ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹಾಲು ಹಾಲಾಹಲವಾಗದಿರಲಿ

Srinivasa Murthy VN
Updated On : 11 Dec 2013, 12:28 pm

ಹಾಲು ಎಂದರೆ ಅಮೃತ ಎನ್ನುವ ಕಾಲವೊಂದಿತ್ತು. ಹಾಲು ಮಾರಾಟ ಮಾಡುವುದೇ ಒಂದು ಅಪರಾಧ ಎನ್ನುವ ಮನೋಸ್ಥಿತಿ ನಮ್ಮ ಹಳ್ಳಿಗಾಡಿನಲ್ಲಿ ಇಂದು ಇದೆ. ಹಾಲನ್ನು ಉಚಿತವಾಗಿ ಕೊಟ್ಟರೆ ಪುಣ್ಯ ಎನ್ನುವ ಮನೋಭಾವ ಇದೆ. ಇಂದು ಹಾಲಿಗೆ ವಿಷ ಬೆರೆಸುವ ಕಾಲ ಬಂದಿದೆ ಎಂದರೆ ಕಾಲ ಹೇಗೆಲ್ಲ ತಿರುಗಿದೆ ಎಂಬುದು ತಿಳಿಯುತ್ತದೆ. ಜನ ಹಣಮಾಡುವ ಆಸೆಗಾಗಿ ಇಂದು ಏನೆಲ್ಲಾ ಮಾಡುತ್ತಿದ್ದಾರೆ! ಬಹುತೇಕ ಅದರಲ್ಲೂ ತಮಿಳುನಾಡಿಗೆ ಹೊಂದಿಕೊಂಡಂತೆ ಇರುವ ಬೆಂಗಳೂರಿನ ಬಹುತೇಕ ಅಂಗಡಿ ಹೋಟೆಲ್‌ನವರು ನಂದಿನಿ ಹಾಲನ್ನು ಬಿಟ್ಟು ಎಲ್ಲ ಕಂಪನಿ ಹಾಲು ಮಾರಾಟ ಮಾಡುತ್ತಿದ್ದಾರೆ. ಏಕೆಂದರೆ ಅಂಗಡಿ ಹೋಟೆಲ್‌ನವರಿಗೆ  ಕಡಿಮೆ ಬೆಲೆಗೆ ಜಾಸ್ತಿ ಲಾಭ ಮಾಡಿಕೊಳ್ಳುವ ಆಸೆ. ಹಾಲಿನಲ್ಲಿ ಏನೆಲ್ಲಾ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಕನ್ನಡ ಜನತೆಗೆ ಬೆಳಕು ಚೆಲ್ಲುವ ಒಂದು ಒಳ್ಳೆಯ ಸುದ್ದಿ ಕೊಟ್ಟಿದ್ದಕ್ಕಾಗಿ 'ಕನ್ನಡ ಪ್ರಭ' ಕ್ಕೆ ಧನ್ಯವಾದಗಳು. ಜನ ಮತ್ತೆ ಹಸುಗಳನ್ನು ಸಾಕಿ ಹಾಲನ್ನು ಕರೆದು ಕುಡಿಯುವ ದಿನ ಬರಲಿ.
-ಎಂ.ಪರಮೇಶ್ವರ, ಹಿರಿಯೂರು

ಎಡೆಸ್ನಾನವೂ ಬೇಡ

ಒಬ್ಬರು ಊಟ ಮಾಡಿದ ಎಂಜಲು ಎಲೆಗಳ ಮೇಲೆ ಇನ್ನೊಬ್ಬರು ಉರುಳುವ ಮಡೆಸ್ನಾನದ ಬಗ್ಗೆ ರಾಜ್ಯದ ಎಲ್ಲೆಡೆ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಮಡೆಸ್ನಾನವನ್ನು ಕಟುವಾಗಿ ಟೀಕಿಸದ ಪೇಜಾವರ ಶ್ರೀಗಳು ಈಗ ರಾಜೀಸೂತ್ರವೊಂದನ್ನು ಸಲಹೆ ಮಾಡಿದ್ದಾರೆ. ಅದೆಂದರೆ ಮಡೆಸ್ನಾನದ ಬದಲು ಎಡೆಸ್ನಾನ ಅಂದರೆ ದೇವರ ಎಡೆಯ ಮೇಲೆ ಉರುಳುವುದು. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ದೇವರಿಗೆ/ಹಿರಿಯರಿಗೆ ಇಟ್ಟ ಎಡೆಯ ಆಹಾರವನ್ನು ಭಕ್ತಿ ಹಾಗೂ ಪ್ರೀತಿಯಿಂದ ಸೇವಿಸುತ್ತೇವೆ. ಅಂಥ ಆಹಾರದ ಮೇಲೆ ಉರುಳುವ ಎಡೆಸ್ನಾನದ ಸಲಹೆ ಮಾಡಿರುವ ಪೇಜಾವರ ಶ್ರೀಗಳ ಸಲಹೆ ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ. ವಾಸ್ತವವಾಗಿ ಹೇಳಬೇಕೆಂದರೆ ಮಡೆಸ್ನಾನಕ್ಕೂ ಎಡೆಸ್ನಾನಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಹಾಗಾಗಿ ನಮಗೆ ಮಡೆಸ್ನಾನವೂ ಬೇಡ-ಎಡೆ ಸ್ನಾನವೂ ಬೇಡ. ಸರ್ಕಾರ ಈ ಎರಡನ್ನೂ ನಿಷೇಧಿಸಬೇಕು ಮತ್ತು ಜನರು ಅರಿವು ಪಡೆದುಕೊಂಡು ಇವೆರಡರಲ್ಲಿಯೂ ಭಾಗವಹಿಸುವುದನ್ನು ನಿಲ್ಲಿಸಬೇಕು.
-ಈ.ಬಸವರಾಜು, ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರು

ಹಾಲಾಹಲ ತಪ್ಪಿಸಿ ಜೀವ ಉಳಿಸಿ

ಜೀವ ರಕ್ಷಕ ಹಾಗೂ ಶಕ್ತಿದಾಯಕ ಹಾಲು, ಹಾಲಾಹಲವಾಗಿ ಪರಿಣಮಿಸಲು ವಿಷಕಾರಕ ಅಂಶಗಳ ಸೇರ್ಪಡೆಯ ವರದಿ (ಕನ್ನಡ ಪ್ರಭ 10-12) ಸಾರ್ವಜನಿಕರಲ್ಲಿ ಗಾಬರಿ ಹುಟ್ಟಿಸಿದೆ. ದಿನ ನಿತ್ಯ ಶಿಶುಗಳಾದಿಯಾಗಿ ವಯಸ್ಸಾದವರ ವರೆಗೂ ಹಾಲಿನ ಮತ್ತು ಹಾಲಿನ ಉತ್ಪನ್ನಗಳ ಬಳಕೆ ಸಾಮಾನ್ಯರಿಗೂ ಅನಿವಾರ್ಯ. ಇಂತಹ ಹಾಲು ಮಾರುಕಟ್ಟೆಯಲ್ಲಿ ಯಾವ ನಿಯಂತ್ರಣವೂ ಇಲ್ಲದೆ ಮಾರಾಟವಾಗುತ್ತಿರುವುದು ಸಾರ್ವಜನಿಕ ಆರೋಗ್ಯದ ಬಗ್ಗೆ ಸರ್ಕಾರ ಹೊಂದಿರುವ ನಿಷ್ಕಾಳಜಿಯನ್ನು ಸೂಚಿಸುತ್ತದೆ. ಹಾಲಿನಲ್ಲಿ ವಿಷಕಾರಕ ವಸ್ತುಗಳನ್ನು ಬೆರೆಸಿ, ಬಳಕೆದಾರರಿಗೆ ಕಿಡ್ನಿ, ಜಠರಕ್ಕೆ ಹಾನಿ ಹಾಗೂ ರಕ್ತದೊತ್ತಡ, ಕ್ಯಾನ್ಸರ್‌ಗೆ ಕಾರಣವಾಗುವ ಸಂಗತಿ ಬಯಲುಗೊಂಡ ಮೇಲೂ, ಹಾಗೂ ಸರಕಾರದ ಸಂಸ್ಥೆಯಾದ ಕೆಎಂಎಫ್ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಈ ಕಲಬೆರೆಕೆ ಹಾಲಿಗೆ ಕಡಿವಾಣ ಬಿದ್ದಿಲ್ಲ. ಈ ವಿಷಕಾರಕ ಹಾಲಿನ ವೈಜ್ಞಾನಿಕ ಪರೀಕ್ಷೆ ನಡೆಸಿ, ಗುಣಮಟ್ಟದ ಆಹಾರ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಂಡು ಬಳಕೆದಾರರ ಆರೋಗ್ಯ ಕಾಪಾಡಲಿ.
-ಚಂದ್ರಹಾಸ ಗೋಕರ್ಣಕರ, ಗಂಗಾವತಿ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement