ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ರುಪಾಯಿ ಸಂಕಷ್ಟ-ನಾವೂ ಕಾರಣ

Srinivasa Murthy VN
Updated On : 28 Aug 2013, 10:59 am

ದೀರ್ಘ ಕಾಲದ ಅನಂತರ ಸಂಸತ್ತಿನಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕುರಿತಂತೆ ಅರ್ಥಪೂರ್ಣ ಚರ್ಚೆ ನಡೆದಿದ್ದು ಸ್ವಾಗತಾರ್ಹ. ಈ ಚರ್ಚೆಯಲ್ಲಿ ಮುಕ್ತ ಮನಸ್ಸಿನಿಂದ ಪಾಲುಗೊಂಡ ವಿತ್ತ ಸಚಿವ ಪಿ. ಚಿದಂಬರಮ್ ಅವರು ಇಂದಿನ ಬಿಕ್ಕಟ್ಟಿಗೆ ವಿದೇಶಗಳಲ್ಲಿನ ಕುಸಿತವನ್ನು ದೂರುವುದು ಪೂರ್ತಿ ಸರಿಯಲ್ಲ ಎಂದರು. 2008ರ ಜಾಗತಿಕ ಬಿಕ್ಕಟ್ಟಿನ ಪರಿಣಾಮದ ವಿರುದ್ದ ದೇಶದ ಉದ್ಯಮಿಗಳನ್ನು ರಕ್ಷಿಸಲು 2009-11 ರ ನಡುವೆ ವರ್ಷಕ್ಕೆ ಐದು ಲಕ್ಷ ಕೋಟಿ ರುಪಾಯಿಗಳ ರಿಯಾಯಿತಿ - ವಿನಾಯಿತಿ ನೀಡಿದ್ದರ ಕಾಣಿಕೆಯೂ ಈಗಿನ ಬಿಕ್ಕಟ್ಟಿಗೆ ಇದೆ ಎಂದಿದ್ದು ಅನೇಕರನ್ನು ಚಕಿತಗೊಳಿಸಿರಬಹುದು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಕಳೆದ ವಾರದಲ್ಲೇ ಚಿದಂಬರಮ್ ಇಂತಹ ನಿಲವನ್ನು ಎರಡು ಬಾರಿ ಪ್ರದರ್ಶಿಸಿದ್ದಾರೆ. ಆಗ ವಿತ್ತಮಂತ್ರಿಯಾಗಿದ್ದವರು ಈಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಆಗಲೂ ವಿರೋಧ ಪಕ್ಷಗಳು ಸರ್ಕಾರದ ರಿಯಾಯಿತಿ - ವಿನಾಯಿತಿಯನ್ನು ಆಕ್ಷೇಪಿಸಿದ್ದವು.
ಮಂಗಳವಾರದ ಲೋಕಸಭೆಯ ಚರ್ಚೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ, ಮಾಜಿ ವಿತ್ತಮಂತ್ರಿ ಯಶವಂತ ಸಿನ್ಹಾ, ಅವರ ಭಾಷಣದ ತಿರುಳು ಈಗಿನ ಆರ್ಥಿಕ ನೀತಿ ಹಾಗೂ ವಿತ್ತೀಯ ನಿಲವು ದೇಶಕ್ಕೆ ಮಾರಕವಾಗಿವೆ ಎನ್ನುವಂತೆಯೇ ಇತ್ತು. ಕೇಂದ್ರ ಸರ್ಕಾರ ಈಗ ಪ್ರಕಟಿಸುತ್ತಿರುವ ಕೊಡುಗೆಯ ಯೋಜನೆಗಳ ನಿಜವಾದ ಹೊರೆಯ ಪ್ರಮಾಣ ಸದ್ಯಕ್ಕೆ ಗೊತ್ತಾಗಲಿಕ್ಕಿಲ್ಲ. ಆದರೆ ಭವಿಷ್ಯದಲ್ಲಿ ದೇಶಕ್ಕೆ ಅದರಿಂದ ಬೀಳುವ ಹೊರೆಯನ್ನು ನಿಭಾಯಿಸುವುದು ಅಸಾಧ್ಯವೇ ಆಗಬಹುದೆಂದು ಇದರ ಅನೇಕ ಸದಸ್ಯರ ಅನಿಸಿಕೆ. ಚರ್ಚೆಯ ಕಾಲದಲ್ಲಿ ಚಿದಂಬರಮ್ ಜಾಣತನದಿಂದ ವಾದ-ವಿವಾದಕ್ಕೆ ಹೋಗದೇ ಈಗಿನ ಬಿಕ್ಕಟ್ಟಿನ ನಿವಾರಣೆಗೆ ತಾವು ರೂಪಿಸಿರುವ ಹತ್ತಂಶಗಳ ಕಾರ್ಯಕ್ರಮದ ವಿವರಣೆಗೇ ತಮ್ಮ ಭಾಷಣವನ್ನು ಸೀಮಿತಗೊಳಿಸಿಕೊಂಡಿದ್ದರಿಂದ ಚರ್ಚೆ ಸುಸೂತ್ರವಾಗಿಯೇ ನಡೆದಿದ್ದೂ ಒಂದು ಅಪರೂಪದ ಸಾಧನೆಯೇ. ಚಿದಂಬರಮ್ ಅವರ ಹತ್ತಂಶಗಳ ಯೋಜನೆಯಲ್ಲಿ ಬಹುಭಾಗ ಆರ್ಥಿಕ ವ್ಯವಸ್ಥೆಯಲ್ಲಿ ಅಧಿಕ ಪ್ರಮಾಣದ ಸುಧಾರಣೆ, ಕಡಿಮೆ ನಿಯಂತ್ರಣವನ್ನು ಜಾರಿಗೆ ತರುವುದೇ ಮುಖ್ಯಾಂಶ. ಹೇಗೆ? ಅದನ್ನು ವಿವರಿಸಲು ಅವರು ಮನಸ್ಸು ಮಾಡದೇ ಹೋಗಿದ್ದು ವಿಷಾದನೀಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement