ನಸರುಲ್ ಇಸ್ಲಾಂ ಪೆಟ್ಟಿಗೆಯಲ್ಲಿ ಏನಿತ್ತು?
ಬಂಗಾಳದ ಪ್ರಖ್ಯಾತ ಕವಿ ಖಾಜಿ ನಸರುಲ್ ಇಸ್ಲಾಂ ಒಂದು ಹಳ್ಳಿಯಲ್ಲಿ ಜನಿಸಿದ ಪ್ರತಿಭಾವಂತ. ಪ್ರಖ್ಯಾತ ಕವಿಯಾಗಿ, ಕ್ರಾಂತಿಕಾರಿ ಮನೋಭಾವದ ದೇಶಭಕ್ತನಾಗಿ ಜನಪ್ರಿಯನಾದವನು. ಆತನ ಲೇಖನಿ ಬ್ರಿಟಿಷರ ಕಾನೂನಿಗಿಂತಲೂ ಪ್ರಭಾವಶಾಲಿಯಾಗಿತ್ತು. ಸ್ವತಃ ರವೀಂದ್ರನಾಥ ಠಾಕೂರರೇ ತಮ್ಮ ಕೃತಿಯೊಂದನ್ನು ನಸರುಲ್ ಇಸ್ಲಾಂಗೆ ಅರ್ಪಿಸಿದ್ದಾರೆ ಅಂದರೆ ಆತನ ಪ್ರಭಾವ ಎಷ್ಟಿತ್ತು ಎಂದು ತಿಳಿದು ಬರುತ್ತದೆ. ಅವನ ಧ್ವನಿಯಿಂದ ಬರುತ್ತಿದ್ದ ಮಧುರ ನಿನಾದಕ್ಕೆ ಮನಸೋತ ಪೊಲೀಸು ಅಧಿಕಾರಿ ಜೋಸ್ ಎಂಬಾತ ಸಂಗೀತ ಕೇಳಲೆಂದೇ ನಸರುಲ್ನನ್ನು ಸಂಬಳ ಕೊಟ್ಟು ತನ್ನ ಬಳಿ ಇರಿಸಿಕೊಂಡಿದ್ದ. ಜೋಸ್ನ ಪತ್ನಿ ಬಂಗಾಳಿ ಹಿಂದೂ ಆಗಿದ್ದಳು. ಭಾರತೀಯ ಸಂಸ್ಕೃತಿಯ ಆರಾಧಕಳಾಗಿದ್ದ ಆಕೆ ನಸುರುಲ್ನ ಬಂಗಾಳಿ ಹಾಡುಗಾರಿಕೆಗೆ ಮನಸೋತಿದ್ದಳು. ಜೋಸ್ನ ಗೆಳೆಯ ಪಾಲ್ ಎಂಬಾತನೂ ಬಂಗಾಳಿ ಹಿಂದು ಯುವತಿಯನ್ನು ವಿವಾಹವಾಗಿದ್ದ. ಆಕೆಗೂ ಬಂಗಾಳಿ ಸಂಗೀತವೆಂದರೆ ಪ್ರಾಣ. ಆಗಾಗ್ಗೆ ಒಟ್ಟಿಗೆ ಸೇರಿ ನಸರುಲ್ನಿಂದ ಗೀತೆಗಳನ್ನು ಹಾಡಿಸುತ್ತಿದ್ದಳು. ಇಸ್ಲಾಂ ಸೈನಿಕನಾಗಿ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿ ಕಲ್ಕತ್ತಕ್ಕೆ ಹಿಂದಿರುಗಿದಾಗ ಅವನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದ. ಕ್ರಾಂತಿಕಾರಿ ಕವಿತೆಗಳನ್ನು ಬರೆದು ಜನಜಾಗೃತಿಯನ್ನುಂಟುಮಾಡಿದ. ಪ್ರಮೀಳಾ ಎಂಬ ಹಿಂದು ತರುಣಿಯನ್ನು ವಿವಾಹವಾಗಿ ಅವಳ ಆಚಾರವಿಚಾರಗಳಲ್ಲಿ ಪ್ರವೇಶಿಸದೆ ಅವಳು ಕೊನೆಯವರೆಗೂ ಹಿಂದುವಾಗಿಯೇ ಉಳಿಯಲು ಅವಕಾಶ ಮಾಡಿಕೊಟ್ಟ. ತನ್ನ ಕ್ರಾಂತಿಕಾರಿ ಕವಿತೆ ಮತ್ತು ಅಂಕಣಗಳಿಂದ ಬ್ರಿಟಿಷರ ಅವಕೃಪೆಗೆ ಪಾತ್ರವಾಗಿ ಕೆಲಬಾರಿ ಜೈಲು ಶಿಕ್ಷೆಯನ್ನು ಅನುಭವಿಸಿದ. ಕಾಳಿದೇವಿಯ ಕುರಿತಾಗಿ ಅವನು ಬರೆದ ಶ್ಯಾಮ ಗೀತೆಗಳು ಜನಮಾನಸದಲ್ಲಿ ಮಾಸದೆ ಇನ್ನೂ ಉಳಿದಿವೆ ಎಂದರೆ ಆತನ ಲೇಖನಿಯ ಪ್ರಭಾವ ಎಷ್ಟಿತ್ತು ಎಂದು ತಿಳಿದುಬರುತ್ತದೆ. ಒಮ್ಮೆ ಅವನ ಮನೆಗೆ ಬ್ರಿಟಿಷ್ ಪೊಲೀಸರು ದಾಳಿಮಾಡಿದಾಗ ನಸರುಲ್ ಎಲ್ಲ ವಸ್ತುಗಳನ್ನೂ ತಪಾಸಣೆಗೆ ಒಪ್ಪಿಸಿದರೂ ಒಂದು ಪೆಟ್ಟಿಗೆಯನ್ನು ಮಾತ್ರ ಅಧಿಕಾರಿಗಳಿಗೆ ಮುಟ್ಟಲು ಅವಕಾಶ ನೀಡಲಿಲ್ಲ. ಅದನ್ನು ಭದ್ರವಾಗಿ ಹಿಡಿದುಕೊಂಡು ಕೊಡಲು ನಿರಾಕರಿಸಿದ. ಕೊನೆಗೆ ಅಧಿಕಾರಿಗಳು ಅದನ್ನು ಬಲವಂತವಾಗಿ ಕಿತ್ತುಕೊಂಡು ನೋಡಿದಾಗ ಅದರಲ್ಲಿ ಚಿಕ್ಕವಯಸ್ಸಿನಲ್ಲಿ ಮರಣಿಸಿದ ನಸರುಲ್ನ ಮಗ ಬುಲ್ಬುಲ್ನ ಬಟ್ಟೆಗಳು, ಮುರಿದ ಆಟಿಕೆಗಳು ಮತ್ತು ಕೆಲ ಪುಸ್ತಕಗಳು ಇದ್ದುವು. ಅವುಗಳನ್ನು ಜೋಪಾನವಾಗಿ, ತನ್ನ ಮಗನ ನೆನಪಿಗೋಸ್ಕರ ಇಟ್ಟುಕೊಂಡಿದ್ದ. ನಸರುಲ್ ಗೌರವಾರ್ಥ ಬಂಗ್ಲಾದೇಶ ಮತ್ತು ಪಾಕಿಸ್ತಾನಗಳು ಅಂಚೆ ಚೀಟಿಗಳನ್ನು ಹೊರತಂದಿವೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.