ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅಂಬಾರಿ ಭಾರ ತಗ್ಗಲಿ

Srinivasa Murthy VN
Updated On : 28 Aug 2013, 10:59 am

ಮೈಸೂರಿನಲ್ಲಿ ಪ್ರತಿ ವರ್ಷವೂ ನಡೆಯುವ ದಸರಾ ಉತ್ಸವಗಳ ಕೊನೆಯ ದಿನವಾದ ವಿಜಯ ದಶಮಿಯಂದು,  ಅರಣ್ಯ ಇಲಾಖೆಯ ಆನೆಯೊಂದರ ಬೆನ್ನಿನ ಮೇಲೆ 750 ಕಿಲೋಗ್ರಾಂ  ಭಾರದ ಅಂಬಾರಿಯನ್ನು ಹೊರಿಸಿ ಮೆರವಣಿಗೆಮಾಡುವ ಪದ್ಧತಿಯು ಹಲವು ಶತಮಾನಗಳಿಂದಲೇ ರೂಢಿಯಲ್ಲಿದೆ ಎಂಬ ಏಕಮಾತ್ರ ಕಾರಣದಿಂದ ಈಗಲೂ ಈ ಪದ್ಧತಿಯ ಮುಂದುವರಿಕೆಯು ಮನುಷ್ಯರಿಂದ ಆನೆಯ ಮೇಲೆ ನಡೆಯುತ್ತಿರುವ ಒಂದು ಮಹಾ ದೌರ್ಜನ್ಯವೇ ಸರಿ.  ಆನೆಯ ಬೆನ್ನಿನ ಮೇಲೆ ಅಂಬಾರಿಯನ್ನು ಬಿಗಿಯುವುದಕ್ಕಾಗಿ ಬಳಸುವ ತಡಿ, ಹಗ್ಗ ಇತ್ಯಾದಿ ವಸ್ತುಗಳ ಜೊತೆಯಲ್ಲಿ ಮಾವುತನ ತೂಕವನ್ನೂ ಗಣನೆಗೆ ತೆಗೆದುಕೊಂಡರೆ, ಆನೆಯು ಹೊರಬೇಕಾದ ಒಟ್ಟು ತೂಕವು 800 ಕಿಲೋಗ್ರಾಂ ಮೀರುತ್ತದೆ. ಇಷ್ಟೊಂದು ಭಾರವನ್ನು ಹೊತ್ತು ನಡೆಯಬೇಕಾದ ಆ ಆನೆಯ  ಸಂಕಟವನ್ನು ಗ್ರಹಿಸುವ ಸ್ಥಿತಿಯಲ್ಲಿ ಉತ್ಸವದ ಆಯೋಜಕರಾಗಲೀ, ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಾಗಲೀ, ಮೆರವಣಿಗೆಯನ್ನು ನೋಡಿ ಆನಂದಿಸುವ ಲಕ್ಷಾಂತರ ವೀಕ್ಷಕರಾಗಲೀ ಇಲ್ಲದ ಕಾರಣ ಇದು ಹೀಗೇ ನಡೆಯುತ್ತಲೇ ಇದೆ. ಆನೆಗೆ ಮಾತಾಡುವ ಶಕ್ತಿಯಿಲ್ಲ. ತಾನೇ ನ್ಯಾಯಾಲಯದಲ್ಲಿ ಹಾಜರಾಗಿ ಮನುಷ್ಯರಿಂದ ತನ್ನ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ದೂರನ್ನು ಸಲ್ಲಿಸಿ ತನಗೆ ನ್ಯಾಯವನ್ನು ಕೊಡಿಸಿ ಎಂದು ಕೋರುವ ಸ್ಥಿತಿಯಲ್ಲೂ ಇಲ್ಲ. ಅದರ ಪರವಾಗಿ ವಾದಿಸುವ ವಕೀಲರೂ ಇಲ್ಲ. ಆದರೂ ಸದ್ಯ ಕರ್ನಾಟಕದ ಉಚ್ಚ ನ್ಯಾಯಾಲಯದ ಗಮನವು ಅಂಬಾರಿಯನ್ನು ಹೊರುವ ಆನೆಯ ಪಾಡಿನತ್ತ ಹರಿದಿದೆ.  ಮುಖ್ಯಮಂತ್ರಿಗಳೂ ಸರಿಯಾಗಿ ಯೋಚಿಸಿ ಆನೆಯ ಭಾರವನ್ನು ಹಗುರಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕಾಗಿ ಕೋರುತ್ತೇನೆ. ಎಲ್ಲಾ ಒಟ್ಟು ಒಂದು ನೂರರಿಂದ ನೂರೈವತ್ತು ಕಿಲೋಗ್ರಾಂ ಆಗುವಷ್ಟು ಭಾರದ ಅಂಬಾರಿ ಇತ್ಯಾದಿ ಮೆರವಣಿಗೆಯ ಸಾಮಗ್ರಿಗಳನ್ನು ಹೊತ್ತು ಸಾಗುವ ಭಾಗ್ಯವು ಆನೆಗೆ ಬೇಗ ಬರಲಿ ಎಂದು ಪ್ರಾರ್ಥನೆ.
- ಬೊ. ನಾ. ಕೃಷ್ಣಮೂರ್ತಿ, ಸಾಗರ

ಪ್ರಚಾರನಿಮಿತ್ತಂ ಬಹುಕೃತ ಕರ್ಮಮ್

ಉದರನಿಮಿತ್ತಂ ಬಹುಕೃತ ವೇಷಂ ಎಂಬಂತೆ ಮನುಷ್ಯ ತನ್ನ ಉದರ ಪೋಷಣೆಗಾಗಿ ಏನೆಲ್ಲಾ ಪಡಿಪಾಟಲು ಪಡುತ್ತಾನೆ ಎಂಬುದು ನಮಗೆ ತಿಳಿದಿದೆ. ಪ್ರಸ್ತುತ ಇದನ್ನೇ ಸ್ವಲ್ಪ ಮಾರ್ಪಡಿಸಿ ಪ್ರಚಾರನಿಮಿತ್ತಂ ಬಹುಕೃತ ಕರ್ಮಮ್ ಎಂದು ಹೇಳಿದರೆ ಅದು ಢುಂಢಿ ಎಂಬ ಈ ವಿವಾದಾತ್ಮಕ ಕೃತಿಯ ಲೇಖಕರಾದ ಯೋಗೇಶ್ ಮಾಸ್ಟರ್ ಅವರಿಗೆ ಸರಿಯಾಗಿಯೇ ಅನ್ವಯಿಸುತ್ತದೆ.  ಇವರು ಈ ಕಾದಂಬರಿಯಲ್ಲಿ ಉಲ್ಲೇಖಿಸಿದ ಎಲ್ಲಾ ವಿಷಯಗಳೂ ಕಪೋಲಕಲ್ಪಿತವಾಗಿದ್ದು, ಪೌರಾಣಿಕವಾಗಿ, ವೈಜ್ಞಾನಿಕವಾಗಿ, ಐತಿಹಾಸಿಕವಾಗಿ ಆಧಾರರಹಿತವಾಗಿವೆ. ಅದಲ್ಲದೆ ಇವರು ತಮ್ಮ ಪುಸ್ತಕದ ಕೊನೆಯಲ್ಲಿ ಹೆಸರಿಸಿದ ಆಧಾರ ಗ್ರಂಥಗಳು ಯಾವುವೂ ಮೂಲಗ್ರಂಥಗಳಲ್ಲ. ವಿವಾದದ ಕಾವು ಜೋರಾಗುತ್ತಿದ್ದಂತೆ ಯೋಗೇಶ್ ಅವರು ತಮ್ಮದು ಸಂಶೋಧನಾ ಗ್ರಂಥವಲ್ಲ ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕಾಲ್ಪನಿಕ ಕಥೆಯಾದರೂ ಅದರಿಂದ ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾದರೆ ಅದೂ ಕೂಡ ಶಿಕ್ಷಾರ್ಹ ಅಪರಾಧವೇ ಆಗುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಎಂಬುದು ಎಷ್ಟು ಸಾಂವಿಧಾನಿಕವೋ, ಅದೇ ರೀತಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಜನರ ಭಾವನೆಗಳನ್ನು ಘಾಸಿಗೊಳಿಸಬಾರದು ಎಂಬುದೂ ಅಷ್ಟೇ ಸಾಂವಿಧಾನಿಕ. ಈ ನಿಟ್ಟಿನಲ್ಲಿ ಸರ್ಕಾರ ಈ ಕೃತಿಯನ್ನು ನಿಷೇಧಿಸಿ, ಲೇಖಕರ ಮೇಲೆ ಕಾನೂನುರೀತ್ಯಾ ಕಠಿಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ದಿನಕ್ಕೊಬ್ಬರಂತೆ ಧರ್ಮ, ದೇವರು, ಆಚರಣೆಗಳ ಕುರಿತು ಅವಹೇಳನಕಾರಿಯಾಗಿ ಬರೆದು ಯಾ ಚಿತ್ರಿಸಿ ಪ್ರಚಾರ ಪಡೆಯಲು ಕಾಯುತ್ತಿರುತ್ತಾರೆ.
- ರಾಮಕೃಷ್ಣ ಜೋಷಿ, ಉಡುಪಿ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement