ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

"ರಸ್ತೆ ಭಾಗ್ಯ" ಯೋಜನೆ ಬೇಕು

Srinivasa Murthy VN
Updated On : 19 Dec 2013, 12:42 pm

ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ. ರಾಜ್ಯದಲ್ಲಿ ರಾಜ್ಯ ಹೆದ್ದಾರಿಗಳನ್ನು ಬಿಟ್ಟರೆ ಉಳಿದ ಜಿಲ್ಲೆ, ತಾಲ್ಲೂಕು, ನಗರ ಮುಖ್ಯ ರಸ್ತೆ ವ್ಯವಸ್ಥೆ ಹದಗೆಟ್ಟಿದ್ದು ಅದರಲ್ಲೂ ವಿಶೇಷವಾಗಿ ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲಿ ಹೇಳಲಾರದಂತಹ ಪರಿಸ್ಥಿತಿ ಉದ್ಭವವಾಗಿದ್ದು ತಮ್ಮ ಅಧಿಕಾರದಲ್ಲಿ ಗ್ರಾಮ ಪಂಚಾಯತಿಯಿಂದ- ತಾಲೂಕು ತಹಸೀಲ್ ಕಚೇರಿಯವರೆಗೆ ರಸ್ತೆ ಭಾಗ್ಯ ಯೋಜನೆ ಅನುಷ್ಠಾನಗೊಳಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಯಾವ ರೀತಿಯಾಗಿ ಈಗಾಗಲೇ "ಪ್ರಧಾನಮಂತ್ರಿ ಸಡಕ್ ಯೋಜನೆ" ಇದೆಯೋ ಅದೇ ರೀತಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿಯಿಂದ -ತಾಲ್ಲೂಕು ತಹಸೀಲ್ ಕಚೇರಿಯವರೆಗೆ ರಸ್ತೆ ಭಾಗ್ಯ ಯೋಜನೆ ಅನುಷ್ಠಾನಗೊಳಿಸಿದರೆ ಇದರಿಂದ ಬಡವನಿಂದ ಬಲ್ಲಿದರಿಗೂ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ. ಈ ಹಿಂದಿನ ದಿನಗಳಲ್ಲಿ ಒಬ್ಬ ಮಂತ್ರಿ ಜಿಲ್ಲೆಗೆ, ತಾಲೂಕಿಗೆ ಬಂದರೆ ಅಲ್ಲಿರುವ ಎಲ್ಲಾ ರಸ್ತೆಗಳಲ್ಲಿ ಡಾಂಬರೀಕರಣ ಮಾಡಲಾಗುತ್ತಿತ್ತು. ಆದರೆ ಈಗಿನ ದಿನಗಳಲ್ಲಿ ಅದರ ವಿರುದ್ಧವಾಗಿಯೇ ನಡೆದಿದೆ. ಅದೇನೆಂದರೆ ಮಂತ್ರಿ ಬಿಡಿ ರಾಜ್ಯದ ಮುಖ್ಯಮಂತ್ರಿ ಬಂದರೆ ಡಾಂಬರು ರಸ್ತೆಯ ಮೇಲೆ ಗೊಚ್ಚು ಮಣ್ಣು ಹಾಕಿ ಅಂದಿನ ದಿನವನ್ನು ಕಳೆಯುತ್ತಾರೆ. ಅಲ್ಲಿ ರಸ್ತೆಯಾಗಿದೆಯೋ ಗೊತ್ತಿಲ್ಲ. ಆದರೆ ಅದಕ್ಕೆ ಅವರಿಗೆ ಸಿಗಬೇಕಾದ ಅನುದಾನ ಮಾತ್ರ ಸಿಕ್ಕಿರುತ್ತದೆ. ಇದರ ಬಗ್ಗೆ ತಾವು ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಗುಲಬರ್ಗಾ ಜಿಲ್ಲೆಯಲ್ಲಿ ಅನೇಕ ತಾಲೂಕು ಮುಖ್ಯ ರಸ್ತೆಗಳು ತುಂಬಾ ವರ್ಷಗಳಿಂದ ಅಭಿವೃದ್ಧಿಯಾಗದೇ ಹಾಗೇ ತಗ್ಗು ದಿನ್ನೆಗಳಿಂದ ಕೂಡಿವೆ. ನಗರ ರಸ್ತೆಗಳಂತೂ ಆ ದೇವರೇ ಕಾಪಾಡಬೇಕು.
-ಶಿವರಾಜ ಅಂಡಗಿ,  ಕಲಬುರ್ಗಿ
ಹುಚ್ಚು ಸಲಹೆ!


ಕೇಂದ್ರ ಸರ್ಕಾರವು ಗುಟ್ಕಾ ನಿಷೇಧಿಸಿದಂತೆ ಅಡಕೆಯನ್ನು ನಿಷೇಧಿಸುವಂತೆ ಸುಪ್ರೀಂಕೋರ್ಟಿಗೆ ಮೊರೆ ಹೋಗಿದೆಯಂತೆ! (ಕ.ಪ್ರ. ವರದಿ ದಿ. 6.12.13 ಪುಟ 8 ಹುಬ್ಬಳ್ಳಿ ಆವೃತ್ತಿ) ಇದೊಂದು ಹುಚ್ಚು ಸಲಹೆಯೇ! ಪ್ರಾಚೀನ ಕಾಲದಿಂದ ಅಡಿಕೆಯನ್ನು ಶುಭ ಸಮಾರಂಭದಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ. ತಾಂಬೂಲವನ್ನು ನೈವೇದ್ಯ ಮಾಡುವ ಸಂಪ್ರದಾಯವೂ ಇದೆ. ಊಟದ ನಂತರ ವೀಳ್ಯದೆಲೆ, ಅಡಿಕೆ, ಸುಣ್ಣ, ಪಚ್ಚ ಕರ್ಪೂರ, ಯಾಲಕ್ಕಿ, ಲವಂಗ ಮಿಶ್ರಿತ ತಾಂಬೂಲವು ಜೀರ್ಣಕಾರಕವೆಂದು ಆಯುರ್ವೇದ ಶಾಸ್ತ್ರದಲ್ಲಿಯೂ ಹೇಳಲಾಗಿದೆ. ಹೀಗಿರುವಾಗ ನಮ್ಮ ಮೂರ್ಖ ಶಿಖಾಮಣಿಗಳು ಅಧಿಕಾರ ಸ್ಥಾನದಲ್ಲಿ ಕುಳಿತು ಅನೇಕ ಮೂರ್ಖ ತೀರ್ಮಾನ ತೆಗೆದುಕೊಂಡು ಸಾರ್ವಜನಿಕರನ್ನು ಗೋಳು ಹೊಯ್ದುಕೊಳ್ಳುತ್ತಿರುವುದು ಸರಿಯಲ್ಲ. ಕೇವಲ ಅಡಿಕೆಯು ಎಂದಿಗೂ ಆರೋಗ್ಯಕ್ಕೆ ಹಾನಿಕಾರಕವಲ್ಲ. ಅದರ ಜೊತೆ ತಂಬಾಕು ಹಾಗೂ ಕೆಲವು ರಸಾಯನಿಕ ವಸ್ತುಗಳು ಸೇರಿದರೆ ಮಾತ್ರ ಅಪಾಯಕಾರಿ. ಆದ್ದರಿಂದ ಶುದ್ಧ ಅಡಿಕೆಯನ್ನು ನಿಷೇಧಿಸುವುದು ಮೂರ್ಖತನದ ಪರಮಾವಧಿ. ಕಾರಣ ಸರ್ಕಾರ ಇಂತಹ ಹುಚ್ಚು ತೀರ್ಮಾನ ತೆಗೆದುಕೊಳ್ಳಬಾರದೆಂದು ಆಗ್ರಹ.
-ಜಿ. ಗೋಪಾಲಕೃಷ್ಣ, ಬಳ್ಳಾರಿ

ಲಿಂಗ ತಾರತಮ್ಯ ಅಲ್ಲವೆ?

ಶ್ರೀಕಂಠದತ್ತ ಅವರ ನಿಧನದ ಬಗ್ಗೆ ಹೆಚ್ಚಾಗಿ ಎಲ್ಲ ಪತ್ರಿಕೆಗಳು ಯದುವಂಶದ ಕೊನೆಯ ಕೊಂಡಿ ಮುರಿದು ಬಿತ್ತು ಎಂದು ಪ್ರಕಟಿಸಿದ್ದಾರೆ. ಶ್ರೀಕಂಠದತ್ತ ಒಡೆಯರ್ ಅವರ ತಂದೆಗೆ ಇವರಲ್ಲದೇ ಇನ್ನೂ ಐವರು ಹೆಣ್ಮಕ್ಕಳು ಇರುವುದು ಜನತೆಗೆ ಚಿಂತಿಸಬೇಕಾದ ವಿಚಾರ. ಒಂದೇ ಕುಡಿ ಎಂದು ಹೇಳಿರುವುದು ಲಿಂಗತಾರತಮ್ಯದ ಸ್ಪಷ್ಟ ಉದಾಹರಣೆ. ಗಂಡು ಮಗು ಮಾತ್ರವೇ ವಂಶೋದ್ಧಾರಕ ಎಂದು ಪರಿಗಣಿಸುವುದು ಈ ಪ್ರಜಾಪ್ರಭುತ್ವ ದೇಶದಲ್ಲಿ ಅಗತ್ಯವೇ? ಎಲ್ಲ ಕಾನೂನುಗಳಲ್ಲಿ ಮಹಿಳೆಗೆ ಸಮಾನ ಸ್ಥಾನಮಾನ ಎಂದು ಘೋಷಿಸುವಾಗಲೂ ಕೌಟುಂಬಿಕ ವಿಚಾರಗಳಲ್ಲೂ ಕಡೆಗಣಿಸುತ್ತಿರುವುದು ಎಷ್ಟು ಸರಿ? ಮಾಧ್ಯಮಗಳಲ್ಲಿ ಕೂಡಾ ಮಹಿಳೆಯ ಸ್ಥಾನಮಾನ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ಕೂಡಾ ನೋಡಬೇಕಿದೆ.
-ಸುಷ್ಮ ಕ್ರಾಸ್ತಾ, ವಿವೇಕಾನಂದ ಕಾಲೇಜು, ಪುತ್ತೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement