ಕೆಂಪು ದೀಪದ ಕಾರು
ಕೆಂಪು ದೀಪದ ಕಾರುಗಳ ಬಳಕೆಯ ವಿಚಾರ, ವಾಸ್ತವದಲ್ಲಿ ಯಾವುದೇ ರೀತಿಯ ವಿವಾದಕ್ಕೂ ಎಡೆ ಮಾಡಿಕೊಡುವಂತಹದ್ದಲ್ಲ. ಅದು ಸಂವಿಧಾನಾತ್ಮಕ ಸ್ಥಾನ-ಮಾನ ಪಡೆದವರು ಹಾಗೂ ಅತಿ ಪ್ರತಿಷ್ಠಿತರಿಗೆ ಮಾತ್ರ ಸೀಮಿತವಾಗಬೇಕು ಎನ್ನುವುದರಲ್ಲಿ ಎರಡು ಮಾತಿರಲು ಸಾಧ್ಯವೇ ಇಲ್ಲ.
ಸಾಂವಿಧಾನಿಕ ಸ್ಥಾನ-ಮಾನಗಳನ್ನು ಹೊಂದಿದವರು ಹಾಗೂ ಅತಿ ಪ್ರತಿಷ್ಠಿತರನ್ನು ಗುರ್ತಿಸುವುದು ಕಷ್ಟವೂ ಅಲ್ಲ. ಆದರೂ ಸ್ಥಳೀಯ ರಾಜಕಾರಣಿಗಳು ಹಾಗೂ ಇತರ ಆಸಕ್ತ ಹಿತಗಳ ಪ್ರತಿಷ್ಠೆಯ ಪರಿಣಾಮವಾಗಿ, ಈ ವಿಚಾರದಲ್ಲಿ ಸುಪ್ರೀಮ್ ಕೋರ್ಟಿನ ಆದೇಶವೇ ಹೊರಬೀಳಬೇಕಾಗಿ ಬಂದಿತ್ತು.
ಈಗಲೂ ಈ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಅನೇಕ ಕಡೆಗಳಲ್ಲಿ ರಾಜ್ಯ ಸರ್ಕಾರಗಳು, ಪಟ್ಟಿಯನ್ನು ಸಿದ್ಧಪಡಿಸುವಾಗ, ತಮಗೆ ತೋಚಿದಂತೆ ಬದಲಾವಣೆಗಳನ್ನು ಮಾಡಿಕೊಂಡಿರುವುದೂ ಉಂಟು.
ಅದನ್ನು ಗಮನಿಸಿದ ಸುಪ್ರೀಮ್ ಕೋರ್ಟ್ ಮಂಗಳವಾರ ನೀಡಿದ ತೀರ್ಪಿನಲ್ಲಿ ರಾಜ್ಯಗಳ ಸರ್ಕಾರಗಳಿಗೆ ಪಟ್ಟಿಗಳಲ್ಲಿ ತಮ್ಮದೇ ಆದ ಬದಲಾವಣೆಗಳನ್ನು ಮಾಡುವ ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿ, ಕೇಂದ್ರ ಸರ್ಕಾರವೇ ಅಂತಹ ಪಟ್ಟಿಯನ್ನು ಪ್ರಕಟಿಸಬೇಕೆಂದು ಆದೇಶ ನೀಡಿರುವುದು ಸ್ವಾಗತಾರ್ಹವಾದದ್ದು. ದೇಶಕ್ಕೆ ಮರ್ಯಾದೆಯನ್ನು ತರುವಂತಹದ್ದು.
ಕೆಂಪು ದೀಪದ ಕಾರಿನ ಬಳಕೆ ಕುರಿತ ನಿಯಮಗಳ ದುರ್ಬಳಕೆ, ಸೈರನ್‌ಗಳ ಚೀರಾಟ, ನಾಗರಿಕರ ಪಾಲಿಗೆ ಒಂದು ಪಿಡುಗು ಎಂದೂ ಸುಪ್ರೀಮ್ ಕೋರ್ಟ್ ಹೇಳಿದೆ. ಆಂಬುಲೆನ್ಸ್‌ಗಳು ಹಾಗೂ ಇತರ ಜನೋಪಯೋಗಿ ಸಂಸ್ಥೆಗಳವರು ನೀಲಿ ದೀಪವನ್ನು ಬಳಸುವುದಕ್ಕೆ ಅಡ್ಡಿ ಇಲ್ಲ.
ಸುಪ್ರೀಮ್ ಕೋರ್ಟಿನ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸುವುದು ರಾಜ್ಯ ಸರ್ಕಾರಗಳ ಕರ್ತವ್ಯ.