ತಪ್ಪಾಯ್ತು ತಿದ್ಕೋತೀವಿ
ದೋಹಾ ಕತಾರ್‌ನಿಂದ ಶ್ರೀಹರ್ಷ ಹೆಗಡೆ ಅವರು ಬರೆಯುತ್ತಾರೆ- 'ಆ.16ರಂದು 'ಕನ್ನಡಪ್ರಭ' ಪತ್ರಿಕೆಯ (ಬೆಂಗಳೂರು ಆವೃತ್ತಿ) ಪುಟ 2ರಲ್ಲಿ 'ಶ್ರಾವಣದ ಎಫೆಕ್ಟ್: ತಗ್ಗಿತು ಚಿಕನ್, ಕೇಳೋರಿಲ್ಲ ಮಟನ್' ಎಂಬ ಶೀರ್ಷಿಕೆಯ ವರದಿಯಲ್ಲಿ, 'ಶಾಖಾಹಾರಿಗಳು ಮಾಂಸವನ್ನು ದೂರ ತಳ್ಳಿರುವುದರ ಪರಿಣಾಮ ಕೋಳಿ ಮಾಂಸದ ದರ ದಿಢೀರ್ ಇಳಿಕೆ ಕಂಡಿದೆ' ಎಂದು ಭಾಗ್ಯ ಗೌಡ ಅವರು ಬರೆದಿದ್ದಾರೆ.'
'ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ? ಮಾಂಸವನ್ನು ತಿನ್ನದ ಶಾಖಾಹಾರಿಗಳಿಂದ ಕೋಳಿ ಮಾಂಸದ ದರ ಇಳಿಕೆ ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಪತಂಗಿ ಹೇಮಲತಾ ಮುರುಳಿ ಅವರು ಕೂಡ ಇದೇ ವರದಿಗೆ ಸಂಬಂಧಿಸಿದಂತೆ ಪತ್ರ ಬರೆದಿದ್ದಾರೆ. 'ವರಮಹಾಲಕ್ಷ್ಮಿ ಹಬ್ಬದ ದಿನ ಶಾಖಾಹಾರಿಗಳನ್ನೂ ಕೋಳಿ ತಿನ್ನುವವರನ್ನಾಗಿ ಮಾಡಿದಿರಿ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಜೆ.ಪಿ. ನಗರದಿಂದ ವಿ. ಹೇಮಂತಕುಮಾರ ಅವರು ಬರೆಯುತ್ತಾರೆ- 'ಆ.15ರ ಸಂಚಿಕೆಯ ಪುಟ 8ರಲ್ಲಿ ಸಂಪಾದಕೀಯ ವಿಭಾಗದ ಸ್ವಾತಂತ್ರ್ಯೋತ್ಸವ ಮಹಾಪ್ರಗಾಥ ಶೀರ್ಷಿಕೆಯ ಲೇಖನದಲ್ಲಿ ಗುರುವಾರ ಭಾರತದ ಅರವತ್ತಾರನೆಯ ಸ್ವಾತಂತ್ರ್ಯ ದಿನದ ವಾರ್ಷಿಕೋತ್ಸವ ಎಂದು ಪ್ರಕಟವಾಗಿದೆ.'
'ಆ.15, 1947ರ ಪ್ರಕಾರ 2013ಕ್ಕೆ 66 ವರ್ಷಗಳಾಗಿದ್ದು, ನಮಗೆ ಸ್ವಾತಂತ್ರ್ಯ ದೊರೆತು ಈ ದಿನ ಆಚರಿಸುತ್ತಿರುವುದು 66ನೇ ಸ್ವಾತಂತ್ರ್ಯೋತ್ಸವವಾಗಿದೆ. ಆದರೆ ಪುಟ 18ರಲ್ಲಿ ಜಾಹೀರಾತು ವಿಭಾಗದಲ್ಲಿ 67ನೇ ಸ್ವಾತಂತ್ರ್ಯೋತ್ಸವ ಎಂದು ಪ್ರಕಟವಾಗಿದೆಯಲ್ಲ?' ಎಂದಿದ್ದಾರೆ.
ಜಾಹೀರಾತಿಗೂ ನಮಗೂ ಸಂಬಂಧವಿಲ್ಲ ಎಂದು ಸಾಕಷ್ಟು ಬಾರಿ ಸ್ಪಷ್ಟಪಡಿಸಲಾಗಿದೆ. ಆದರೂ ಸಾಕಷ್ಟು ಓದುಗರು ಜಾಹೀರಾತಿನಲ್ಲಾದ ತಪ್ಪಿನ ಕುರಿತೂ ಪತ್ರ ಬರೆಯುತ್ತಾರೆ. ಜಾಹೀರಾತು ವಿಭಾಗ ಬೇರೆ ಇರುತ್ತದೆ. ಜಾಹೀರಾತುದಾರರು ಅಷ್ಟು ಸ್ಥಳಕ್ಕೆ ಹಣಕೊಟ್ಟು ಜಾಹೀರಾತು ಪ್ರಕಟಿಸುತ್ತಾರೆ. ಆದ್ದರಿಂದ ಅಲ್ಲಿ ಬರುವ ಅಂಶಗಳು ಸರಿ ಇದೆಯೇ ಇಲ್ಲವೇ ಎಂಬುದನ್ನು ಜಾಹೀರಾತುದಾರರು ಹಾಗೂ ಜಾಹೀರಾತು ವಿಭಾಗ ನೋಡಿಕೊಳ್ಳುತ್ತದೆ.
ಒಂದೊಮ್ಮೆ ಜಾಹೀರಾತುದಾರರು ಸರಿಯಾದ ಮಾಹಿತಿ ಒದಗಿಸಿದ್ದರೂ, ಜಾಹೀರಾತು ತಪ್ಪಾಗಿ ಪ್ರಕಟವಾಗಿದ್ದರೆ ಅದಕ್ಕೆ ಜಾಹೀರಾತು ವಿಭಾಗ ಜವಾಬ್ದಾರಿ. ಇಂತಹ ಸಂದರ್ಭಗಳಲ್ಲಿ ಜಾಹೀರಾತನ್ನು ಸರಿಪಡಿಸಿ ಮತ್ತೆ ಪ್ರಕಟಿಸಲಾಗುತ್ತದೆ. ಜಾಹೀರಾತುದಾರರೇ ತಪ್ಪು ಮಾಹಿತಿ ನೀಡಿದ್ದರೆ ಅದಕ್ಕೆ ಅವರೇ ಹೊಣೆ.
ಆದ್ದರಿಂದ ಜಾಹೀರಾತಿನಲ್ಲಿ ಪ್ರಕಟವಾಗುವ ಯಾವುದೇ ತಪ್ಪಿಗೆ ಸಂಪಾದಕೀಯ ಸಿಬ್ಬಂದಿ ಹೊಣೆಗಾರರಲ್ಲ. ದಯವಿಟ್ಟು ಇನ್ನು ಮುಂದೆ ಜಾಹೀರಾತಿಗೆ ಅಥವಾ ಅಲ್ಲಿ ಆದ ತಪ್ಪುಗಳಿಗೆ ಸಂಬಂಧಿಸಿದಂತೆ ಪತ್ರ ಬರೆಯಬಾರದು. ಬರೆದಲ್ಲಿ ಅವುಗಳನ್ನು ಪ್ರಕಟಣೆಗೆ ಪರಿಗಣಿಸಲು ಸಾಧ್ಯವಾಗುವುದಿಲ್ಲ.
-ವಿಶ್ವೇಶ್ವರ ಭಟ್