ತಪ್ಪಾಯ್ತು ತಿದ್ಕೋತೀವಿ
"ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ, ಅಮಿಲ್ ಮಿಶ್ರಾ ಸ್ಪಿನ್ ಮೋಡಿಯ ನೆರವಿನಿಂದ ಅತಿಥೇಯ ಜಿಂಬಾಬ್ವೆ ತಂಡವನ್ನು 46 ಓವರುಗಳಲ್ಲಿ 183 ರನ್ಗಳಿಗೆ ಆಲೌಟ್ ಮಾಡಿತು. ಇದಕ್ಕುತ್ತರವಾಗಿ ಭಾರತ ತಂಡ ನಾಯಕ ಕೊಹ್ಲಿಯ ಅಜೇಯ ಬ್ಯಾಟಿಂಗ್ ನೆರವಿನಿಂದ 35.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 187 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.' ಒಂದೇ ಒಂದು ಪದದ ವ್ಯತ್ಯಾಸದಿಂದ ಎಂತಹ ಅನಾಹುತ ನಡೆದು ಹೋಯಿತು ನೋಡಿ' ಎಂದಿದ್ದಾರೆ.
ಚಿತ್ರದುರ್ಗದ ಮೊಳಕಾಲ್ಮೂರಿನಿಂದ ಎಸ್.ಟಿ. ಬ್ರಹ್ಮಾನಂದ ಅವರು ಬರೆಯುತ್ತಾರೆ- 'ಇತ್ತೀಚೆಗೆ ಪತ್ರಿಕೆಯಲ್ಲಿ ಪುನರಾವರ್ತನೆ ಹೆಚ್ಚಾಗ್ತಿದೆ. ಒಂದು, ಎರಡಕ್ಕೆ ಸುಮ್ಮನಿದ್ದ ನಾನು ಮೂರನೆಯದನ್ನೂ ಗಮನಿಸಿದಾಗ ಅನಿವಾರ್ಯವಾಗಿ ನಿಮ್ಮ ಗಮನಕ್ಕೆ ತರಲೇಬೇಕೆಂದು ನಿರ್ಧರಿಸಿ ಪತ್ರ ಬರೆಯುತ್ತಿದ್ದೇನೆ.'
'ಜು. 29ರ ಶಿವಮೊಗ್ಗ ಆವೃತ್ತಿಯ 3ನೇ ಪುಟದಲ್ಲಿ 'ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬ್ರಾಹ್ಮಣ, ವೈಶ್ಯಜನಾಂಗ: ಚಿಂತನೆ' ತಲೆಬರಹದಡಿಯ ಕಾಲಂ 2ರಲ್ಲಿನ ಮೊದಲ 3 ಪ್ಯಾರಾಗಳಲ್ಲಿನ ಸುದ್ದಿ ಅದೇ ದಿನ 11ನೇ ಪುಟದಲ್ಲಿ ಅದೇ ತಲೆ ಬರಹದಡಿಯಲ್ಲಿ ಮರುಕಳಿಸಿದೆ.'
'ಜು.24ರ 2ನೇ ಪುಟದ 1ನೇ ಕಾಲಂನಲ್ಲಿ ಹಾಗೂ ಅದೇ ಪುಟದ 3, 4, 5 ನೇ ಕಾಲಂಗಳಲ್ಲಿ ಒಂದೇ ಸುದ್ದಿಯು 'ಕಾರ್ಯಾಗಾರ' ಮತ್ತು 'ಜಿಲ್ಲಾ ಮಟ್ಟದ ಕಾರ್ಯಾಗಾರ' ಎಂದು ಎರಡು ಬೇರೆ ಬೇರೆ ತಲೆಬರಹಗಳಡಿಯಲ್ಲಿ ಪ್ರಕಟವಾಗಿದೆ.'
'ಇದೇ ದಿನ 3ನೇ ಪುಟದಲ್ಲಿ 'ನೌಕರರ ಸಂಘದ ನಿರ್ದೇಶಕರ ಆಯ್ಕೆ' ತಲೆಬರಹದಡಿಯಲ್ಲಿ ಯಾವ್ಯಾವ ಇಲಾಖೆಯಿಂದ ಎಷ್ಟೆಷ್ಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬ ಸುದ್ದಿ ಇದೆ. ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಜು.22ರಂದು ಚುನಾವಣೆ ನಡೆದು ಅಂದು ಸಂಜೆಯೇ ಫಲಿತಾಂಶ ಹೊರಬಿದ್ದಿದೆ. ಬಹುಶಃ ಈ ಸುದ್ದಿಯು ಜು. 22ರ ಪತ್ರಿಕೆಯಲ್ಲಿ ಪ್ರಕಟವಾಗಬೇಕಿತ್ತೆನಿಸುತ್ತಿದೆ.'
'ಜು. 23ರ 2ನೇ ಪುಟದ 7ನೇ ಕಾಲಂನಲ್ಲಿ ಹಿರಿಯೂರಿನ ವಾಣಿವಿಲಾಸ ಜಲಾಶಯದ ಬಗ್ಗೆ ದಪ್ಪ ಅಕ್ಷರಗಳ ಸುದ್ದಿಯಲ್ಲಿ ಜಲಾಶಯದಲ್ಲಿ ಹಾಲಿನ ನೀರಿನ ಸಂಗ್ರಹ ... ಎಂದಿದೆ. ಇದು ಜಲಾಶಯದಲ್ಲಿ ಹಾಲಿ ನೀರಿನ ಸಂಗ್ರಹ ಎಂದಿರಬೇಕಿತ್ತು.'
'ಜು.30ರ 4ನೇ ಪುಟದಲ್ಲಿ 'ಮೋದಿ ಪ್ರಧಾನಿಯಾದರೆ ಅಪಾಯ' ಸುದ್ದಿಯಲ್ಲಿ ಗುಜರಾತ್ನಲ್ಲಿ 2500 ಸಾವಿರ ಅಮಾಯಕ ಜನರ ಸಾವಿಗೆ ಕಾರಣರಾದ ಮೋದಿ ಎಂದಿದೆ. 2500 ಸಾವಿರ ಅಂದರೆ 25,00,000 (ಇಪ್ಪತ್ತೈದು ಲಕ್ಷ) ಆಗುತ್ತದೆ.'
'ಕೊನೆಯದಾಗಿ ಜು.9ರ ಸುದ್ದಿ ಸಂಕ್ಷೇಪ (ಪುಟ 5) ರಲ್ಲಿ ಜು. 12ರಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಬೇಕಿತ್ತು. ಪರಿಷ್ಕೃತ ಸಮಯದ ಪ್ರಕಾರ ಅವರು 12.30ಕ್ಕೆ ಮುಂಗಡ ಪತ್ರ ಮಂಡಿಸಲಿದ್ದಾರೆ. ಕೊನೆಯಲ್ಲಿ ಕಾಕತಾಳೀಯವೋ ಎಂಬಂತೆ ಅಂದು ಬೆಳಗ್ಗೆ 10ಕ್ಕೆ ಆರಂಭವಾಗುವ ರಾಹುಕಾಲ 12.30ಕ್ಕೆ ಮುಕ್ತಾಯಗೊಳ್ಳುತ್ತದೆ ಎಂದಿದೆ. ಜು.12 ಶುಕ್ರವಾರವಿದ್ದು, ಪ್ರತಿ ಶುಕ್ರವಾರ ರಾಹುಕಾಲ ಬೆ. 10.30ರಿಂದ ಮಧ್ಯಾಹ್ನ 12ಕ್ಕೆ ಮುಕ್ತಾಯಗೊಳ್ಳುತ್ತದೆ. ಆದರೆ ಸುದ್ದಿಯಲ್ಲಿ ರಾಹು ಕಾಲವನ್ನು ಹಿಂದು-ಮುಂದು ಅರ್ಧರ್ಧ ಗಂಟೆ ಎಳೆಯಲಾಗಿದೆ (ಹೆಚ್ಚಿಸಲಾಗಿದೆ)' ಎಂದಿದ್ದಾರೆ.
-ವಿಶ್ವೇಶ್ವರಭಟ್