ಎಷ್ಟಾದರೂ ದೊಡ್ಡವರ ಮಗ
ದೆಹಲಿಯ ಗ್ರೀನ್ ಪಾರ್ಕ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ತಮ್ಮ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆಯಲು ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ತುಂಬಾ ಜನರ ಖಾತೆಯನ್ನು ತಮ್ಮ ಬ್ಯಾಂಕಿನಲ್ಲಿ ತೆರೆಯಲು ಕಾರಣರಾಗಿದ್ದರು. ಅಲ್ಲಿನ ಅಕೌಂಟೆಂಟ್ ಅಂತೂ ಹಗಲು ರಾತ್ರಿಯೆನ್ನದೆ ಓಡಾಡಿ ಆ ಭಾಗದ ಪ್ರತಿಯೊಬ್ಬರನ್ನೂ ಸಂಪರ್ಕಿಸಿ ಅತಿ ಹೆಚ್ಚು ಖಾತೆ ತೆಗೆಸಿದ್ದರು. ಹೀಗಾಗಿ ಒಮ್ಮೆ ಬ್ಯಾಂಕಿಗೆ ಹೆಚ್ಚು ಜನ ಬಂದು ತಮ್ಮ ಚೆಕ್ ಹಿಡಿದು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಎಂದಿಗೂ ಸಮಯಕ್ಕೆ ಸರಿಯಾಗಿ ಬರುತ್ತಿದ್ದ ಅಕೌಂಟೆಂಟ್ ಅಂದು ಮಾತ್ರ ತಡ. ಮ್ಯಾನೇಜರ್ ಗ್ರಾಹಕರನ್ನುದ್ದೇಶಿಸಿ, "ಅಕೌಂಟೆಂಟ್ರಿಗೆ ಬಹುಶಃ ಅವರು ದಿನಾಲೂ ಬರುತ್ತಿದ್ದ ಸಿಟಿ ಬಸ್ ಕೆಟ್ಟಿರಬಹುದು, ಆಟೋನಾದರೂ ಮಾಡಿಕೊಂಡು ಖಂಡಿತಾ ಬರುತ್ತಾರೆ. ದಯಮಾಡಿ ಸಹಕರಿಸಿ" ಎಂದು ಮನವಿಮಾಡಿಕೊಂಡರು. ಅಂದು ಅಕೌಂಟೆಂಟ್ರು ಹನ್ನೆರಡು ನಿಮಿಷ ತಡವಾಗಿ ಬಂದು, ಬಂದ ತಕ್ಷಣ ಎಲ್ಲರಿಗೂ ಕೈಮುಗಿದು, ಬಸ್ ದಾರಿಯಲ್ಲಿ ಕೆಟ್ಟು ನಿಂತಿದ್ದರಿಂದ ಆಟೋ ಹಿಡಿದು ಬರಲು ತಡವಾಯಿತೆಂದೂ, ಅದಕ್ಕಾಗಿ ಕ್ಷಮಿಸಬೇಕೆಂದೂ ಕೇಳಿಕೊಂಡು ತಕ್ಷಣ ತಮ್ಮ ಚೇಂಬರಿಗೆ ಹೋಗಿ, ಖಜಾನೆಯ ಬಾಗಿಲು ತೆಗೆದು ಸೇವೆಯನ್ನು ಪ್ರಾರಂಭಿಸಿದರು. ಅವರ ವಿನಯಪೂರ್ವಕ ನಡವಳಿಕೆ, ಸೌಜನ್ಯದ ಪರಿಚಯವಿದ್ದ ಗ್ರಾಹಕರು ಮರುಮಾತನಾಡಲಿಲ್ಲ. ಅಲ್ಲಿಯೇ ಸರದಿಯಲ್ಲಿ ನಿಂತಿದ್ದವರೊಬ್ಬರು "ನೋಡಿ, ಎಂಥ ವಿನಯ ಪೂರ್ವಕ ನಡವಳಿಕೆ. ಎಷ್ಟಾದರೂ ದೊಡ್ಡವರ ಮಗ. ತಂದೆಯ ಗುಣ ಬಂದಿದೆ" ಎಂದರು. ಅಲ್ಲಿಯೇ ಸರದಿಯಲ್ಲಿ ನಿಂತಿದ್ದ ಎಸ್.ಎಲ್.ಭೈರಪ್ಪನವರು ಅಚ್ಚರಿಗೊಂಡು, "ಅವರ ತಂದೆ ಯಾರು?" ಎಂದು ಕೇಳಿದರು. ಅವರು ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಮಗ ಎಂಬ ಉತ್ತರ ಬಂತು. ಲಾಲ್ ಬಹಾದ್ದೂರರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾಗಲೂ, ಪ್ರಧಾನ ಮಂತ್ರಿಗಳಾಗಿದ್ದಾಗಲೂ ತಮ್ಮ ಮಕ್ಕಳನ್ನೆಂದೂ ಸರ್ಕಾರಿ ಕಾರಿನಲ್ಲಿ ಪಯಣಿಸಲು ಬಿಡುತ್ತಿರಲಿಲ್ಲ. ಕಾಲೇಜಿಗೆ ಹೋಗಬೇಕಾದರೂ ಸಾಮಾನ್ಯ ಮಕ್ಕಳಂತೆ ಚಪಾತಿ ಡಬ್ಬ ತೆಗೆದುಕೊಂಡು ಸಾರಿಗೆ ಬಸ್ಸಿನಲ್ಲಿ ಕಾಲೇಜಿಗೆ ಹೋಗಿ ಬರಬೇಕಾಗಿತ್ತು. ಬಿ.ಕಾಂ., ಮುಗಿದ ಮೇಲೆ ಶಾಸ್ತ್ರಿಯವರ ಮಗ ಜಾಹಿರಾತು ನೋಡಿ, ಪರೀಕ್ಷೆ ಪಾಸುಮಾಡಿ ಗುಮಾಸ್ತರಾಗಿ ಸೇರಿದ್ದರು. ಸೇವಾವಧಿಯ ಆಧಾರದ ಮೇಲೆ ಅಕೌಂಟೆಂಟ್ ಹುದ್ದೆಗೇರಿದ್ದರು. ಈ ಘಟನೆಯನ್ನು ಎಸ್.ಎಲ್. ಭೈರಪ್ಪನವರು ತಮ್ಮ "ಭಿತ್ತಿ" ಕೃತಿಯಲ್ಲಿ ಉಲ್ಲೇಖಿಸಿಸಿದ್ದಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.