ಅರ್ಧ ಶತಮಾನದ ಪ್ರಯತ್ನ ಲೋಕಪಾಲ ದರ್ಶನ
1960ರ ದಶಕದಲ್ಲೇ, ಮುರಾರ್ಜಿ ದೇಸಾಯಿ ನೇತೃತ್ವದ ಮೊಟ್ಟ ಮೊದಲ ಆಡಳಿತ ಸುಧಾರಣೆ ಆಯೋಗದ ವರದಿಯಲ್ಲಿ ಲೋಕಪಾಲ - ಲೋಕಾಯುಕ್ತ ವ್ಯವಸ್ಥೆಯನ್ನು ಭ್ರಷ್ಟಾಚಾರದ ವಿರುದ್ಧದ ಸಮರದಲ್ಲಿ ಪ್ರಥಮ ಅಸ್ತ್ರವನ್ನಾಗಿ ಅಳವಡಿಸಬೇಕೆನ್ನುವ ಶಿಫಾರಸ್ಸು ಇತ್ತು.
ಅದನ್ನು ಇದುವರೆಗೆ ಯಾವ ಸಂಘಟಿತ ರಾಜಕೀಯ ಪಕ್ಷ ಅಥವಾ ಜನಪ್ರಾತಿನಿಧಿಕ ವ್ಯವಸ್ಥೆ ವಿರೋಧಿಸಿರಲಿಲ್ಲ. ಲೋಕಪಾಲ ಎಲ್ಲರಿಗೂ ಬೇಕಾಗಿತ್ತು. ಆದರೆ ಪ್ರತಿಬಾರಿ, (ಈಗಿನದ್ದು ಒಂಭತ್ತನೆಯ ಪ್ರಯತ್ನ) ಸಂಸತ್ತಿನ ಮುಂದೆ ಲೋಕಪಾಲ ವಿಧೇಯಕವನ್ನು ಮಂಡಿಸಿದಾಗ ರಾಜಕಾರಣಿಗಳು ಅದನ್ನು ಒಂದಲ್ಲ ಒಂದು ನೆಪ ಹೇಳಿ ಅಂಗೀಕಾರವಾಗದಂತೆ ನೋಡಿಕೊಂಡರು.
ಸಾಮಾನ್ಯವಾಗಿ, ಸಂಸತ್ತಿನಲ್ಲಿ ಕೇಳಿಬಂದ ಟೀಕೆ ಎಂದರೆ ಕೆಲವು ವಿಧೇಯಕಗಳು ತೀರ ದುರ್ಬಲವಾಗಿದ್ದವು ಎನ್ನುವುದಾದರೆ, ಇನ್ನು ಕೆಲವು ವಿಧೇಯಕಗಳು ಕ್ರೂರವಾಗಿದ್ದವು ಎಂದೇ ಹೇಳಲಾಗಿತ್ತು. ಇದುವರೆಗೆ ದೇಶ ಕಂಡ ಪ್ರತಿಯೊಂದು ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲೂ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಪ್ರಸ್ತಾಪ ಇದ್ದೇ ಇದೆ. ಒಂದಲ್ಲ ಒಂದು ರೀತಿಯಲ್ಲಿ ಲೋಕಪಾಲ ವ್ಯವಸ್ಥೆಯ ಹೆಸರಿಲ್ಲದೇ ಹೋದರೂ, ಅಂತಹ ಸಂಸ್ಥೆ ಅಗತ್ಯ ಎನ್ನುವ ಪ್ರಸ್ತಾಪವಿದೆ.
ಆದರೂ, ಲೋಕಪಾಲ ಕಲ್ಪನೆ, ಕಲ್ಪನಾ ಲೋಕದಲ್ಲೇ ಉಳಿದುಬಿಟ್ಟಿತ್ತು. ಅದಕ್ಕೆ ಕಾರಣ ಜನಸಮುದಾಯಗಳ ಮಧ್ಯೆ ಯಾವ ಶಕ್ತಿಯೂ ಈ ಹೋರಾಟವನ್ನು ಕೊಂಡೊಯ್ದಿರಲಿಲ್ಲ. ಅಂತಹ ಪ್ರಯತ್ನ ದೊಡ್ಡ ರೀತಿಯಲ್ಲಿ ಮೊದಲು ನಡೆದಿದ್ದು ಲೋಕನಾಯಕ ಜಯಪ್ರಕಾಶ ನಾರಾಯಣರ ಸಂಪೂರ್ಣ ಕ್ರಾಂತಿಯ ಹೋರಾಟದ ಕಾಲದಲ್ಲಿ. ಅದು ತುರ್ತು ಪರಿಸ್ಥಿತಿಯ ಅವಾಂತರದಲ್ಲಿ ಮುಳುಗಿ ಹೋಯಿತು.
ಅನಂತರ ರಾಜೀವ ಗಾಂಧಿ ಅವರ ಕಾಲದಲ್ಲಿ ವಿಶ್ವನಾಥ ಪ್ರತಾಪ ಸಿಂಗ್ ಅವರು ತಮ್ಮ ಜನ ಹೋರಾಟ ಸಂಘಟನೆಯ ಹೆಸರಿನಲ್ಲಿ ಮತ್ತೆ ಭ್ರಷ್ಟಾಚಾರದ ವಿರೋಧಿ ಆಂದೋಲನವನ್ನು ಜನರ ಮುಂದಿಟ್ಟರು.
ಈ ಎಲ್ಲ ಪ್ರಯತ್ನಗಳನ್ನು ಕಂಡು ವಿಧೇಯಕದ ಮಂಡನೆಯ ಹಂತದಲ್ಲೇ ಸ್ಥಗಿತವಾದವು. ಅನಂತರದ ದಿನಗಳಲ್ಲಿ ಅಣ್ಣಾ ಹಜಾರೆ ನೇತೃತ್ವದ ಜನಲೋಕಪಾಲ ಕಾಯಿದೆಯ ಹೋರಾಟಕ್ಕೆ ದೇಶದ ಎಲ್ಲ ಕಡೆ ಪ್ರಚಂಡ ಬೆಂಬಲ ಸಿಕ್ಕರೂ ಸಂಸತ್ತಿನಲ್ಲಿ ಅದು ಕಾಯಿದೆಯ ಕಡತವನ್ನು ಸೇರುವುದರಲ್ಲಿ ವಿಫಲವಾಯಿತು.
ಈ ಬಾರಿ, ಪ್ರಸ್ತುತ ಲೋಕಸಭೆಯ ಅವಧಿಯ ಕೊನೆಯ ವಾರಗಳಲ್ಲಿ, ಐದು ದಶಕಗಳ ಹೋರಾಟ ಯಶಸ್ವಿಯಾಗುವ ಹಂತ ತಲುಪಿದ್ದು ಒಂದು ಮಹಾನ್ ರಾಜಕೀಯ, ಸಂವೈಧಾನಿಕ ದಾಖಲೆಯೇ.
ನಿಜ. ಈಗಲೂ ಸಂಸತ್ತಿನ ಉಭಯ ಸದನಗಳೂ ಅಂಗೀಕರಿಸಿದ ರೀತಿಯಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದು ಹಾಕುವ ಸಾಮರ್ಥ್ಯ ವಿಧೇಯಕಕ್ಕೆ ಇಲ್ಲ ಎಂದು ಅನೇಕರು ಪ್ರಾಮಾಣಿಕವಾಗಿ ಭಾವಿಸಿದ್ದಾರೆ.
ಈಗ ಸಾರ್ವಭೌಮಾಧಿಕಾರ ಸರ್ಕಾರದ ಪ್ರಮುಖ ಹುದ್ದೆಯಾದ ಪ್ರಧಾನಿಯನ್ನು ಲೋಕಪಾಲ ವಿಧೇಯಕದ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಇದರಿಂದ ಆ ಹುದ್ದೆಗೆ ಏರುವವರನ್ನು "ಹೆದರಿಸುವ" (ಬ್ಲಾಕ್ಮೇಲ್) ಒಂದು ದಂಧೆಯೇ ಹುಟ್ಟುಹಾಕಿದಂತೆ ಆಗಬಹುದೆನ್ನುವ ಭೀತಿಯೂ ಅನೇಕರಲ್ಲಿ ಇದೆ.
ಅದೇ ರೀತಿ, ಆಯಕಟ್ಟಿನ ಸ್ಥಾನಗಳಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳ ಕುತ್ತಿಗೆ ಪಟ್ಟಿ ಹಿಡಿಯಬಲ್ಲ ಶಕ್ತಿಗಳು ಇರುವ ಗುಂಪುಗಳ ಸೃಷ್ಟಿಯಾಗುವ ಭೀತಿಯೂ ಇದ್ದಿದ್ದೇ. ಅದನ್ನೇ ಮುಲಾಯಂ ಸಿಂಗ್ ಯಾದವ್ ಅವರು ಲೋಕಸಭೆಯಲ್ಲಿ ಬುಧವಾರ ಇನ್ನು ಮುಂದೆ ಯಾವ ಅಧಿಕಾರಿಯೂ ಯಾವ ಕಡತಕ್ಕೂ ಸಹಿ ಹಾಕುವುದಿಲ್ಲ ಎಂದು ಅಲಂಕಾರಿಕವಾಗಿ ಹೇಳಿದ್ದು.
ಈ ಎಲ್ಲ ಅಂಜಿಕೆಗಳನ್ನು ಸಾರಾಸಗಟು ತಳ್ಳಿ ಹಾಕುವಂತಿಲ್ಲ. ಆದರೆ ಕಾಯಿದೆಯ ದುರುಪಯೋಗದ ವಿರುದ್ಧ ತಡೆಗಟ್ಟೆಗಳ ನಿರ್ಮಾಣಕ್ಕೆ ಕಾಯಿದೆಯ ಜಾರಿಯ ಅನುಭವ ಬೇಕು. ಅದಕ್ಕೆ ಸಮಯ ಬೇಕು.
ಈ ಐತಿಹಾಸಿಕ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡನೆಯಿಂದ ಹಿಡಿದು ಅಂಗೀಕಾರದ ಹಂತದವರೆಗೂ ಮುನ್ನಡೆಸಿದ ಕೀರ್ತಿಯನ್ನು ಪಡೆಯಲು ಕಾಂಗ್ರೆಸ್, ಬಿಜೆಪಿಗಳು ಪ್ರಯತ್ನಿಸಿದ್ದರಲ್ಲಿ ತಪ್ಪೇನೂ ಇಲ್ಲ. ಅಂತಿಮವಾಗಿ ಆ ಕೀರ್ತಿ ಸೇರಬೇಕಾದ್ದು ಸರ್ವತಂತ್ರ ಸ್ವತಂತ್ರ ಗಣರಾಜ್ಯದ ಜನಸ್ತೋಮಗಳಿಗೆ.
ಸಂಸತ್ತಿನಲ್ಲಿ ವಿಧೇಯಕ ಅಂಗೀಕಾರವಾದ ಕೂಡಲೇ ಕಾಯಿದೆಯಾಗಿ ಜಾರಿಗೆ ಬರುವುದಿಲ್ಲ. ಅದಕ್ಕೆ ರಾಷ್ಟ್ರಪತಿಯ ಅಂಕಿತ ಬೀಳಬೇಕು. ಕಾಯಿದೆಯನ್ನು ಜಾರಿಗೆ ತರಲು ನಿಯಮಗಳನ್ನು ರೂಪಿಸಬೇಕು. ಅನೇಕ ಸಂದರ್ಭಗಳಲ್ಲಿ ಕಾಯಿದೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುವ ರೀತಿಯಲ್ಲಿ ನಿಯಮಗಳನ್ನು ರಚಿಸಿದ ಉದಾಹಣೆಗಳೂ ನಮ್ಮ ಮುಂದಿವೆ. ಇವೆಲ್ಲವನ್ನೂ ಸರ್ಕಾರ ನಡೆಸುವ ಜನ, ಅತ್ಯುನ್ನತ ಮಟ್ಟದ ಅಧಿಕಾರಿಗಳು ನಿಭಾಯಿಸಲೇಬೇಕು. ನಿಯಮಗಳ ರಚನೆಯಲ್ಲಿ ಅಗತ್ಯ ಬಿದ್ದರೆ, ಸರ್ಕಾರದ ಹೊರಗೆ, ಪ್ರತಿಷ್ಠಿತ ಕಾನೂನು ಶಾಲೆಗಳಲ್ಲಿರುವ ತಜ್ಞರ ಸಹಕಾರವನ್ನೂ ಪಡೆಯಬೇಕು. ಈ ಬಾರಿ ಲೋಕಪಾಲ ವಿಧೇಯಕ ಅಂಗೀಕಾರವಾಗಲೇಬೇಕೆಂದು ರಾಹುಲ ಗಾಂಧಿ ಹಟ ಹಿಡಿದು ಕೆಲಸ ಮಾಡಿದರೆಂದು ವರದಿಗಳಿವೆ. ಅದಕ್ಕಾಗಿ ರಾಹುಲ ಗಾಂಧಿ ಅಭಿನಂದನೆಗೆ ಅರ್ಹರು. ಎಲ್ಲ ಪ್ರತಿಪಕ್ಷಗಳ ನಾಯಕರೂ ಸಹಕಾರ ನೀಡಿದ್ದಾರೆ ಅವರಿಗೂ ದೇಶ ಋಣಿಯಾಗಿರಬೇಕು.
ಇನ್ನು ಉಳಿದಿರುವುದು ಅನುಷ್ಠಾನ ಪರ್ವ.