ಇದ್ಯಾವ ನ್ಯಾಯ?
ಲೈಂಗಿಕ ಕಿರುಕುಳ ಆರೋಪ ನ್ಯಾ. ಗಂಗೂಲಿ ವಿರುದ್ಧ ಕ್ರಮ. ಇಲ್ಲಿ (ಕ.ಪ್ರ. 06.12.2013 ಪುಟ 12) ಯಾವ ವಕೀಲಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸಿದ ಸುಪ್ರೀಂ ಕೋರ್ಟ್ನ ತನಿಖಾ ಸಮಿತಿ ನ್ಯಾ. ಗಂಗೂಲಿಗೆ ಲೈಂಗಿಕ ಅಭಿರುಚಿ ಇತ್ತು. ಇದು ಸಾಧುವಾದುದ್ದಲ್ಲ ಎಂದು ತನಿಖೆ ನಡೆಸಿದ ಸಮಿತಿ ಅಭಿಪ್ರಾಯಪಟ್ಟಿದೆ. ಆದರೆ ಗಂಗೂಲಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದೆ. ಆದರೆ ಅದಕ್ಕೆ ಸೂಕ್ತ ಕಾರಣ ನೀಡಿಲ್ಲ. ದೇಶದ ಉಚ್ಛ ನ್ಯಾಯಾಲಯದ ತನಿಖಾ ಸಮಿತಿ, ತನಿಖೆ ನಡೆಸಿ ನ್ಯಾ. ಗಂಗೂಲಿಯವರ ಲೈಂಗಿಕ ಅಭಿರುಚಿ ಇತ್ತು, ಇದು ಸಾಧುವಾದುದ್ದಲ್ಲ ಎಂದು ಹೇಳಿದ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳುವುದಿಲ್ಲವೆಂದು, ಈ ದೇಶದ ಜನತೆಗೆ ತಿಳಿಸಬೇಕು ಮತ್ತು ಅದನ್ನು ತಿಳಿದುಕೊಳ್ಳುವ ಹಕ್ಕು ದೇಶದ ಜನತೆಗಿದೆ. ಹಾಗಾದರೆ ಈ ದೇಶದಲ್ಲಿ ತೆಹಲ್ಕಾ ಸಂಪಾದಕ ತೇಜಪಾಲ್ಗೊಂದು ನ್ಯಾಯ, ನ್ಯಾಯಮೂರ್ತಿಗಳಿಗೊಂದು ನ್ಯಾಯವೇ? ಆರೋಪ ಸಾಬೀತಾಗಿರುವುದರಿಂದ ತೇಜ್ಪಾಲ್ ವಿರುದ್ಧ ತೆಗೆದುಕೊಂಡ ಕ್ರಮವನ್ನು ಗಂಗೂಲಿಯವರ ಮೇಲೂ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಈ ದೇಶದ ಜನ ಸಂಶಯದ ದೃಷ್ಟಿಯಿಂದ ನೋಡಬೇಕಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡದೆ ಸ್ಪಷ್ಟ ಕಾರಣವನ್ನು ನೀಡಲಿ.
-ಬ್ಯಾಂಕ್ ಶಿವಕುಮಾರ್, ಮೈಸೂರು.
ಅನಧಿಕೃತ ಸ್ಥಳದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ
ಹಾಸನದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎಡ ಭಾಗದಲ್ಲಿ ಅಧಿಕೃತ ನಿಲುಗಡೆ ಜಾಗವಿಲ್ಲದ ಕಡೆ ದ್ವಿಚಕ್ರ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಿರುತ್ತಾರೆ. ಇಲ್ಲಿ ವಾಹನಗಳ ನಿಲುಗಡೆಗೆ ಯಾವುದೇ ಶುಲ್ಕವಿರುವುದಿಲ್ಲ. ಮುಖ್ಯವಾಗಿ ಈ ಜಾಗದಲ್ಲಿ ಆಟೋಗಳು ನಿಲ್ದಾಣದ ಹತ್ತಿರಕ್ಕೆ ಹೋಗಿ ಪ್ರಯಾಣಿಕರನ್ನು ಇಳಿಸುವ ಸ್ಥಳ. ಇದರಿಂದ ವಯೋವೃದ್ಧರಿಗೆ ಮತ್ತು ಸಣ್ಣ ಮಕ್ಕಳಿರುವ ಹೆಂಗಸರಿಗೆ ಮತ್ತು ಲಗ್ಗೇಜ್ ಇರುವ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿತ್ತು. ಆದರೆ ಈಗ ದ್ವಿಚಕ್ರ ವಾಹನಗಳು ತುಂಬಿರುವುದರಿಂದ ಬಹಳ ತೊಂದರೆಯಾಗಿರುತ್ತದೆ. ಆದ್ದರಿಂದ ಸಂಬಂಧಪಟ್ಟ ಬಸ್ ನಿಲ್ದಾಣದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ದ್ವಿಚಕ್ರ ವಾಹನಗಳ ನಿಲುಗಡೆ ನಿಷೇಧಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಿ.
-ಎ.ಸಿ. ವೆಂಕಟೇಶ್ಬಾಬು, ಅರಕಲಗೂಡು
ವಿಮಾನ ನಿಲ್ದಾಣದಲ್ಲಿ ಕನ್ನಡ
ಬೆಂಗಳೂರಿನ ವಿಮಾನ ನಿಲ್ದಾಣವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡುತ್ತಿರುವುದು ಒಳ್ಳೆಯ ವಿಷಯ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಹೊಸ ಮೆರಗನ್ನು ಕೊಡುವುದರ ಜೊತೆಗೆ ನಾಡಿನ ನುಡಿಯಾದ ಕನ್ನಡಕ್ಕೆ ಸಹ ಸರಿಯಾದ ಸ್ಥಾನವನ್ನು ಕಲ್ಪಿಸುವತ್ತ ಗಮನಹರಿಸಬೇಕು. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿರುವ ನಾಮಫಲಕಗಳಲ್ಲಿ ಇಂಗ್ಲಿಷ್ ಅಕ್ಷರಗಳನ್ನು ದೊಡ್ಡದಾಗಿ ಮುದ್ರಿಸಿ ಕನ್ನಡದ ಅಕ್ಷರಗಳನ್ನು ತೀರ ಚಿಕ್ಕದಾಗಿ ಮುದ್ರಿಸಲಾಗಿದೆ. ಇದಲ್ಲದೆ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹೊರಡುವ ಹಾಗೂ ಇಳಿಯುವುದರ ಕುರಿತ ಘೋಷಣೆಗಳು ಕನ್ನಡದಲ್ಲಿ ಇರುವುದಿಲ್ಲ. ಪಾರ್ಕಿಂಗ್ ರಸೀತಿ , ಟೋಲ್ ರಸೀತಿ ಹೀಗೆ ಯಾವುದರಲ್ಲೂ ಕನ್ನಡದ ಬಳಕೆ ಆಗಿಲ್ಲ. ಒಟ್ಟಾರೆಯಾಗಿ ವಿಮಾನ ನಿಲ್ದಾಣದಲ್ಲಿರುವ ವಾತಾವರಣದಲ್ಲಿ ಕನ್ನಡದ ಬಳಕೆ ಸರಿಯಾಗಿ ಆಗುತ್ತಿಲ್ಲ. ಬೇರೆ ದೇಶಗಳ ವಿಮಾನ ನಿಲ್ದಾಣಗಳಲ್ಲಿ ಹೆಮ್ಮೆಯಿಂದ ತಮ್ಮ ತಮ್ಮ ಭಾಷೆಗಳಿಗೆ ಪ್ರಾಮುಖ್ಯ ಕೊಟ್ಟು ಇಂಗ್ಲಿಷ್ಗೆ ನಂತರದ ಸ್ಥಾನವನ್ನು ಕೊಡಲಾಗುತ್ತದೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲೂ ಸಹ ಇನ್ನು ಮುಂದೆ ಕನ್ನಡಕ್ಕೆ ಅಗ್ರಸ್ಥಾನ ಸಿಗಲಿ ಎಂದು ಆಶಿಸುವೆ.
-ರವಿ ಸಾವ್ಕಾರ್, ಬೆಂಗಳೂರು
ಹಾಲು ಶುದ್ಧವಾಗಬೇಕಾದರೆ ಹಸು ರಕ್ಷಿಸಿ
ಇವನು ಕಟುಕ, ಇವನು ಸಜ್ಜನ ಎಂಬ ಭೇದಭಾವ ಇಲ್ಲದೆ, ಎಲ್ಲರನ್ನೂ ತನ್ನ ಹಸುಳೆಗಳೆಂದು ತಿಳಿದು ಹಾಲು ಕೊಡುವ ಹಸುಗಳಿಗೆ ಬೇಕಾದ ರಕ್ಷಣೆ ಒದಗಿಸಲು ತಯಾರಿಲ್ಲದ ಸರ್ಕಾರ, ಹಾಲು ಕಲಬೆರಕೆಯಾಗಿದೆ ಎಂದು ಚಿಂತಿಸಿದರೆ ಫಲವಿದೆಯೇ? ಹಸುಗಳಿಲ್ಲದಿದ್ದರೆ ಹಾಲಿನ ಕೊರತೆ ಸಹಜ. ಹಾಲು ಧನದಿಂದಲ್ಲ, ದನದಿಂದ. ಅದು ಗೋಮಾತೆಯ ಕರುಣೆಯ ಕೊಡುಗೆ ಎಂಬುದನ್ನು ಎಲ್ಲರೂ ಅರಿಯಬೇಕು. ಹಸುಳೆಗಳು ಉಳಿಯಬೇಕಾದರೆ ಹಸುಗಳು ಉಳಿಯಬೇಕು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಸರ್ಕಾರ ಸರಿಯಾದ ವ್ಯವಸ್ಥೆಯನ್ನು ಮಾಡಿದರೆ, ಕಲಬೆರಕೆ ಹಾಲಿನ ಸಮಸ್ಯೆ ಬಹುಪಾಲು ಬಗೆಹರಿಯಬಹುದು.
-ಶ್ರೀದೇವಿ, ಮೂಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.