ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 28 Aug 2013, 10:59 am

ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಹೇಮಲತಾ ಮುರಳಿ ಅವರು ಬರೆಯುತ್ತಾರೆ- 'ಆ.25ರಂದು ಭಾನುವಾರದ ಪತ್ರಿಕೆ ಪುಟ 10ರಲ್ಲಿ ಒಂದು ಸುದ್ದಿಯಿದೆ. ಅದರ ಶೀರ್ಷಿಕೆ 'ಅನೈತಿಕ ಮೈತ್ರಿಯಿಂದ 'ಕೈ'ಗೆ ಗೆಲುವು: ಡಿ.ಕೆ. ಸುರೇಶ್‌' ಎಂದಿದೆ. ಇದರ ಅರ್ಥ ಕಾಂಗ್ರೆಸ್ ಪಕ್ಷವು ಅನೈತಿಕ ಮೈತ್ರಿಯನ್ನು ಮಾಡಿಕೊಂಡಿತ್ತು ಎಂದಲ್ಲವೇ? ಬದಲಾಗಿ 'ಅನ್ಯರ ಅನೈತಿಕ ಮೈತ್ರಿಯಿಂದ...' ಎಂದು ಪ್ರಕಟವಾಗಿದ್ದರೆ ಅಪಾರ್ಥವಾಗುತ್ತಿರಲಿಲ್ಲ' ಎಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರದಿಂದ ಭಾಗ್ಯ ನಂಜುಂಡಸ್ವಾಮಿ ಅವರು ಬರೆಯುತ್ತಾರೆ- 'ಆ.21ರಂದು 'ಬೈಟು ಕಾಫಿ'ಯ 'ಗಾಜಿನ ದೇಗುಲ' ಓದಿದಾಗ ವಿಸ್ಮಯವುಂಟಾಗಿ, ಮುಂದುವರಿಸಿಕೊಂಡು ಹೋದರೆ, ವಿಷಯ ಅಪೂರ್ಣ. ಕ.ಪ್ರ. ಬಳಗದವರೇ ಬರೆದ ಲೇಖನವನ್ನು ಹೀಗೆ ಪ್ರಕಟಿಸಿದರೆ, ಉಳಿದ ಲೇಖಕರು ಬರೆದ ಲೇಖನಗಳ ಗತಿ!?'
'ಹೆಚ್ಚು ಹೆಚ್ಚು ಲೇಖನಗಳನ್ನು ಒಂದೇ ದಿನ ಪ್ರಕಟಿಸಬೇಕೆನ್ನುವ ಆತುರವೇ ಅಪೂರ್ಣ ಲೇಖನಕ್ಕೆ ಎಡೆಮಾಡಿಕೊಟ್ಟಿತೇ? ದಯವಿಟ್ಟು ಇಂತಹ ತಪ್ಪುಗಳನ್ನು ಮಾಡಬೇಡಿ' ಎಂದಿದ್ದಾರೆ.
ಪುಟ ನಿರ್ಮಿಸುವಾಗ ಅಥವಾ ಲೇಖನಗಳನ್ನು ಆಯ್ಕೆ ಮಾಡುವಾಗ ನಮ್ಮವರೇ ಬರೆದಿದ್ದು, ಹೊರಗಿನವರು ಬರೆದಿದ್ದು ಎಂಬುದನ್ನೆಲ್ಲ ಗಮನಿಸುವುದಿಲ್ಲ. ಲೇಖನ ಉತ್ತಮವಾಗಿದ್ದರೆ ಆಯ್ಕೆ ಮಾಡಲಾಗುತ್ತದೆ. ಇನ್ನು ಪುಟ ಮಾಡುವವರು ನಮ್ಮವರು ಬರೆದಿದ್ದು, ಹೊರಗಿನವರು ಬರೆದಿದ್ದು ಎಂಬುದನ್ನು ಗಮನಿಸಲು ಕೂಡ ಹೋಗುವುದಿಲ್ಲ.
ಆ ವಿಭಾಗದ ಉಪಸಂಪಾದಕರು ನೀಡಿದ ಲೇಖನಗಳನ್ನು ಅಳವಡಿಸಿ ಪುಟ ವಿನ್ಯಾಸ ಮಾಡುವುದಷ್ಟೇ ಪುಟವಿನ್ಯಾಸಕಾರರ ಕೆಲಸ. ಬರೆದವರು ಯಾರು? ಅವರು ಪರಿಚಿತರೇ? ನಮ್ಮ ಪತ್ರಿಕೆಯ ಸಿಬ್ಬಂದಿಯೇ? ಮುಂತಾದ ಸಂಗತಿಗಳ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಪುಟ ವಿನ್ಯಾಸ ಮಾಡುವಾಗ ಲೇಖನ ಪೂರ್ಣಗೊಂಡಿದೆಯೇ ಇಲ್ಲವೇ ಎಂಬುದನ್ನು ಗಮನಿಸದಿರುವುದೇ ಈ ತಪ್ಪಿಗೆ ಕಾರಣ.
ಆದ್ದರಿಂದ 'ಕ.ಪ್ರ.ದವರೇ ಬರೆದ ಲೇಖನ ಗತಿ ಹೀಗಾದರೆ, ಬೆರೆಯವರು ಬರೆದ ಲೇಖನದ ಗತಿ' ಎಂದು ಆತಂಕಪಡಬೇಕಾಗಿಲ್ಲ.
ಬೆಂಗಳೂರಿನಿಂದ ಸಂತೋಷಕುಮಾರ ಎಲ್.ಎಂ. ಅವರು ಬರೆಯುತ್ತಾರೆ- 'ಆ.28ರಂದು 'ಕನ್ನಡಪ್ರಭ'ದ 12ನೇ ಪುಟದ ಮೇಲ್ಭಾಗಲ್ಲಿರುವ ಸಾಹಿತಿ ಅರವಿಂದ ಮಾಲಗತ್ತಿಯವರ ಹೇಳಿಕೆಯಲ್ಲಿ ದೋಷವೊಂದು ನುಸುಳಿದೆ.(ಅದು ಮುದ್ರಣ ದೋಷವೋ, ಅಥವಾ ಸಾಹಿತಿಯೇ ಹಾಗೆ ಉಚ್ಚರಿಸಿದರೋ ಅರ್ಥವಾಗಿಲ್ಲ). ನಾಲ್ಕನೇ ಸಾಲಿನ 'ಅಂಥ ಸಾಹಿತ್ಯ ಉತ್ಕೃಷ್ಠವಾಗಲಾರದು' ಎಂಬ ಸಾಲಿನಲ್ಲಿ 'ಉತ್ಕೃಷ್ಟ' ಎಂದಾಗಬೇಕು. 'ಉತ್ಕೃಷ್ಠ' ಎಂಬ ಪದ ಕನ್ನಡದಲ್ಲಿಲ್ಲ. ಉತ್ಕೃಷ್ಟ ಎಂದರೆ ಶ್ರೇಷ್ಠ, ಉತ್ತಮ, ಉನ್ನತ ಎಂಬ ಅರ್ಥಗಳನ್ನು ನೀಡುತ್ತದೆ' ಎಂದಿದ್ದಾರೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement