ಲೋಕಪಾಲ ವ್ಯವಸ್ಥೆ ಜಾರಿಗೆ?
ಜನಲೋಕಪಾಲ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಾಯ ತರಲು ದೇಶದ ವಿಖ್ಯಾತ ನಿರಶನ ಸತ್ಯಾಗ್ರಹಿ ಅಣ್ಣಾಹಜಾರೆ ಅವರ ಸ್ವಗ್ರಾಮವಾದ ರಾಳೆಗಾಂವಸಿದ್ದಿಯಲ್ಲಿ ಸತ್ಯಾಗ್ರಹವನ್ನು ಆರಂಭಿಸುತ್ತಿರುವಂತೆಯೇ, ಕೇಂದ್ರ ಸರ್ಕಾರ, ಈಗಿನ ಸಂಸತ್ತಿನ ಅಧಿವೇಶನದಲ್ಲೇ ಲೋಕಪಾಲ ವಿಧೇಯಕವನ್ನು ಅಂಗೀಕರಿಸಲು ಸಿದ್ಧವೆಂದು ಪ್ರಕಟಿಸಿರುವುದು ಸರಿಯಾಗಿಯೇ ಇದೆ.
ಸರ್ಕಾರ ಹಿಂದೆ ಮಂಡಿಸಿದ್ದ ಲೋಕಪಾಲ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದರೂ, ರಾಜ್ಯಸಭೆ, ಮಂಡನೆಯಾದ ಕೆಲವು ತಿದ್ದುಪಡಿಗಳ ಪರಿಶೀಲನೆಗೆ ಸಮಿತಿಯೊಂದಕ್ಕೆ ಕಳಿಸಿತ್ತು. ಈಗ ಬದಲಾದ ವಿಧೇಯಕ ಮತ್ತೆ ರಾಜ್ಯಸಭೆ ಲೋಕಸಭೆಗಳಲ್ಲಿ ಸದ್ಯದಲ್ಲೇ ಅಂಗೀಕಾರವಾಗುವುದು ಕಷ್ಟವೇ.
ಈ ವಿಚಾರದಲ್ಲಿ ಆಳುವ ಕೂಟ, ಪ್ರತಿಪಕ್ಷಗಳು ಪರಸ್ಪರ ಸಮಾಲೋಚನೆಯ ಅನಂತರ, ಒಂದಲ್ಲ ಒಂದು ರೀತಿಯ ಲೋಕಪಾಲ ಕಾಯಿದೆಯ ರಚನೆಗೆ ಮುಂದಾಗಿ, ವಿಧಿಬದ್ಧವಾಗಿ ಕಾಯಿದೆ ಜಾರಿಗೆ ಬರುವಂತೆ ಮಾಡಲೇಬೇಕು.
ತಾತ್ವಿಕವಾಗಿ, ಲೋಕಪಾಲ ವ್ಯವಸ್ಥೆಯನ್ನು ಯಾವ ಪಕ್ಷವೂ ವಿರೋಧಿಸಿಲ್ಲ. ಭಿನ್ನಾಭಿಪ್ರಾಯಗಳಿರುವುದು ಕೆಲವು ವಿವರಗಳ ವಿಚಾರದಲ್ಲಿ. ಈಗ ಲೋಕಪಾಲ ವ್ಯವಸ್ಥೆಯನ್ನು ಕಾಯಿದೆಯ ಕಡತಕ್ಕೆ ಸೇರಿಸುವುದು ಸಾಧ್ಯವಾದರೆ, ಮುಂದೆ, ಅನುಭವದ ಹಿನ್ನೆಲೆಯಲ್ಲಿ ಬೇಕಾದ ಬದಲಾವಣೆ ಮಾಡಿಕೊಳ್ಳುವುದು ಸಾಧ್ಯ. ಈಗ ಲೋಕಪಾಲ ವಿಧೇಯಕಕ್ಕೆ ಮುಕ್ತಿ ಸಿಗದೆ ಹೋದರೆ, ಮುಂದೆ ಏನಾದೀತೋ ಈಗ ಹೇಳುವುದು ಕಷ್ಟ.