ಲೋಕಸಭೆ ವೇದಿಕೆ ಏರಿದ ಆಹಾರ ಭದ್ರತಾ ಮಸೂದೆ
ಈಗಾಗಲೇ ತುರ್ತು ಶಾಸನದ ರೂಪದಲ್ಲಿ ಸಂಯುಕ್ತ ಪ್ರಗತಿಪರ ಕೂಟದ ಮಹಾನ್ ಶಾಸನ ಎನಿಸಿಕೊಳ್ಳಬಹುದಾದ ಆಹಾರ ಭದ್ರತಾ ಯೋಜನೆ ಶಾಸನ ಜಾರಿಗೆ ಬಂದಿದೆ. ಹಲವು ರಾಜ್ಯಗಳು ಅದನ್ನು "ಸಾಂಕೇತಿಕವಾಗಿ" ಜಾರಿಗೆ ತಂದಿದ್ದೂ ಆಗಿದೆ.
ಆತಿ ಅಗ್ಗದ ದರದಲ್ಲಿ ದೇಶದ ಶೇಕಡಾ 70ರಷ್ಟು ಜನರಿಗೆ ಅಂದರೆ ಸುಮಾರು 80 ಕೋಟಿ ಜನ- ತಿಂಗಳಿಗೆ ನಿರ್ದಿಷ್ಟ ಪ್ರಮಾಣದ ಅಕ್ಕಿ- ಗೋದಿಯನ್ನು ರೇಷನ್ ಡಿಪೋ ಜಾಲದಿಂದ ಪೂರೈಸುವ ಯೋಜನೆ ಅದು. ಮಸೂದೆ ಅಂಗೀಕಾರವಾಗಿ, ಕಾಯಿದೆಯಾದಾಗ, ಬಡ ಜನವರ್ಗಗಳಿಗೆ ಅನ್ನ- ರೊಟ್ಟಿಯ ಕಾಯಿದೆಬದ್ಧ ಹಕ್ಕು ಲಭಿಸಿದಂತೆಯೇ ಆಗುವುದಕ್ಕೆ ಎಲ್ಲವೂ ಸಿದ್ಧವಾಗಿದೆ. ಅಂದಾಜು ವಾರ್ಷಿಕ ವೆಚ್ಚ: 1.25 ಲಕ್ಷ ಕೋಟಿ ರುಪಾಯಿ.
ಈಗ ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾಗದಿದ್ದರೆ ತುರ್ತು ಶಾಸನ ರದ್ದಾಗಬೇಕು. ಈಗಾಗಲೇ ಸಂಸತ್ತಿನ ಒಪ್ಪಿಗೆ ಪಡೆದ ಶಾಸನವನ್ನು ತುರ್ತು ಶಾಸನದ ಜಾಗದಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನ ಮೂರು ಬಾರಿ ನಡೆದಿದ್ದು ವಿಫಲವಾಗಿತ್ತು.
ಆಹಾರ ಭದ್ರತಾ ಕಾಯಿದೆ, ಅದರ ಈಗಿನ ಸ್ವರೂಪದಲ್ಲಿ, ಈಗಾಗಲೇ ಸೂಚಿಸಿರುವ ಬದಲಾವಣೆಗಳನ್ನು ಗಮನಿಸಿದರೆ, ದೇಶದ ಬಡವವರಿಗೆ ನೆರವು ನೀಡುವ ಮಹಾಪ್ರಯತ್ನದಂತೆ ಕಂಡುಬಂದರೂ, ಸರ್ಕಾರದ ವಿತ್ತೀಯ ಸ್ಥಿತಿಗತಿಯ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮ ಹಾಗೂ ಯೋಜನೆಯ ಜಾರಿಯಲ್ಲಿ ಕಂಡು ಬರಬಹುದಾದ ಭ್ರಷ್ಟಾಚಾರ ಕುರಿತಂತೆ, ಸಾರ್ವಜನಿಕ ವೇದಿಕೆಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಇಬ್ಬರು ಭಾರತೀಯ ಮೂಲದ ಅರ್ಥಶಾಸ್ತ್ರ ಪಂಡಿತರು- ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೆನ್ ಮತ್ತು ಡಾ॥ ಜಗದೀಶ ಭಗವತಿ ಅವರ ನಡುವಣ ಭೀಕರ ವಾಕ್ ಸಮರವನ್ನೂ ದೇಶ ಕಂಡಿದೆ.
ಇಷ್ಟೆಲ್ಲ ಸಾಲದು ಎಂಬಂತೆ, ಕಳೆದ ವಾರದಲ್ಲಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಯೋಜನಾ ಆಯೋಗದ ತಂಡಗಳು ಆಹಾರ ಶಾಸನದ ವಿತ್ತೀಯ ಪರಿಣಾಮಗಳನ್ನು ಕುರಿತು ಇನ್ನಷ್ಟು ಆಳವಾಗಿ ಅಧ್ಯಯನ ನಡೆಯಬೇಕು ಎನ್ನುವ ಅರ್ಥ ಬರುವ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿವೆ.
ಇವೆಲ್ಲದರ ನಡುವೆಯೂ ಕಾಯಿದೆಗೆ ಒಂದಲ್ಲ ಒಂದು ಸ್ವರೂಪದಲ್ಲಿ ಲೋಕಸಭೆಯ ಅಂಗೀಕಾರ ಮುದ್ರೆಯನ್ನು ದೊರಕಿಸಿಕೊಳ್ಳುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸೋಮವಾರ ಮುಂದಾಗಿದ್ದು ಒಂದು ರೀತಿಯಲ್ಲಿ ಭಾರತೀಯ ಸಂಸದೀಯ ಇತಿಹಾಸದಲ್ಲೇ ಅಪರೂಪದಲ್ಲಿ ಅಪರೂಪ ಎನ್ನಬಹುದು.
ಲೋಕಸಭೆಯಲ್ಲಿ ಸರ್ಕಾರದ ಪರವಾಗಿ ವಿಧೇಯಕವನ್ನು ಮಂಡಿಸಿದ ಆಹಾರ ಮಂತ್ರಿ ಕೆ.ವಿ. ಥಾಮಸ್ ಅವರದ್ದು ಚುಟುಕದಲ್ಲೇ ವಿಷಯದ ಪ್ರತಿಪಾದನೆ. ಅಷ್ಟರಲ್ಲೇ ಅವರು ಸಿಡಿಸಿದ ಬಾಂಬು: ಈಗಿನ ಕಾರ್ಡ್ಗಳ ಮೂಲಕ ಸೋಡಿ ದರದಲ್ಲಿ ಬಡವರಿಗೆ ಆಹಾರಧಾನ್ಯ ಹಂಚಿಕೆಯ ವ್ಯವಸ್ಥೆಯಲ್ಲಿ, ಶೇಕಡಾ 25ರಷ್ಟು ಬಡವರಿಗೆ ತಲುಪದೇ ಸೋರಿಹೋಗುತ್ತಿದೆ ಎನ್ನುವುದು ಸರ್ಕಾರಕ್ಕೂ ಗೊತ್ತಿದೆ. ಅದನ್ನು ನಿವಾರಿಸಲೆಂದೇ ಹೊಸ ವ್ಯವಸ್ಥೆಗೆ ಮುಂದಾಗಿರುವುದು.
ಅತೀ ಅಗ್ಗದ ದರದಲ್ಲಿ ಕಡು ಬಡವರಿಗೆ ಧಾನ್ಯ ಯಾವುದೇ ಕಾರಣಕ್ಕೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗದೇ ಹೋದರೆ ಅದಕ್ಕೆ ಬದಲಾಗಿ ಹಣ ಕೊಡುವ ವಿಚಾರವನ್ನು ಅವರು ಪ್ರಸ್ತಾಪಿಸಿದರು. ಇನ್ನು ಮುಂದಿನದ್ದು ಸದನಕ್ಕೆ ಬಿಟ್ಟದ್ದು.
ಪ್ರಧಾನ ಪ್ರತಿಪಕ್ಷವಾದ ಭಾರತೀಯ ಜನತಾ ಪಾರ್ಟಿಯ ಪರವಾಗಿ ಮಾತನಾಡಿದ ಹಿರಿಯ ನಾಯಕ ಮುರಳೀ ಮನೋಹರ ಜೋಷಿ ಅವರ ಭಾಷಣದ ಪ್ರಧಾನ ಅಂಶ ಎಂದರೆ 2008ರ ಚುನಾವಣೆ ಪ್ರಣಾಳಿಕೆಯಲ್ಲೇ ದಾಖಲಿಸಿದ್ದ ಆಹಾರ ಭದ್ರತೆಯನ್ನು ಕಾಯಿದೆಯ ಮೂಲಕ ಜಾರಿಗೆ ತರುವ ಪ್ರಯತ್ನ ಮಾಡಲಿಕ್ಕೆ ಸರ್ಕಾರಕ್ಕೆ ನಾಲ್ಕು ವರ್ಷಗಳ ಅನಂತರದ ಹೊಸ ಚುನಾವಣೆ ಮುನ್ನಾ ತಿಂಗಳುಗಳೇ ಬೇಕಾಗಿದ್ದೇಕೆ? ಅವರ ದೃಷ್ಟಿಯಲ್ಲಿ ಇದು ಆಹಾರ ಭದ್ರತೆಯ ಮಸೂದೆಯಲ್ಲ, ಓಟು ಭದ್ರತೆಯ ಮಸೂದೆ. ಸಂಯುಕ್ತ ಪ್ರಗತಿಪರ ಕೂಟದ ಹಾಗೂ ರಾಷ್ಟ್ರೀಯ ಸಲಹಾ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ತಾವೇ ಎದ್ದು ನಿಂತು ಹಿಂದಿಯಲ್ಲಿ "ನಾವು ಕೊಟ್ಟ ವಚನವನ್ನು ಪೂರೈಸಿದ್ದೇವೆ" ಎಂದು ಬೀಗುತ್ತಾ ಆತ್ಮವಿಶ್ವಾಸವನ್ನು ಪ್ರದರ್ಶಿಸಿದ್ದರು.
ಒಂದು ಸಿದ್ಧಪಡಿಸಿದ ಭಾಷಣವನ್ನು ಓದುವ ಶೈಲಿಯಲ್ಲೇ ಟಿಪ್ಪಣಿಯನ್ನು ನೋಡಿಕೊಂಡೇ ಮಾತನಾಡಿದ ಸೋನಿಯಾ ಗಾಂಧಿ ಮಸೂದೆಯನ್ನು ಮಂಡಿಸಿದ ದಿನವೇ ಐತಿಹಾಸಿಕ ದಿನ ಎಂದು ಹೇಳಿ, ಭಾರತ ತನ್ನ ಪ್ರಜೆಗಳ ಯೋಗಕ್ಷೇವುವನ್ನು ನೋಡಿಕೊಳ್ಳುವ ರಾಷ್ಟ್ರ ಎನ್ನುವ ಸಂದೇಶ ಈಗ ಎಲ್ಲ ಕಡೆಗೆ ಹೋಗಬೇಕು ಎಂದರು.
ಯೋಜನೆಯ ವಿಶೇಷ ಎಂದರೆ ಉತ್ತರದಾಯಿತ್ವವನ್ನು ಮಹಿಳಾ ಸ್ವಯಂ ಸೇವಕ ಸಂಘಟನೆಗಳಿಗೆ ಹಾಗೂ ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳಿಗೇ ವಹಿಸುವ ಪ್ರಸ್ತಾಪವೂ ಇತ್ತು. ಕೃಷಿ ಹಾಗೂ ಕೃಷಿಕರಿಗೂ ಇದರಿಂದ ಅನುಕೂಲ. ಯಾವ ಮಗುವೂ ಪೌಷ್ಠಿಕ ಆಹಾರದಿಂದ ಬಳಲುವಂತಿಲ್ಲ. ಧಾನ್ಯ ಹಾಳಾಗುವುದು ತಪ್ಪುತ್ತದೆ. ಹೀಗೇ ಸಾಗಿತ್ತು ಅವರ ಭಾಷಣ. ಆಹಾರ ಭದ್ರತೆ ಶಾಸನಕ್ಕೆ ಎಲ್ಲ ಬಗೆಯ ಸಂಸದೀಯ ಸಿದ್ಧತೆಗಳೂ ಈ ವೇಳೆಗೆ ಮುಗಿದಿರಬೇಕು. ಆ ವಿಶ್ವಾಸ ಸೋನಿಯಾ ಭಾಷಣದಲ್ಲಿತ್ತು.