ಅಂದುಕೊಂಡರಷ್ಟೇ ಸಾಲದು ಸಾಧನೆ ಮಾಡಬೇಕು
ಕ್ರೀಡಾಕೂಟವೊಂದರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂದವರೊಬ್ಬರು ಒಲಿಂಪಿಕ್ ಚಿನ್ನದ ಪದಕ ವಿಜೇತರು. ಸಮಾರಂಭವೆಲ್ಲ ಮುಗಿದ ಮೇಲೆ ಒಬ್ಬ ಸಣಕಲು ಬಾಲಕ ಅವರ ಬಳಿ ಬಂದು ತನಗೂ ಸಹ ಅವರಂತೆ ಕ್ರೀಡೆಯಲ್ಲಿ ಹೆಸರು ಮಾಡುವಾಸೆ, ದಯಮಾಡಿ ಹರಸಿ ಎಂದು ತಲೆ ಬಾಗಿಸಿದ. ಅದಕ್ಕೆ ಆ ಕ್ರೀಡಾಪಟು ಹೇಳಿದ, 'ಮಗೂ ಅಂದುಕೊಂಡರಷ್ಟೇ ಸಾಲದು, ಸಾಧನೆ ಮಾಡಬೇಕು'. ಆತನ ಹೆಸರು ಜೆಸ್ಸಿ ಓವೆನ್ಸ್. ಅಮೆರಿಕದ ಕರಿಯ ಸಮುದಾಯಕ್ಕೆ ಸೇರಿದ ಈ ವ್ಯಕ್ತಿ ತನ್ನ ಜೀವನೋಪಾಯಕ್ಕಾಗಿ ದಿನಬಳಕೆಯ ವಸ್ತುಗಳನ್ನು ಮನೆಮನೆಗೆ ತಲುಪಿಸುವುದು, ಕೂಲಿಕೆಲಸ, ಕೊನೆಗೆ ಪಾದರಕ್ಷೆಗಳನ್ನು ರಿಪೇರಿ ಮಾಡುವ ಕಾಯಕವನ್ನೂ ಮಾಡಿದ. ಇಷ್ಟೆಲ್ಲ ಮಾಡಿದುದು ಅವನ ಜೀವನೋಪಾಯಕ್ಕಾಗಿ. ಆದರೆ ಅವನ ಉದ್ದೇಶ ಓಟಗಾರನಾಗಬೇಕೆಂಬುದು. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲ, ಪರಿಶ್ರಮಪಟ್ಟು ಓಡುತ್ತಲೇ ಸಾಧನೆ ಮಾಡುತ್ತಿದ್ದ. 1935 ರಲ್ಲಿ ಮಿಚಿಗನ್ನಲ್ಲಿ ನಡೆದ ಸ್ಫರ್ಧೆಯೊಂದರಲ್ಲಿ ಭಾಗವಹಿಸಿ ಓಟದಲ್ಲಿ ವಿಶ್ವದಾಖಲೆ ನಿರ್ಮಸಿದ. ಇದು ಅವನಿಗೆ 1936 ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾಗವಹಿಸಲು ದಾರಿ ಮಾಡಿಕೊಟ್ಟಿತು. ಜರ್ಮನಿಯಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಕರಿಯರಿಗಾಗಿ ಮೀಸಲಾಗಿದ್ದ ಹೊಟೇಲ್ಗಳಲ್ಲಿ ಮಾತ್ರ ತಂಗುವ ಮತ್ತು ಊಟಮಾಡುವ ಅವಕಾಶ ಸಿಕ್ಕಿತ್ತು. ಇತರ ಬಿಳಿಯರಿಗಿದ್ದ ಸ್ವಾತಂತ್ರ್ಯ ಅವನಿಗೆ ಇರಲಿಲ್ಲ. ಅಷ್ಟೆಲ್ಲಾ ಅವಮಾನಗಳನ್ನು ನುಂಗಿಕೊಂಡರೂ ಅವನು ಆ ಕ್ರೀಡಾಕೂಟದಲ್ಲಿ ನೂರು ಮೀ, ಇನ್ನೂರು ಮೀ. ಓಟ, ರಿಲೆ ಮತ್ತು ಉದ್ದಜಿಗಿತದಲ್ಲಿ ಒಟ್ಟು ನಾಲ್ಕು ಸುವರ್ಣ ಪದಕ ಗಳಿಸಿ ದಾಖಲೆ ನಿರ್ಮಿಸಿದ. ನಂತರ ಅವನಿಗೆ ಬಿಳಿಯರಿಗಾಗಿ ಇದ್ದ ಎಲ್ಲ ಸೌಲಭ್ಯಗಳನ್ನೂ ನೀಡಲಾಯಿತು. ಇಷ್ಟೊಂದು ಸಾಧನೆ ಮಾಡಿದ ವೀರನಿಗೆ ಅಮೆರಿಕೆಯಲ್ಲಿ ವೀರೋಚಿತ ಸ್ವಾಗತ ನೀಡಲಾಯಿತು. ಅದ್ಧೂರಿ ಸನ್ಮಾನ ಸಮಾರಂಭ ಸಹ ನಡೆಯಿತು. ಸಮಾರಂಭ ಮುಗಿದು ಇನ್ನೇನು ತೆರಳಬೇಕು ಅಷ್ಟರಲ್ಲಿ ಒಬ್ಬ ಬಾಲಕ ಕೈಯಲ್ಲಿ ಗುಲಾಬಿ ಹಿಡಿದು ಓಡೋಡಿ ಬಂದ, ಅದನ್ನು ಜೆಸ್ಸಿ ಓವೆನ್ಸ್ನಿಗೆ ನೀಡಿ ಹೇಳಿದ, 'ನಾನೂ ನಿಮ್ಮಂತೆ ಸಾಧನೆ ಮಾಡಬೇಕು' ಎಂದು. ಆಗ ಓವೆನ್ಸ್ ಹೇಳಿದ್ದು ಇಷ್ಟೇ- ಅಂದುಕೊಂಡರಷ್ಟೇ ಸಾಲದು, ಸಾಧನೆ ಮಾಡಬೇಕು! ಇದರಿಂದ ಪ್ರಭಾವಿತನಾದ ಆ ಬಾಲಕ ಅಂದಿನಿಂದಲೇ ತನ್ನ ಸಾಧನೆಯನ್ನು ಪ್ರಾರಂಭಿಸಿದ. ಹೀಗೆ ಅಭ್ಯಾಸ ಮಾಡಿದವ ಹ್ಯಾರಿಸನ್ ಡಿಲಾರ್ಡ್ ಎಂಬ ಕ್ರೀಡಾಪಟು. ಮುಂದೆ 1948 ರ ಲಂಡನ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡು ನೂರು ಮೀಟರ್ ಓಟ ಮತ್ತು ರಿಲೆಯಲ್ಲಿ ಸ್ವತಃ ಜೆಸ್ಸಿ ಓವೆನ್ಸ್ ನಿರ್ಮಿಸಿದ್ದ ದಾಖಲೆಯನ್ನು ಮುರಿದು ಬಂಗಾರದ ಪದಕ ಗಳಿಸಿದ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.