ಈಗ್ಯಾಕೆ ರಾಮನ ಹೆಸರು ?
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್, ಅವರ ಮುಖ್ಯಮಂತ್ರಿ ಪುತ್ರ ಅಖಿಲೇಶ್ ಯಾದವ್ ಜತೆಗೂಡಿ ಅಶೋಕ ಸಿಂಘಾಲ್ ಸೇರಿದಂತೆ ವಿಶ್ವಹಿಂದೂ ಪರಿಷತ್ತಿನ ಆರು ಮಂದಿ ಪ್ರಮುಖರನ್ನು ಈಚೆಗೆ ಭೇಟಿಯಾಗಿದ್ದು ನಿಜ. ಈ ಭೇಟಿ ಈ ತಿಂಗಳ ಅಭಿಯಾನಕ್ಕೆ ಸಂಬಂಧಿಸಿದ ವಿಚಾರದ ಚರ್ಚೆಗೆ ಇರಬೇಕು. ಆ ಸಭೆಯಲ್ಲಿ ಚರ್ಚೆಯಾದ ವಿಷಯ ಕುರಿತಂತೆ ಮುಲಾಯಂ ಸಿಂಗ್ ಯಾದವ್‌ರ ಪಾಳಯದಿಂದ ಯಾವುದೇ ರೀತಿಯ ನಿರ್ದಿಷ್ಟವಾದ ವಿಚಾರಗಳ ಪ್ರಸ್ತಾಪ ಬಹಿರಂಗವಾಗಿ ಪ್ರಕಟವಾಗಿಲ್ಲ.
ಹಲವಾರು ವರ್ಷಗಳಿಂದಲೂ ಅಯೋಧ್ಯೆಯ ಬಾಬರಿ ಮಸೀದಿ, ರಾಮ ಜನ್ಮ ಭೂಮಿಯ ವಿಚಾರದಲ್ಲಿ ಸಮಾಜವಾದಿ ಪಕ್ಷದ ನಾಯಕರಾಗಿ ಮುಲಾಯಂ ಸಿಂಗ್ ಯಾದವ್ ಬದ್ಧವಾಗಿರುವುದು ಸಂವಿಧಾನದ ರಕ್ಷಣೆಗೆ.
ಅವರ ದೃಷ್ಟಿಯಲ್ಲಿ ಈ ವಿವಾದಕ್ಕೆ ಸಂವಿಧಾನದ ಚೌಕಟ್ಟಿನೊಳಗೇ ಪರಿಹಾರವನ್ನು ಕಂಡುಕೊಳ್ಳಬೇಕು. ಬೇರೆ ಯಾವುದೇ ಮಾರ್ಗದಿಂದಲೂ ಪರಿಹಾರ ಸಿಗುವಂತಿಲ್ಲ ಎಂದೇ ಅವರ ಭಾವನೆ. ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ನಾಡಿನ ಹಿಂದೂ ಸಂಘಟನೆಗಳ ಕರಸೇವಕರ ಆಂದೋಲನ ಹಿಂಸಾಚಾರಕ್ಕೆ ತಿರುಗಿದಾಗ, ಪೊಲೀಸರು ಗೋಲಿಬಾರ್ ಮಾಡಿದ್ದೂ ಉಂಟು.
ಅದಾದ ಅನಂತರ ಮುಲಾಯಂ ಸಿಂಗ್ ಯಾದವ್ ಬಾಬರಿ ಮಸೀದಿ ಕುರಿತಂತೆ ಯಾವುದೇ ರೀತಿಯ ಪ್ರಚೋದನಾತ್ಮಕವಾದ ಹೇಳಿಕೆಯನ್ನು ನೀಡಿಲ್ಲ. ಕಟ್ಟಡವನ್ನು ಧ್ವಂಸ ಮಾಡಿದ್ದನ್ನು ಖಂಡಿಸಿದ್ದಾರೆ ನಿಜ.
ಈಗ ಈ ವಿಚಾರಕ್ಕೆ ಜೀವ ಬರಲು ಕಾರಣವೇನು? ಸಹಜವಾಗಿಯೇ ಇನ್ನು ಕೆಲವೇ ತಿಂಗಳಲ್ಲಿ (ಅಬ್ಬಬ್ಬಾ ಎಂದರೆ ಎಂಟು) ಲೋಕ ಸಭೆಗೆ ಚುನಾವಣೆ ನಡೆಯುವುದರಿಂದ ಉತ್ತರ ಭಾರತದ ಪ್ರಬಲ ಪಕ್ಷಗಳೆಲ್ಲವೂ ಬಾಬರಿ ಮಸೀದಿ - ರಾಮ ಜನ್ಮ ಭೂಮಿಯ ವಿಚಾರವನ್ನು ಬಂಡವಾಳವನ್ನಾಗಿ ಮಾಡಿಕೊಳ್ಳುವ ಪ್ರಯತ್ನ ನಡೆಸುವುದು ಸಹಜ. ಈಗಿನ ಆಂದೋಲನದ ಉದ್ದೇಶ ಕೂಡಾ ಅದೇ ಇರಬೇಕು.
ಮುಲಾಯಂ ಸಿಂಗ್ ಅವರ ಈಗಿನ ನಿಲುವು ಅವರಿಗೆ ಉತ್ತರ ಪ್ರದೇಶದಲ್ಲಿ ಮುಸ್ಲಿಮರ ದೊಡ್ಡ ಸಂಖ್ಯೆಯ ಬೆಂಬಲವನ್ನು ಗಳಿಸಿ ಕೊಟ್ಟಿರುವುದು ನಿಜ. ಅದಕ್ಕೇ ಅವರನ್ನು ಲೇವಡಿ ಮಾಡಲು ಕೆಲವು ಹಿಂದೂ ಸಂಘಟನೆಗಳು ಹಿಂದೆ "ಮೌಲಾನಾ ಮುಲಾಯಂ" ನಾಮಕರಣವನ್ನು ಸೃಷ್ಟಿಸಿದ್ದು. ಆದರೆ ಈಗ ಮುಲಾಯಂ ಸಿಂಗ್ ಯಾದವ್ ಎತ್ತರಕ್ಕೆ ಬೆಳೆದಿದ್ದಾರೆ. ಮೂರನೆಯ ರಂಗದ ನಾಯಕರಾಗಿ ಹೊರ ಹೊಮ್ಮುವ ಉಮೇದಿನಲ್ಲಿದ್ದಾರೆ.
ಅಯೋಧ್ಯೆಯ ವಿವಾದವನ್ನು ಬಗೆಹರಿಸುವ ಮಾತುಕತೆಯಲ್ಲಿ ಆಸಕ್ತಿ ವಹಿಸಿದರೆ, ದೇಶದ ಇತರ ಭಾಗಗಳಲ್ಲೂ ತಮಗೆ ಅನುಕೂಲವಾಗಬಹುದೆಂದು ಅವರು ಭಾವಿಸಿರುವಂತಿದೆ. ತಪ್ಪೇನಿಲ್ಲ. ಆದರೆ ಆ ಪ್ರಯತ್ನದ ಹಿಂದೆ ಪ್ರಾಮಾಣಿಕತೆ ಇದೆ ಎಂದು ಜನ ನಂಬುವಂತೆ ಮುಲಾಯಂ ಸಿಂಗ್ ವರ್ತಿಸಬೇಕು. ಇದು ತಂತ್ರಗಾರಿಕೆ ಆಗಬಾರದು.