ಇವರು ಮಹಿಳಾ ಪುರೋಹಿತರು
ಮಂಗಳೂರಿನ ಕುದ್ರೋಳಿಯಲ್ಲಿ ವಿಧವೆಯರು ಅರ್ಚಕರಾಗಿ ನೇಮಕವಾದದ್ದು ಅನೇಕ ವಾದವಿವಾದಗಳಿಗೆ ಗುರಿಯಾಗಿದ್ದನ್ನು ಗಮನಿಸಿದ್ದೇವೆ. ಪುರೋಹಿತ ವರ್ಗವೆಂದರೆ ಪುರುಷರಿಗೆ ಮಾತ್ರ ಮೀಸಲಾದ ಹುದ್ದೆ ಎಂಬ ನಂಬಿಕೆ ಇದೆ. ಆದರೆ ಈ ಉದ್ಯೋಗಕ್ಕೀಗ ಮಹಿಳೆಯರೂ ಲಗ್ಗೆ ಇಟ್ಟಿರುವುದು ಬದಲಾವಣೆಯ ಕುರುಹಾಗಿದೆ. ಅದರಲ್ಲೂ ಕೆಲವು ದಲಿತ ಮಹಿಳೆಯರ ಮೂಲಕ ಇಂತಹ ಇನ್ನೊಂದು ಕ್ರಾಂತಿ ಆಗಿರುವುದು ನೆರೆಯ ಆಂಧ್ರ ಪ್ರದೇಶದಲ್ಲಿ. ಹೈದರಾಬಾದಿನಲ್ಲಿ ಈಗ ಇಂತಹ 20 ಜನ ಮಹಿಳಾ ಪುರೋಹಿತರು ಕಾರ್ಯ ನಿರತರಾಗಿದ್ದಾರೆ. ಅವರಲ್ಲಿ ಶೇ.90 ರಷ್ಟು ಮಂದಿ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ಬಡತನದ ಹಿನ್ನೆಲೆಯಿಂದ ಬಂದು ಜೀವನೋಪಾಯಕ್ಕಾಗಿ ಏಕೆ ಪುರೋಹಿತರಾಗಬಾರದು ಎಂದಾಲೋಚಿಸಿ, ಈ ಕೈಂಕರ್ಯವನ್ನು ಕೈಗೊಂಡಿದ್ದಾರೆ. ಅವರನ್ನು ಅಲ್ಲಿಯ ಜನ ಸಹ ಪ್ರೋತ್ಸಾಹಿಸುತ್ತಿದ್ದಾರೆ. ಇವರೆಲ್ಲಾ ಸಾಮಾನ್ಯದವರಲ್ಲ. ವೇದಗಳನ್ನು ಓದಿ ಪಾರಂಗತರಾದವರು. ವಿಶ್ವ ವಿದ್ಯಾನಿಲಯದಲ್ಲಿ ಸಂಸ್ಕೃತದಲ್ಲಿ ಓದಿ ಸ್ನಾತಕೋತ್ತರ ಪದವಿ ಪಡೆದವರು. ಸಂಸ್ಕೃತ ಕಲಿಕೆಯಲ್ಲಿ ಅಪಾರ ಶ್ರದ್ಧೆ ಮತ್ತು ಪ್ರೀತಿಯನ್ನು ಬೆಳೆಸಿಕೊಂಡವರು. ತೆಲುಗಿನ ಸುಪ್ರಸಿದ್ಧ ನಟಿ ಆರತಿ ಅಗರ್ವಾಲಳ ವಿವಾಹವನ್ನು ಮಾಡಿಸಿದ್ದು ವಸುಧಾ ಶಾಸ್ತ್ರಿ ಎಂಬ ಮಹಿಳಾ ಪುರೋಹಿತರು. ಈಗಾಗಲೇ 1000 ಕ್ಕೂ ಹೆಚ್ಚು ಮದುವೆ ಮಾಡಿಸಿದ ಕೀರ್ತಿ ಈ ವಸುಧಾ ಶಾಸ್ತ್ರಿಯವರದ್ದು. ವೇದ, ಉಪನಿಷತ್ಗಳಲ್ಲಿ ಪ್ರಾವೀಣ್ಯ ಪಡೆದಿರುವ ವಸುಧಾ ಶಾಸ್ತ್ರಿ ಅನೇಕ ಯಜ್ಞ ಯಾಗಾದಿಗಳನ್ನೂ ಮಾಡಿಸಿದ್ದಾರೆ. ಇದು ಸಂಪ್ರದಾಯಸ್ಥ ಪುರೋಹಿತಶಾಹಿಗಳ ಕೆಂಗಣ್ಣಿಗೆ ಗುರಿಯಾದರೂ, ಶಾಸ್ತ್ರದಲ್ಲಿ ಹೀಗೆ ಮಹಿಳೆಯರು ಪೂಜೆ-ಪುನಸ್ಕಾರ ಮಾಡಿಸಬಾರದೆಂದು ಎಲ್ಲಿಯೂ ಉಲ್ಲೇಖ ಮಾಡದೇ ಇರುವುದರಿಂದ ಸುಮ್ಮನಾಗಿದ್ದಾರೆ. 31 ವರ್ಷದ ವೈಷ್ಣೊವೀ ದೇವಿ ಎಂಬ ಪುರೋಹಿತರು 1997 ರಿಂದಲೂ ಮದುವೆ ಮತ್ತು ಮಂಗಳಕಾರ್ಯಗಳನ್ನು ಮಾಡಿಸುತ್ತಿದ್ದಾರೆ. ತಾನು ಉಚ್ಚರಿಸುವ ಎಲ್ಲ ಮಂತ್ರಗಳ ಅರ್ಥವನ್ನೂ ಮತ್ತು ಅವುಗಳ ಪ್ರಾಮುಖ್ಯತೆಯನ್ನೂ ವಿವರಿಸುವ ಈ ಪುರೋಹಿತೆ ಶಾಲೆಯೊಂದರ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈಗಂತೂ ಅನೇಕರು ತಮ್ಮ ಮನೆಯಲ್ಲಿ ನಡೆಯುವ ಮಂಗಳ ಕಾರ್ಯಗಳಿಗೆ ಮಹಿಳಾ ಪುರೋಹಿತರನ್ನೇ ಆಮಂತ್ರಿಸುತ್ತಾರೆ. ಇದರಿಂದ ಹೆಚ್ಚು ಜನ ಆಹ್ವಾನಿತರು ತಮ್ಮ ಮನೆಯ ಮಂಗಳ ಕಾರ್ಯಕ್ಕೆ ಬರುತ್ತಾರೆಂಬ ನಂಬಿಕೆ ಅವರದ್ದು. ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಈ ಮಹಿಳಾ ಪುರೋಹಿತರು ಮಂಗಳ ಕಾರ್ಯ ಮಾಡಿಸುತ್ತಿರುವುದರಿಂದ ಇವರಿಗೆ ಬೇಡಿಕೆ ದಿನೇ ದಿನೆ ಏರುತ್ತಿದೆ. ಮೈಸೂರಿನ ಭ್ರಮರಾಂಬ ಮಹೇಶ್ವರಿಯವರೂ ಸಹ ಕನ್ನಡದ ಮಹಿಳಾ ಪುರೋಹಿತರಾಗಿ ಯಶಸ್ವಿಯಾಗಿದ್ದಾರೆ. ವಿಷ್ಣುವರ್ಧನ್ ಅವರ ಮನೆಯ ಪುರೋಹಿತರಾಗಿದ್ದುದು ಇವರ ಹೆಗ್ಗಳಿಕೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.