ಸಕಾಲದಲ್ಲಿ ಡಿಇಓಗಳ ಪರದಾಟ
'ಸಕಾಲ' ಸರಿಯಾದ ಸಮಯಕ್ಕೆ ನಾಗರಿಕರಿಗೆ ಸೇವೆ ನೀಡುತ್ತಿರುವುದು ಸರಿಯಷ್ಟೇ. ಆದರೆ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಡಿಇಓಗಳ ಕಷ್ಟವನ್ನು ಕೇಳುವವರೇ ಇಲ್ಲ. ಏನಾದರೂ ತೊಂದರೆ ಬಂದು ಮೇಲಿನ ಅಧಿಕಾರಿಗಳನ್ನು ಕೇಳಿದರೆ ಇಷ್ಟ ಇದ್ದರೆ ಕೆಲಸ ನಿರ್ವಹಿಸಿ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂಬ ಧೋರಣೆಯಿಂದ ಮಾತನಾಡುತ್ತಾರೆ. ಸಕಾಲದಲ್ಲಿ ಡಿಇಓಗಳಿಗೆ ಯಾವುದೇ ಭತ್ಯೆಗಳು ಇಲ್ಲ. ಅಕಸ್ಮಾತ್ ಮೂರ್ಛೆ ಬಂದರೂ ಪ್ರಥಮ ಚಿಕಿತ್ಸೆಯನ್ನು ನೀಡುವ ಸೌಜನ್ಯ ಇಲ್ಲಿನ ಅಧಿಕಾರಿಗಳಿಗೆ ಇರುವುದಿಲ್ಲ. ಬೆಳಗ್ಗೆ 10.00 ಗಂಟೆಗೆ ಕೆಲಸ ಪ್ರಾರಂಭವಾದರೆ ಮುಗಿಯುವುದು ಸಂಜೆ 7.00 ಅಥವಾ 8.00 ಗಂಟೆಯವರೆಗೆ ಇರಬೇಕು. ಸೌಜನ್ಯಕ್ಕಾದರೂ ಯಾವುದೇ ಕಾಫಿ/ಟೀ ವ್ಯವಸ್ಥೆ ಇರುವುದಿಲ್ಲ. ಬಹಳ ದೂರದಿಂದ ಬಂದು ಹೋಗುವ ಡಿಇಓಗಳೂ ಇದ್ದಾರೆ. ಇನ್ನು ದೆಹಲಿಯಲ್ಲಿ ನಡೆದ ಘಟನೆ ನೆನೆದರೆ ಭಯವಾಗುತ್ತೆ. ಅದರಲ್ಲೂ ರಾತ್ರಿ 'ಸಕಾಲ'ದ ಕೆಲಸ ಮುಗಿಸಿಕೊಂಡು ಹೋಗುವ ಹೆಣ್ಣು ಮಕ್ಕಳಿಗೆ ಯಾವುದೇ ರಕ್ಷಣೆಯನ್ನೂ ನೀಡುವುದಿಲ್ಲ. ಅಲ್ಲದೆ 3 ತಿಂಗಳ ಹೆರಿಗೆ ರಜೆಯನ್ನು ಸಹ ನೀಡುವುದಿಲ್ಲ. ನೀವು ಹೆರಿಗೆಗೆ ಹೋದರೆ ನಿಮಗೆ ಯಾವುದೇ ರೀತಿಯ ಸಂಬಳವಾಗಲಿ, ವೈದ್ಯಕೀಯ ವ್ಯವಸ್ಥೆ ಇಲ್ಲ ಎನ್ನುತ್ತಾರೆ. ರಜೆಯನ್ನು ನೀಡಿ ಎಂದು ಅಧಿಕಾರಿಯನ್ನು ಕೇಳಿದರೆ 'ನೀವು ಅಂತಹ 'ಗುಡ್ ವರ್ಕರ್' ಅಲ್ಲ, ನಿಮ್ಮ ಜಾಗಕ್ಕೆ ಬೇರೆಯವರು ಬರುತ್ತಾರೆ ಬಿಡಿ. ಬೇರೆ ಕೆಲಸವನ್ನು ಹುಡುಕಿಕೊಳ್ಳಿ' ಎಂದು ಹೇಳುತ್ತಾರೆ. ಈಗಿನ ಕಾಲದಲ್ಲಿ ಉದ್ಯೋಗ ಸಿಗುವುದೇ ಕಷ್ಟ. ಅದರಲ್ಲೂ ಕೆಲಸ ಬಿಟ್ಟರೆ ನಮ್ಮಂತಹವರ ಪಾಡೇನು? ಬಡವರಾಗಿ ಹುಟ್ಟಿದ ಮಾತ್ರಕ್ಕೆ ಅಧಿಕಾರಿಗಳ ತುಳಿತಕ್ಕೆ ಒಳಗಾಗಬೇಕೇ? ಆದ್ದರಿಂದ ಸಕಾಲದಲ್ಲಿ ನೊಂದಿರುವ ಜೀವಿಗಳಿಗೆ ನ್ಯಾಯ ಒದಗಿಸಬೇಕೆಂದು ಈ ಮೂಲಕ ಸಂಬಂಧಪಟ್ಟವರಲ್ಲಿ ಪ್ರಾರ್ಥಿಸುತ್ತೇನೆ.
- ಸುಲೋಚನಾ, ಬೆಂಗಳೂರು
ಕೆಎಂಎಫ್, ಕೆಎಸ್‌ಆರ್‌ಟಿಸಿಯ ಕೆಟ್ಟ ಚಾಳಿ
ಈ ಎರಡೂ ಸಂಸ್ಥೆಗಳವರು ಯಾವುದೋ ಕಾರಣಗಳನ್ನು ನೀಡುತ್ತಾ ಆಗಾಗ ತಮ್ಮ ದರವನ್ನು ಏರಿಕೆ ಮಾಡಿ ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿರುವುದು ವೇದ್ಯ. ಈ ಪರಂಪರೆಯನ್ನು ತಪ್ಪಿಸಲು ಯಾವ ಪ್ರಗತಿಪರ ಸರ್ಕಾರ ಬಂದರೂ ಸಾಧ್ಯವಿಲ್ಲವೆನ್ನಬಹುದು. ಆದರೆ ಕೆ.ಎಂ.ಎಫ್ ಆಗಲೀ ಕೆ.ಎಸ್.ಆರ್.ಟಿ.ಸಿ.ಯಾಗಲೀ ದರ ಏರಿಕೆಯ ದಿನಗಳಂದು ಜನರನ್ನು ಅನಗತ್ಯವಾಗಿ, ವಿವೇಚನಾರಹಿತರಾಗಿ ಪೇಚಿಗೆ ಸಿಲುಕಿಸುತ್ತವೆ. ದರಗಳನ್ನು ರಾತ್ರೋ ರಾತ್ರಿ ರೇಡಿಯೋ, ಟಿ.ವಿ.ಗಳಲ್ಲಿ ಅವಸರದಿಂದ ಘೋಷಣೆ ಮಾಡಿದರೂ ಅದೆಷ್ಟೋ ಜನರಿಗೆ ಇದರ ಅರಿವೇ ಇರುವುದಿಲ್ಲ. ತತ್ಫಲವಾಗಿ ಜನರಿಗೆ ಪರದಾಟ, ಸಂಕಷ್ಟ. ಯಾಕೆ ಈ ಘನ ಸಂಸ್ಥೆಗಳವರು ಕನಿಷ್ಠ 24 ಗಂಟೆಯ ಮೊದಲು ದರ ಏರಿಕೆಯ ಸಂದೇಶವನ್ನು ಸಾರ್ವಜನಿಕರಿಗೆ ಮುಟ್ಟಿಸುವ ಸೌಜನ್ಯವನ್ನು ತೋರಿಸಬಾರದು? ಬೆಳಗಾಗುತ್ತಿದ್ದಂತೆ (ಟಿ.ವಿ., ರೇಡಿಯೋ ಘೋಷಣೆ ಹೊರತಾಗಿ) ದರ ಏರಿಕೆಯ ಭೂತವನ್ನು ಮೈ ಮೇಲೆ ಎಸೆಯಬೇಕು? ಕನಿಷ್ಠ ಒಂದು ದಿನ ಮೊದಲು ತಿಳಿಸಬಾರದೇ? ಗ್ರಾಹಕರೆಂದರೆ ಅಷ್ಟು ಅಸಡ್ಡೆಯೇ? ಅಥವಾ ಆ ಒಂದು ದಿನದ ಮಟ್ಟಿನ ನಷ್ಟ (?) ವನ್ನೂ ಭರಿಸಲಾಗದಷ್ಟು ಆರ್ಥಿಕ ದುರ್ಬಲರೇ ಇವರು?
-ಎನ್.ಡಿ.ಕಾಮತ್, ಮೈಸೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com