ತಪ್ಪಾಯ್ತು ತಿದ್ಕೋತೀವಿ
ತಾಳಿಕೋಟೆಯ ಎಸ್.ಕೆ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ವೀರೇಶ ಸಿಂದಗಿ ಅವರು ಪತ್ರಿಕೆಯಲ್ಲಾದ ತಪ್ಪುಗಳ ಕುರಿತು ಪತ್ರ ಬರೆದಿದ್ದಾರೆ. ಅವರು ಬರೆದಿರುವ ತಪ್ಪುಗಳು ಅತ್ಯಂತ ಚಿಕ್ಕವು ಮತ್ತು ಅಕ್ಷರ ತಪ್ಪುಗಳಾದರೂ, ವಿದ್ಯಾರ್ಥಿಯ ಪತ್ರಿಕೆ ಓದುವ ಹವ್ಯಾಸ ಬೆಳೆಯಬೇಕು ಎಂಬ ದೃಷ್ಟಿಯಿಂದ ಅವರ ಪತ್ರ ಪ್ರಕಟಿಸಲಾಗುತ್ತಿದೆ.
ಅವರು ಬರೆಯುತ್ತಾರೆ- 'ನ.28ರ ದಿನಪತ್ರಿಕೆಯಲ್ಲಿ ಪುಟ 2ರಲ್ಲಿ 'ಅಣ್ಣೋ, ಆನ್ಸರ್ ಆಡ್ಬಿಡ್ತೀನಿ ಬಿಡಣ್ಣೋ' ಎಂಬ ಶೀರ್ಷಿಕೆಯ ವರದಿಯ ಆರಂಭದಲ್ಲಿ 'ವಿಧಾನಬೆ' ಎಂಬುದು 'ವಿಧಾನಸಭೆ' ಎಂದಾಗಬೇಕಿತ್ತು. ಇದೇ ಪುಟದಲ್ಲಿ 'ಅಧಿವೇಶನಕ್ಕೂ ಮೊದಲು ಶ್ವಾನದಳದಿಂದ ತಪಾಸಣೆ ಮಾಡತ್ತಿರುವುದು' ಎಂದಾಗಿದೆ. ಇದು 'ಮಾಡುತ್ತಿರುವುದು' ಎಂದಾಗಬೇಕಿತ್ತು.'
'ಪುಟ 3ರಲ್ಲಿ 'ರೈತ ಹೋರಾಟದಲ್ಲಿ ಹುತಾತ್ಮ ರೈತನ ಮಕ್ಕಳು' ಎಂಬ ವರದಿಯಲ್ಲಿ 'ಬಿಎಸ್ವೈ ಸಾಥ್' ಎಂಬಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಲ್ಲಿ 'ರ' ಅಕ್ಷರವೇ ಕಾಣೆಯಾಗಿದೆ. ಹಾಗೇ ಮುಂದೆ, 'ಕಬ್ಬಿನ ಸಮಸ್ಯೆ ನಿವಾರಣೆಯಲ್ಲಿ ಸರ್ಕಾರ ವಿಳಂಬ ನೀತಿಯೇ ರೈತನಆತ್ಮಹತ್ಯೆಗೆ ಕಾರಣ' ಎಂದಿದೆ. ಇಲ್ಲಿ 'ಸರ್ಕಾರ' ಎಂಬುದರ ಬದಲಾಗಿ 'ಸರ್ಕಾರದ' ಎಂದಾಗಬೇಕಿತ್ತು.'
'ಪುಟ 4ರಲ್ಲಿ 'ಎಂಇಎಸ್ ಉದ್ಧಟತನ: ಮೇಲ್ಮನೆ ರಣಾಂಗಣ' ಎಂಬ ವರದಿಯ 2ನೇ ಪ್ಯಾರಾದಲ್ಲಿ, 'ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ತಾರಾ ಅನುರಾಧಾ' ಎಂದಿದೆ. ಇಲ್ಲಿ 'ಸದಸ್ಯ' ಎಂಬುದು 'ಸದಸ್ಯೆ' ಎಂದಾಗಬೇಕಿತ್ತು.'ನೂರೆಂಟು ನೋಟ' ಅಂಕಣದ ಮೂರನೇ ಪ್ಯಾರಾದ ಕೊನೆಯಲ್ಲಿ 'ತಳೆ ನಿಲುವನ್ನು' ಎಂದಾಗಿದೆ. ಇದು 'ತಳೆದ ನಿಲುವನ್ನು' ಎಂದಾಗಬೇಕಿತ್ತು'ಎಂದಿದ್ದಾರೆ.
ಭದ್ರಾವತಿಯಿಂದ ಅರಬಿಳಚಿಕ್ಯಾಂಪ್ ಓಂ ಚನ್ನೇಶ್ ಅವರು ಬರೆಯುತ್ತಾರೆ- "ಕೇಳ್ರಪ್ಪೋ ಕೇಳಿ' ಅಂಕಣದಲ್ಲಿ ನಾನು ಒಂದು ಪ್ರಶ್ನೆ ಕೇಳಿದರೆ ಬರುವುದಕ್ಕೆ ಒಂದು ವಾರ, ಒಂದು ತಿಂಗಳಾದರೂ ಆಗುತ್ತದೆ. ನನ್ನಂತೆಸುಮಾರು ಪ್ರಶ್ನೆಗಳು ಬಂದಿರಬಹುದು. ಆದರೆ ಒಂದೇ ದಿನ ಒಬ್ಬರದೇ ಎರಡೆರಡು ಪ್ರಶ್ನೆಗಳು ಬರುತ್ತವಲ್ಲ. ಅದರ ಬದಲು ಒಬ್ಬರದು ಒಂದೇ ಪ್ರಶ್ನೆಗೆ ಉತ್ತರಿಸಬಹುದಲ್ಲ. ಇನ್ನೊಬ್ಬರಿಗೆ ಅವಕಾಶ ಸಿಕ್ಕಂತಾಗುತ್ತದೆ.'
'ಇತ್ತೀಚೆಗೆ ಈ ತರಹದ ಡಬ್ಬಲ್ ಪ್ರಶ್ನೆಗಳು ಪ್ರಕಟವಾಗುವುದು ಜಾಸ್ತಿಯಾಗಿದೆ. ಡಿ.3ರಂದು 'ಕೇಳ್ರಪ್ಪೋ ಕೇಳಿ' ನೋಡಿ. ಇದು ಯಾರ ತಪ್ಪಿನಿಂದ ಆದ ಅಚಾತುರ್ಯವೋ, ಸಿಬ್ಬಂದಿಗಳ ನಿರ್ಲಕ್ಷ್ಯವೋ ಒಂದೂ ತಿಳಿಯುತ್ತಿಲ್ಲ' ಎಂದಿದ್ದಾರೆ.
ಒಬ್ಬರ ಒಂದೇ ಪ್ರಶ್ನೆ ಇರುವಂತೆ ಸಾಧ್ಯವಾದಷ್ಟೂ ಪ್ರಯತ್ನಮಾಡಲಾಗುತ್ತದೆ. ಆದರೆ ಒಬ್ಬರ ಒಂದು ಪ್ರಶ್ನೆಯನ್ನು ಮಾತ್ರಪ್ರಕಟಿಸಬೇಕೆಂಬ ನಿಯಮವೇನೂ ಇಲ್ಲ. ಕೆಲವೊಮ್ಮೆ ನಮ್ಮ ಪ್ರಯತ್ನಗಳನ್ನು ಮೀರಿ ಎರಡು ಪ್ರಶ್ನೆಗಳನ್ನು ಪ್ರಕಟಿಸಬೇಕಾಗುತ್ತದೆ. ಪ್ರಶ್ನೆಗಳನ್ನು ನೋಡಿ ಅವುಗಳನ್ನು ಆಯ್ಕೆ ಮಾಡಲಾಗುತ್ತದೆಯೇ ಹೊರತು ಪ್ರಶ್ನೆ ಕೇಳಿದವರ ಹೆಸರು ನೋಡಿ ಅಲ್ಲ. ಓಂಚನ್ನೇಶ್ ಅವರ ಸಾಕಷ್ಟು ಪ್ರಶ್ನೆಗಳು ಅಂಕಣದಲ್ಲಿ ಪ್ರಕಟವಾಗಿವೆ ಎಂಬುದು ಕೂಡ ನನ್ನ ಗಮನದಲ್ಲಿದೆ.
-ವಿಶ್ವೇಶ್ವರ ಭಟ್