ಪರಿಣಾಮಕಾರಿ ಕಲಿಕೆಗೊಂದು ಕಲಿಕಾತೋಟ
ಎಲ್ಲರೂ ತಮ್ಮ ಮನೆಯಂಗಳದಲ್ಲಿ ಸುಂದರ ತೋಟ ನಿರ್ಮಾಣ ಮಾಡಬೇಕು, ಹಸಿರು ಹುಲ್ಲಿನ ಹೊದಿಕೆ ಇರಬೇಕು, ಕಾರಂಜಿ ಇರಬೇಕು ಎಂದೆಲ್ಲಾ ಆಸೆಪಡುವುದಿದೆ. ಅದಕ್ಕಾಗಿಯೇ ಅಪಾರ ವೆಚ್ಚ ಮಾಡುವವರಿಗೇನೂ ಕೊರತೆ ಇಲ್ಲ. ಆದರೆ ಮನೆಯಂಗಳದಲ್ಲಿ ಮಕ್ಕಳ ಕಲಿಕೆಗೊಂದು ಉದ್ಯಾನ ನಿರ್ಮಿಸಿ ಮಕ್ಕಳಿಗೆ ಕಠಿಣ ಎನಿಸುವ ವಿಜ್ಞಾನ, ಗಣಿತ ಮತ್ತು ಆಂಗ್ಲ ಭಾಷೆಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ನೆರವಾಗುವ ಪಾಠೋಪಕರಣಗಳನ್ನು ಸಿದ್ಧಪಡಿಸಿದವರು ಉಡುಪಿಯ ಶಿಕ್ಷಕ ಸ.ಕು.ಪಂಗಾಳರು. ಮಾಡಿ ಕಲಿ, ನೋಡಿ ತಿಳಿ ತತ್ವದಲ್ಲಿ ನಂಬಿಕೆ ಇಟ್ಟವರು. ಕಡಿಮೆ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿ ಪಾಠೋಪಕರಣಗಳನ್ನು ತಯಾರಿಸಿ ಕಲಾತ್ಮಕವಾಗಿ ಬೋಧಿಸಲು ಇವರು ಆರಿಸಿಕೊಂಡಿದ್ದು ತಮ್ಮ ಮನೆಯಂಗಳವನ್ನೇ.
ಉಡುಪಿಯ ಅಂಬಲಪಾಡಿ ಕಿದಿಯೂರಿನಲ್ಲಿರುವ ಶ್ರೀ ನಿಲಯದ ಅಂಗಳ ಈಗ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಬಯಲು ಶಾಲೆಯಾಗಿ ಮಾರ್ಪಟ್ಟಿದೆ. ಉಪಯೋಗಿಸಿ ಬಿಸಾಡಿದ ನೀರಿನ ಬಾಟಲುಗಳಿಲ್ಲಿ ಇಂಗ್ಲಿಷ್ ಗ್ರಾಮರ್ ಕಲಿಸುತ್ತಿವೆ. ಗುಜರಿಗೆ ಹಾಕಿದ ಸೈಕಲ್ ಇಲ್ಲಿ ಗಣಿತದ ಸೂತ್ರಗಳನ್ನು ತಿಳಿಸುತ್ತಿದೆ. ಬಿಸಾಡಿದ ವೈಯರ್ ರೋಲ್ಗಳು ಮತ್ತು ಪ್ಲಾಸ್ಟಿಕ್ ಪೈಪುಗಳು ವಿಜ್ಞಾನವನ್ನು ಸರಳ ರೀತಿಯಲ್ಲಿ ಅರ್ಥ ಮಾಡಿಸುತ್ತಿವೆ. ಇವೆಲ್ಲಾ ನಮಗೆ ಅತಿ ಸುಲಭದಲ್ಲಿ ದೊರೆಯುವ ವಸ್ತುಗಳು. ಕಸದಿಂದ ರಸ ಮಾಡುವ ಕಲೆಯಲ್ಲಿ ಇವರು ಸಿದ್ಧಹಸ್ತರು. ಕನ್ನಡ ಮಾಧ್ಯಮದಿಂದ ಬಂದ ಗ್ರಾಮಾಂತರ ಮಕ್ಕಳಿಗೆ ಸುಲಭವಾಗಿ ಕಲಿಯಲು ಇಲ್ಲಿ ಭಾಷಾ ಚಕ್ರ ನಿರ್ಮಿಸಿದ್ದಾರೆ. ನಮ್ಮ ಪಠ್ಯಕ್ರಮದಲ್ಲಿ ದೃಶ್ಯ ಮಾಧ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕೆಂಬುದು ಇವರ ಅಭಿಪ್ರಾಯ. ಏಕೆಂದರೆ ದೃಶ್ಯ ಪರಿಕಲ್ಪನೆ ಸಾಹಿತ್ಯಕ ಜ್ಞಾನಕ್ಕಿಂತ ಹೆಚ್ಚು ಪರಿಣಾಮಕಾರಿ. ಇದರಿಂದ ವಾಸ್ತವದ ಸ್ಪಷ್ಟ ಚಿತ್ರಣ ಮಕ್ಕಳ ಮನದಲ್ಲಿ ಮೂಡಿ ಅದು ನಿರಂತರವಾಗಿ ಅವರ ಮನದಲ್ಲಿ ನೆಲೆ ನಿಲ್ಲುತ್ತದೆ. ಈ ಪರಿಕಲ್ಪನೆಯ ಆಧಾರದ ಮೇಲೆ ಪಂಗಾಳರ ಕಲಿಕೆಯ ತೋಟ ನಿರ್ಮಾಣವಾಗಿದೆ. ಇದು ಕೇವಲ ಮಕ್ಕಳಿಗೆ, ಶಿಕ್ಷಕರಿಗೆ ಮಾತ್ರ ಉಪಯೋಗವಾಗುತ್ತದೆ ಎಂದು ಭಾವಿಸಬಾರದು. ಇದು ಪೋಷಕರಿಗೂ ಅಷ್ಟೇ ಉಪಯುಕ್ತ. ಗ್ರಹಣ ಹೇಗಾಗುತ್ತದೆ, ಸೂರ್ಯಮಂಡಲದ ರಚನೆ, ಆಂಗ್ಲ ವ್ಯಾಕರಣದ ಸರಳ ಸೂತ್ರಗಳು, ಗಣಿತದ ಆಟಗಳು ಹೀಗೆ ಇವೆಲ್ಲಾ ಮನರಂಜಕವಾಗಿಯೂ, ಕಲಿಕೋಪಕರಣವಾಗಿಯೂ ಭೇಟಿ ನೀಡಿದವರಿಗೆ ವಿಶಿಷ್ಟ ಅನುಭವ ನೀಡುತ್ತದೆ.
ಇವರ ಕಲಿಕಾತೋಟಕ್ಕೆ ಭೇಟಿ ನೀಡಿದ ಎಲ್ಲರಿಗೂ ಸಾವಧಾನವಾಗಿ ಅರ್ಥವಾಗುವಂತೆ ವಿವರಿಸಿ ಕಲಿಕೆ ಮತ್ತು ಕಲಿಸುವ ಬಗ್ಗೆ ಆಸಕ್ತಿ ಮೂಡಿಸುತ್ತಾರೆ. ಕಲಿಕಾ ತೋಟಕ್ಕಾಗಿ ಸರ್ಕಾರದ ನೆರವಿಗೆ ಆಶಿಸದೆ ಸ್ವಂತ ವೆಚ್ಚದಲ್ಲಿ ನಿರ್ಮಾಣ ಮಾಡಿ ಸಂದರ್ಶಕರಿಗೆ ಆಸಕ್ತಿಯಿಂದ ವಿವರಿಸುವ ಅವರ ಉತ್ಸಾಹವನ್ನು ಮೆಚ್ಚಬೇಕಾದದ್ದೇ. ಸ್ವತಃ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡುತ್ತಿರುವ ಇವರು ಇತರರಿಗೆ ಮೇಲ್ಪಂಕ್ತಿಯಾಗಿದ್ದಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.