ತುಂಡಾ ಬಂಧನದ ಅನಂತರ
ಭಾರತದಲ್ಲಿ ಇದುವರೆಗೆ ಸುಮಾರು ನಲವತ್ತು ಬಾಂಬ್ ಸ್ಫೋಟಗಳ ಪ್ರಕರಣದಲ್ಲಿ ಬಳಸಲಾದ ಬಾಂಬ್ ತಯಾರಿಕಾ ತಜ್ಞ ಸೈಯದ್ ಅಬ್ದುಲ್ ಕರೀಂ ಅಲಿಯಾಸ್ ತುಂಡಾ ವಿಚಿತ್ರವಾದ ಸನ್ನಿವೇಶದಲ್ಲಿ ಭಾರತ-ನೇಪಾಳ ಗಡಿಯಲ್ಲಿ ಭಾರತೀಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಆಶ್ಚರ್ಯವೇ.
ಪಾಕಿಸ್ತಾನದ ನೆಲೆಯಿಂದಲೇ ತನ್ನ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಈ ವ್ಯಕ್ತಿ ಭಾರತ-ನೇಪಾಳದ ಗಡಿಯಲ್ಲಿ ಏನು ಮಾಡುತ್ತಿದ್ದ ಎನ್ನುವುದು ಅವರ ವಿಚಾರಣೆ ನಡೆಸಿರುವ ಪೊಲೀಸರಿಗೆ ಗೊತ್ತಾಗಿರಬೇಕು. ಆದರೆ ಆ ವಿಚಾರವನ್ನು ಪೊಲೀಸರು ರಹಸ್ಯವಾಗಿಯೇ ಇಟ್ಟಿದ್ದಾರೆ.
ಇನ್ನುಳಿದಂತೆ ತುಂಡಾ ಪೊಲೀಸರಿಗೆ ವಿಚಾರಣೆಯ ಕಾಲದಲ್ಲಿ ತಿಳಿಸಿದ ಅನೇಕ ವಿಚಾರಗಳಿಗೆ ಸಾಕಷ್ಟು ಪ್ರಚಾರ ಸಿಕ್ಕಿದೆ. ದಾವೂದ್ ಇಬ್ರಾಹಿಂ (ಕುಖ್ಯಾತ ಮುಂಬೈ ದಾಳಿಯ ರೂವಾರಿ) ಕರಾಚಿಯಲ್ಲೇ ಬೇರೆ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು, ರಾವಲ್ಪಿಂಡಿಯ ಜೈಲಿನ ಒಳಗಿಂದಲೇ ಭಾರತದಲ್ಲಿನ ಲಷ್ಕರ್-ಇ- ತೊಯಿಬಾ ಸಂಘಟನೆಯ ಚಳವಳಿಯ ನಿರ್ದೇಶನದಂತಹ ಅನೇಕ ವಿಚಾರಗಳನ್ನು ತುಂಡಾ ತಿಳಿಸಿರುವುದು ಪ್ರಕಟವಾಗಿದೆ.
ದಾವೂದ್ ಇಬ್ರಾಹಿಂ ಪಾಕಿಸ್ತಾನದ ನೆಲದಲ್ಲಿ ಇಲ್ಲ ಎಂದು ಆ ರಾಷ್ಟ್ರದ ಪ್ರಮುಖರು ಆಗಿಂದ್ದಾಗ್ಗೆ ಪ್ರಕಟಿಸುತ್ತಿದ್ದದ್ದು ಹಾಗಿದ್ದರೆ ಸುಳ್ಳೇ? ಪಾಕಿಸ್ತಾನ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇಲ್ಲ ಎಂದು ಹೇಳಲೇಬೇಕಾದ ಅವಶ್ಯಕತೆ ಅಲ್ಲಿನ ಸರ್ಕಾರಕ್ಕೆ ಇದೆ. ಆದರೆ ತುಂಡಾಗೆ, ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇರುವ ವಿಚಾರವನ್ನು ಪೊಲೀಸರಿಗೆ ತಿಳಿಸುವುದರಿಂದ ಆಗುವ ಲಾಭವೇನು?
ಪೊಲೀಸರು ತನಿಖೆಯ ಕಾಲದಲ್ಲಿ ತಮ್ಮ ಗಮನಕ್ಕೆ ಬಂದ ಎಲ್ಲ ವಿಚಾರವನ್ನು ಬಹಿರಂಗಪಡಿಸುವ ಅಗತ್ಯವೂ ಇಲ್ಲ. ಅದು ನಮ್ಮ ನ್ಯಾಯಾಂಗ ಪದ್ಧತಿಗೂ ವಿರುದ್ಧವಾದದ್ದು. ಕೆಲವು ವಿಷಯಗಳನ್ನು ಮಾತ್ರ ತಿಳಿಸಿ, ಉಳಿದ ವಿಷಯಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಹಕ್ಕು ಪೊಲೀಸರಿಗೆ ಇದೆ. ಆದರೆ ಅದು ಒಂದಲ್ಲ ಒಂದು ದಿನ ಪ್ರಕಟವಾಗಲೇಬೇಕು. ನ್ಯಾಯಾಂಗಕ್ಕಾದರೂ ವಿಷಯ ತಿಳಿಯಲೇ ಬೇಕಲ್ಲ.
ಇದ್ದಕ್ಕಿದ್ದಂತೆ ಪಾಕಿಸ್ತಾನಿ ಪಡೆಗಳು ಜಮ್ಮು- ಕಾಶ್ಮೀರದ ನಿಯಂತ್ರಣ ರೇಖೆಯನ್ನು ಪದೇ ಪದೇ ಉಲ್ಲಂಘಿಸುತ್ತಿರುವುದಂತೂ ಯಾವ ದೃಷ್ಟಿಯಿಂದ ನೋಡಿದರೂ ಪ್ರಚೋದನಕಾರಿ ಘಟನೆಯೇ. ಸ್ಥಳೀಯ ಮಿಲಿಟರಿ ಅಧಿಕಾರಿಗಳಿಗೆ ಸಂದರ್ಭಕ್ಕೆ ತಕ್ಕಂತೆ ಅಗತ್ಯವಾದ ಕ್ರಮ ಕೈಗೊಳ್ಳುವ ಅಧಿಕಾರ, ಆದೇಶ ಎರಡೂ ಇದೆ.
ಅಂದರೆ ನಿಯಂತ್ರಣ ರೇಖೆಯಲ್ಲಿ, ಭಾರತದ ಸೀಮೆಯಲ್ಲಿ ಜಗಳಗಳು ನಡೆಯುವುದು ಅನಿವಾರ್ಯ ಎಂದಾಯಿತು. ಪೊಲೀಸ್ ಅಧಿಕಾರಿಗಳು ತುಂಡಾ ಹೇಳಿರುವುದನ್ನೆಲ್ಲ ನಂಬಲೇಬೇಕು ಎಂದೇನೂ ಇಲ್ಲ. ತುಂಡಾ ಹೇಳುವುದನ್ನೆಲ್ಲ ಸಂಶಯದಿಂದಲೇ ನೋಡಬೇಕು.
ಈಗಿನ ಸನ್ನಿವೇಶದಲ್ಲಿ ಭಾರತ- ಪಾಕಿಸ್ತಾನಗಳ ನಡುವೆ ಮಾತುಕತೆ ನಡೆಯಬೇಕೆ? ಮಾತುಕತೆ ಮುಂದುವರಿಯಬೇಕೇ? ಮಾತುಕತೆ ನಡೆಯಲೇಬೇಕು. ಬೇರೆ ದಾರಿಯೇ ಇಲ್ಲ.