ಆಹಾರ ಭದ್ರತೆಇನ್ನೊಂದು ಮುಖ
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂತೆಯೇ ಮಂಗಳವಾರ ಲೋಕಸಭೆ ಅಂಗೀಕರಿಸಿದ ರಾಷ್ಟ್ರೀಯ ಆಹಾರ ಭದ್ರತೆ ವಿಧೇಯಕವೂ ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿರುವ ರಾಷ್ಟ್ರೀಯ ಸಲಹಾ ಸಮಿತಿಯ ಒಂದು ವಿಶಿಷ್ಟ ಕೊಡುಗೆ. ಮಂಗಳವಾರ ಲೋಕಸಭೆಯಲ್ಲಿ ಈ ವಿಧೇಯಕ ಕುರಿತ ಚರ್ಚೆಯಲ್ಲಿ ಅನುಭವ-ಅಧ್ಯಯನ ಆಧರಿತ ಭಾಷಣಗಳಿಗಿಂತಲೂ ಭಾವೋದ್ವೇಗದ ಭಾಷಣಗಳಿಗೇ ಹೆಚ್ಚು ಅವಕಾಶ ಸಿಕ್ಕಿದ್ದು ನಿಜ. ಈಗಿನ ಲೋಕಸಭೆಯಲ್ಲಿ ಸೋನಿಯಾ ಗಾಂಧಿ ಚರ್ಚೆಯಲ್ಲಿ ಪಾಲುಗೊಂಡಿದ್ದು ಇದೊಂದೇ ವಿಧೇಯಕದ ಮೇಲೆ.
ಸುಮಾರು 80 ಕೋಟಿ ಭಾರತೀಯರಿಗೆ ಹಸಿವೆಯಿಂದ ಮುಕ್ತಿ ಹಾಗೂ ಆಹಾರದ ಭದ್ರತೆಯನ್ನು ಸರ್ಕಾರದ ವೆಚ್ಚದಲ್ಲಿ ಒದಗಿಸುವ "ಮಹಾನ್" ಯೋಜನೆಗೆ ದೊಡ್ಡ ರೀತಿಯಲ್ಲೇ ಸ್ವಾಗತ ಸಿಕ್ಕಿತ್ತು. ಟೀಕಾಕಾರರ ಧ್ವನಿಯೂ ಮೆತ್ತಗಾಗಿತ್ತು. ಆದರೆ ದೇಶದ ಪ್ರತಿಷ್ಠಿತ ಸಮಾಜದ ಹಿರಿಯ ತಲೆಗಳಲ್ಲಿ, ಶಾಸ್ತ್ರೀಯ ಅರ್ಥಶಾಸ್ತ್ರದ ಆಧಾರವನ್ನೇ ಅವಲಂಬಿಸುವ ಪಂಡಿತರ ಅಭಿಪ್ರಾಯದಲ್ಲಿ ಆಹಾರ ಭದ್ರತೆ ಯೋಜನೆ ಈಗಲ್ಲದಿದ್ದರೂ ಮುಂದೆ ಒಂದಲ್ಲ ಒಂದು ದಿನ ಅನಾಹುತಕ್ಕೆ ಹೆದ್ದಾರಿಯೇ ಆಗಬಹುದು, ಎನ್ನುವ ಮಾತು ಕೇಳಿ ಬಂದಿದೆ. ಇಂತಹ ಅಭಿಪ್ರಾಯ ಬುಧವಾರದ ವೇಳೆಗೆ ಹೆಪ್ಪುಗಟ್ಟಿತ್ತು. ವಿತ್ತಪತ್ರಿಕೆಗಳಲ್ಲಿ ಹೆಚ್ಚಾಗಿ ಪ್ರಕಟವಾದ ಅಭಿಪ್ರಾಯ ಪುಟಗಳ ಲೇಖನಗಳಲ್ಲಿ ಕಂಡು ಬಂದ ವಿಶೇಷ ಎಂದರೆ, ಸಾಮಾನ್ಯ ಪತ್ರಿಕೆಗಳಲ್ಲಿ ಕಂಡು ಬಂದಿದ್ದ ಅಭಿಪ್ರಾಯದ ವಿರುದ್ಧದ ಮಾತೇ ಹೆಚ್ಚು. ಆಹಾರ ಭದ್ರತೆಯ ವ್ಯವಸ್ಥೆಯ ಒಂದು ವಿಪರ್ಯಾಸವನ್ನು ಒಬ್ಬ ಪಂಡಿತರು ಪ್ರಶ್ನಿಸಿದ ರೀತಿಯನ್ನು ಗಮನಿಸಿದರೆ, ದೇಶದ ಹಣದಿಂದ ಬಡವನಲ್ಲದವರಿಗೂ ಈ ಯೋಜನೆಯ, ಅತಿ ಅಗ್ಗದ ಧಾನ್ಯ ಸರ್ಕಾರದ ವೆಚ್ಚದಲ್ಲಿ ಸಿಗುವುದು ಒಳ್ಳೆಯ ಚಿಂತನೆ ಅಲ್ಲ. ಸರ್ಕಾರವೇ ಪ್ರಕಟಿಸಿರುವ ಅಂಕಿ-ಅಂಶಗಳಂತೆ, ದೇಶದ ನಾನಾ ರಾಜ್ಯಗಳಲ್ಲಿನ ಕಡು ಬಡವರು, ಬಡವರ ಸಂಖ್ಯೆ ಒಟ್ಟು ರಾಜ್ಯದ ಜನಸಂಖ್ಯೆಯ ಶೇಕಡಾ 23 ರಿಂದ 40 ರ ವರೆಗೂ ಇದೆ. ಆದರೆ ಆಹಾರ ಭದ್ರತೆಯ ವಿಧೇಯಕದಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 67 ರಷ್ಟು ಜನರಿಗೆ ಈ ಭಾಗ್ಯ ಲಭ್ಯವಾಗುವುದು ಯಾವ ಪುರುಷಾರ್ಥ ಸಾಧನೆಗೆ?
ಇನ್ನೊಂದು ಉದಾಹರಣೆಯನ್ನು ಗಮನಿಸಿ; ಪಂಜಾಬಿನ ರೈತನಿಂದ ಬೆಂಬಲ ಬೆಲೆಯಲ್ಲಿ ಕೇಜಿಗೆ ಹದಿನೈದು ರುಪಾಯಿ ಕೊಟ್ಟು ಗೋಧಿ ಕೊಳ್ಳುವ ಸರ್ಕಾರ, ಅನಂತರ ಆಹಾರ ಭದ್ರತಾ ವ್ಯವಸ್ಥೆಯಲ್ಲಿ ಅದೇ ಗೋಧಿಯನ್ನು ಕೇಜಿಗೆ ಮೂರು ರುಪಾಯಿ ನಂತೆ ಕೊಡುವುದು ಎಷ್ಟರ ಮಟ್ಟಿಗೆ ಸರಿ? ಸರ್ಕಾರದ ಪ್ರಕಾರ ಆಹಾರ ಸಬ್ಸಿಡಿಯ ಮೌಲ್ಯ ವರ್ಷದ ಲೆಕ್ಕದಲ್ಲಿ ಸುಮಾರು 25000 ಕೋಟಿ ರುಪಾಯಿಗಳಷ್ಟು ಹೆಚ್ಚಾಗಬಹುದು. ಆದರೆ ಇದು ಅಷ್ಟಕ್ಕೇ ನಿಲ್ಲುವುದಿಲ್ಲ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುವುದು ಖಚಿತ. ಎಂದಾದರೊಂದು ದಿನ ಅದು ಆಘಾತದ ಹಂತವನ್ನೇ ತಲುಪಬಹುದು. ಸರ್ಕಾರವೇ ಆಹಾರ ಧಾನ್ಯಗಳ ಉತ್ಪಾದನೆಯ ದೊಡ್ಡ ಭಾಗವನ್ನು ಕೊಳ್ಳುವುದಾದರೆ ಕೃಷಿ ಉತ್ಪನ್ನಗಳ ಮುಕ್ತ ಮಾರುಕಟ್ಟೆಯ ಗತಿ ಏನಾಗಬೇಕು? ಇದರ ಪರಿಣಾಮ ಅಂತಿಮ ಹಂತದಲ್ಲಿ ಕೃಷಿಕರ ಮೇಲೇ ಆಗಬಹುದು. ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದಲ್ಲಿ ರಾಜ್ಯ ಸರ್ಕಾರಗಳು ರುಪಾಯಿಗೊಂದು ಕೇಜಿ ಅಕ್ಕಿಯ ಪೂರೈಕೆಯ ಯೋಜನೆಯನ್ನು ಪ್ರಕಟಿಸಿದ್ದಾಗಿದೆ. ಅದನ್ನು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಲ್ಲಿ ಅಳವಡಿಸುವುದಾದರೂ ಹೇಗೆ? ಘೋಷಣೆಗಳಿಂದ ಹಸಿವೆ ನಿರ್ಮೂಲವಾಗುವುದಿಲ್ಲ. ಇಂತಹ ಪ್ರಸ್ತಾಪಗಳು ಇನ್ನೂ ಇವೆ. ಆದರೆ ಕಷ್ಟ ಕಾಲದಲ್ಲೂ ಸರ್ಕಾರ ಕಾಯಿದೆಯನ್ನು ರೂಪಿಸುತ್ತಿರುವುದರಲ್ಲಿ ರಾಜಕೀಯ ಅಡಗಿದೆ. ಇದಕ್ಕೆಲ್ಲ ಲೋಕಸಭೆಯ ಚರ್ಚೆಯ ಕಾಲದಲ್ಲಿ ಸಮಾಧಾನ ಸಿಗಲಿಲ್ಲ. ರಾಜ್ಯಸಭೆಯ ಗುರುವಾರದ ಚರ್ಚೆ ಭಿನ್ನವಾಗಿರಬಹುದೇನೋ.