹದ್ದು. ಆದರೆ ಮಾಹಿತಿಯನ್ನು ಬಯಸುವವರು ದಾಖಲೆಗಳನ್ನಷ್ಟೇ ಕೇಳುವುದು.
ಯಾವ ಪಕ್ಷವೂ ತನ್ನ ಆಂತರಿಕ ಸಮಿತಿಗಳ ಕಾರ್ಯಕಲಾಪದ ಚರ್ಚೆಯ ವಿವರಗಳ ದಾಖಲೆಯನ್ನು ಇಟ್ಟಿರುವುದಿಲ್ಲ. ಸ್ಥೂಲವಾಗಿ ಚರ್ಚೆಯ ಸಾರಾಂಶವನ್ನಷ್ಟೇ ನಿರ್ಣಯಗಳ ಸ್ವರೂಪದಲ್ಲಿ ದಾಖಲಿಸುತ್ತವೆ. ಅದನ್ನು ಒದಗಿಸುವುದರಿಂದ ಪಕ್ಷಗಳಿಗೆ ಆಗುವ ನಷ್ಟವೇನು?
ಹೇಗಿದ್ದರೂ ಹಣಕಾಸಿನ ವ್ಯವಹಾರ, ಆದಾಯದ ಮೂಲಗಳು, ಖರ್ಚಿನ ವಿವರಗಳನ್ನು ಈಗಲೂ ಕಾಯಿದೆಯಂತೆ ಆದಾಯ ತೆರಿಗೆ ಇಲಾಖೆಗೆ, ಚುನಾವಣೆ ಆಯೋಗಕ್ಕೆ ಸಲ್ಲಿಸಲೇಬೇಕು. ಅದೇ ವಿವರಗಳನ್ನು ವ್ಯಕ್ತಿಗಳು ಅಥವಾ ಸಂಸ್ಥೆಗಳು ಕೇಳಿದಾಗ ಅದನ್ನು ಒದಗಿಸಿದರೆ ಆಗುವ ಅನಾಹುತವಾದರೂ ಏನು?
ರಾಜಕಾರಣಿಗಳು ಬಾಯಿಬಿಟ್ಟು ಹೇಳದೇ ಇದ್ದರೂ ತಾವು ಜನಸಾಮಾನ್ಯರಿಗಿಂತ ಭಿನ್ನ, ತಮ್ಮ ಕಾರ್ಯ ವ್ಯಾಪ್ತಿಯೇ ಬೇರೆ, ತಮ್ಮ ಸಂಘಟನೆಗಳ ಸ್ವರೂಪವೂ ಬೇರೆ ಎಂದು ಭಾವಿಸಿರುವಂತಿದೆ. ಆದರೆ ಆ ವರ್ಗಕ್ಕೆ ಸಂವಿಧಾನದಲ್ಲಿ ಯಾವ ವಿಶೇಷ ಹಕ್ಕೂ ಇಲ್ಲ. ಜನತಾಂತ್ರಿಕ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ವಿಶಿಷ್ಟವಾದ ಪಾತ್ರವಿದೆ ಎನ್ನುವುದು ನಿಜ. ಅದಕ್ಕಾಗಿ ಅವರಿಗೆ ಸಂಸದೀಯ ಸದನಗಳಲ್ಲಿ ವಿಶೇಷವಾದ ಹಕ್ಕು- ಅಧಿಕಾರವನ್ನು ನೀಡಲಾಗಿದೆ. ಆದರೆ ಸದನದ ಹೊರಗಡೆ ಅವರೂ ಸಾಮಾನ್ಯ ಕಾಯಿದೆಗೆ ಬದ್ಧರೇ. ಸಂಸದರಿಗೆ, ಅವರ ಕೆಲಸವನ್ನು ಮಾಡುವುದಕ್ಕೆ ಅಗತ್ಯ ಎನಿಸಿದ ಸೌಲಭ್ಯಗಳೂ ಇವೆ. ಸೌಲಭ್ಯ ಬೇರೆ, ಅಧಿಕಾರ ಬೇರೆ. ರಾಜಕೀಯ ಪಕ್ಷಗಳು ತಾವು ಪ್ರತಿನಿಧಿಸುವ ಜನವರ್ಗಗಳಿಗಿಂತ ಭಿನ್ನವಾದ ವ್ಯವಸ್ಥೆಗೆ ಸೇರಿದ ಸಂಘಟನೆಗಳು ಎಂದು ತಿಳಿದುಕೊಳ್ಳುವುದೇ ತಪ್ಪು.
ಮುಕ್ತ ಆರ್ಥಿಕ ವ್ಯವಸ್ಥೆಯಲ್ಲಿ ರಾಜಕೀಯ, ಸಾಮಾಜಿಕ ವ್ಯವಸ್ಥೆಗಳೂ ಮುಕ್ತವಾಗಿರಬೇಕು. ಪಾರದರ್ಶಕವಾಗಿರಬೇಕು. ಅಂತರಂಗದ ನಂಬಿಕೆ ಬಹಿರಂಗ ವರ್ತನೆಯಲ್ಲಿ ವ್ಯತ್ಯಾಸವಿರಬಾರದು. ಹಾಗಿದ್ದರೆ ಸಂಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೇನು ಅಭ್ಯಂತರ? ಜನರ ಒತ್ತಡ ಬಿದ್ದಾಗಲೇ ಈಗಿನ ರಾಜಕಾರಣಿಗಳ ವರ್ತನೆ ಬದಲಾಗುವುದು.
ಈಗ ರಾಜಕಾರಣಿಗಳನ್ನು ಭಾದಿಸುತ್ತಿರುವ ಇನ್ನೊಂದು ಪ್ರಮುಖ ವಿಚಾರವೆಂದರೆ ಕ್ರಿಮಿನಲ್ ಆರೋಪದ ಮೇಲೆ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದವರು ಆ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸಿದ್ದರೂ ಸದನಗಳ ಸದಸ್ಯರಾಗಿ ಮುಂದುವರಿಯುವಂತಿಲ್ಲ ಎನ್ನುವ ಸುಪ್ರೀಮ್ ಕೋರ್ಟಿನ ತೀರ್ಪು ಈಗ ಕೆಳ ನ್ಯಾಯಾಲಯದಲ್ಲಿ ಶಿಕ್ಷೆಯಾದರೂ, ಮೇಲ್ಮನವಿ ಸಲ್ಲಿಸಿ, ತಮ್ಮ ತಮ್ಮ ಸ್ಥಾನಗಳಲ್ಲಿ ಮುಂದುವರಿಯುವ ಅವಕಾಶ ಇಲ್ಲ. ಹಿಂದೆ ಇತ್ತು.
ಈ ತೀರ್ಪಿನಿಂದ ಅನೇಕರು ಹೌಹಾರಿದ್ದಾರೆ. ಕನಿಷ್ಠ ಪಕ್ಷ ಒಂದು ರಾಜ್ಯದ ಮುಖ್ಯಮಂತ್ರಿಯ ಮೇಲಿನ ಭ್ರಷ್ಟಾಚಾರದ ವಿಚಾರಣೆ ಮುಕ್ತಾಯದ ಹಂತ ತಲುಪಿದೆ. ಆ ಪ್ರಕರಣದ ತೀರ್ಪು ಪ್ರಕಟವಾದ ಕೂಡಲೇ ಅವರಿಗೆ ಶಿಕ್ಷೆಯಾದರೆ, ಸ್ಥಾನ ಬಿಡಬೇಕಾಗುತ್ತದೆ. ಅದೇ ತೀರ್ಪಿನಲ್ಲಿ ಕನಿಷ್ಠ ಪಕ್ಷ ಇಬ್ಬರು ಕೇಂದ್ರ ಮಂತ್ರಿಗಳಿದ್ದಾರೆ. ರಾಜ್ಯಗಳಲ್ಲಿ ಎಷ್ಟು ಜನ ಶಾಸಕರು, ಸಂಸತ್ ಸದಸ್ಯರು ಈ ಅವಸ್ಥೆಯಲ್ಲಿದ್ದಾರೋ ಗೊತ್ತಿಲ್ಲ. ಸುಪ್ರೀಮ್ ಕೋರ್ಟಿನ ತೀರ್ಪಿನಂತೆ, ಕ್ರಿಮಿನಲ್ ಆರೋಪಗಳ ವಿಚಾರಣೆಯನ್ನು ಎದುರಿಸುತ್ತಿರುವವರು ನ್ಯಾಯಾಂಗದ ವಶದಲ್ಲೋ, ಪೊಲೀಸರ ವಶದಲ್ಲೋ ಇದ್ದರೆ ಚುನಾವಣೆಗೆ ನಿಲ್ಲುವಂತಿಲ್ಲ. ಜೈಲಿನ ಒಳಗೆ ಇದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿ, ಗೆದ್ದು ಶಾಸಕರೋ, ಮಂತ್ರಿಗಳೋ ಆಗುವ ಅವಕಾಶ ಈಗ ಇಲ್ಲ.
ಸುಪ್ರೀಮ್ ಕೋರ್ಟಿನ ಈ ತೀರ್ಪು ರಾಜಕೀಯದ ಪಾತಕೀಕರಣವನ್ನು ತಡೆಗಟ್ಟುವಲ್ಲಿ ನೆರವಾಗಬಹುದೆಂದೇ ಬಹುಜನರ ಭಾವನೆ. ಆದರೆ ಈಗಿನ ಭ್ರಷ್ಟ ಆಡಳಿತ ವ್ಯವಸ್ಥೆಯಲ್ಲಿ ಪ್ರಭುತ್ವದ ಅಧಿಕಾರವನ್ನು ಕೈವಶ ಮಾಡಿಕೊಂಡಿರುವವರು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಕ್ರಿಮಿನಲ್ ಆರೋಪಗಳ ಮೇಲೆ ಜೈಲಿಗೋ, ಪೊಲೀಸರ ವಶಕ್ಕೋ ಅಲ್ಪಾವಧಿಗೆ ಕಳುಹಿಸಬಹುದು. ಈ ಮಾತನ್ನು ಅಲ್ಲಗಳೆಯುವಂತಿಲ್ಲ. ದುರುದ್ದೇಶದ ಬಂಧನದ ವಿರುದ್ಧ ರಕ್ಷಣೆಗೆ ಸೂಕ್ತ ವ್ಯವಸ್ಥೆ ಕಾಯಿದೆಯಲ್ಲೇ ಮೂಡಿಬರಬೇಕು. ಆ ಸೌಲಭ್ಯ ಎಲ್ಲರಿಗೂ ಇರಬೇಕು.
ಅತ್ಯುನ್ನತ ಮಟ್ಟದ ನ್ಯಾಯಾಲಯದಿಂದ ಹಿಡಿದು ನ್ಯಾಯಾಂಗದ ಎಲ್ಲ ಹಂತಗಳಲ್ಲೂ ಸುಧಾರಣೆ ಅಗತ್ಯವಾಗಿದೆ. ಅದಕ್ಕಾಗಿ ನ್ಯಾಯಾಂಗ ಆಯೋಗದ ರಚನೆ ಕುರಿತು ತಕ್ಕ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು. ಇಲ್ಲಿ ಸುಪ್ರೀಮ್ ಕೋರ್ಟಿನ ಸಹಮತ ಅಗತ್ಯ.