ಅತ್ಯಾಚಾರ... ಕೊಲೆ... ಗಲ್ಲು
ಭಾನುವಾರದ ದಿನಪತ್ರಿಕೆಗಳಲ್ಲಿ ಸಾಕಷ್ಟು ಪ್ರಮುಖವಾಗಿಯೇ ಪ್ರಕಟವಾಗಿರುವ ಎರಡು ವರದಿಗಳು ಗಮನ ಸೆಳೆಯುವಂತಹದ್ದೇ. ವಿವರಗಳನ್ನು ಗಮನಿಸಿದ ಕೂಡಲೇ ಮನಸ್ಸು ಖಿನ್ನವಾಗುವುದು ಸಹಜ. ಮೊದಲ ಸುದ್ದಿ ಮೈಸೂರಿಗೆ ಸಂಬಂಧಿಸಿದ್ದು.
ಸುಮಾರು ಎರಡು ವರ್ಷಗಳ ಹಿಂದೆ, ಮೈಸೂರು ತಾಲ್ಲೂಕಿನ ಒಂದು ಹಳ್ಳಿಯಲ್ಲಿ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ, ಅನಂತರ ಅವಳ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದ ವ್ಯಕ್ತಿಗೆ ಮರಣ ದಂಡನೆಯ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತ್ತು. ಅತ್ಯಾಚಾರ - ಅನಂತರ ಕೊಲೆಯ ಪ್ರಕರಣದಲ್ಲಿ ರಾಜ್ಯದಲ್ಲಿ ನ್ಯಾಯಾಲಯ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ್ದು ಇದೇ ಮೊದಲು. ಇದು ವಿರಳಾತಿವಿರಳ ಘಟನೆಗೆ ಸಂಬಂಧಿಸಿದ ವಿಚಾರ.
ಎರಡನೆಯ ಸುದ್ದಿ ಚಿಕ್ಕಮಗಳೂರಿನಲ್ಲಿ ಕಳ್ಳತನದ ದೂರಿನ ಆಧಾರದ ಮೇಲೆ ಆರೋಪವನ್ನು ಹೊತ್ತ ಒಬ್ಬ ಮಹಿಳೆಯನ್ನು ಕದ್ದ ಮಾಲಿನ ವಿಚಾರದಲ್ಲಿ ತನಿಖೆಗೆಂದು ಬೆಂಗಳೂರಿಗೆ ಕರೆತಂದು ಒಂದು ಲಾಡ್ಜ್ನಲ್ಲಿ ಪೊಲೀಸರು ಅತ್ಯಾಚಾರ ನಡೆಸಿದರೆಂದು ಮಹಿಳೆ ದೂರು ಕೊಟ್ಟಿದ್ದನ್ನು ಗಮನಿಸಿ, ಐವರು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ವಿಚಾರಣೆಗೆ ಆದೇಶ ನೀಡಿರುವುದು.
ಮೊದಲ ಪ್ರಕರಣದಲ್ಲಿ ಆರೋಪಿಯ ಅಪರಾಧ ನ್ಯಾಯಾಲಯಕ್ಕೆ ತೃಪ್ತಿಯಾಗುವ ರೀತಿಯಲ್ಲಿ ರುಜುವಾತಾಗಿದೆ. ಎರಡನೆಯ ಪ್ರಕರಣ ಇನ್ನೂ ದೂರಿನ ಹಂತದಲ್ಲಿದೆ. ಆದರೂ ಅತ್ಯಾಚಾರದ ದೂರಿರುವುದರಿಂದ ಐವರು ಪೊಲೀಸರನ್ನು ದಿಢೀರನೆ ಸಸ್ಪೆಂಡ್ ಮಾಡಲಾಗಿದೆ.
ಮಹಿಳೆಯರ ಮೇಲಿನ ಅತ್ಯಾಚಾರ ಕುರಿತ ಪ್ರಕರಣಗಳನ್ನು ಈಚೆಗೆ ಮಾಧ್ಯಮ ಪ್ರಪಂಚ ಗಂಭೀರವಾಗಿ ಪರಿಗಣಿಸಿ, ಸಾಕಷ್ಟು ವಿವರಗಳನ್ನು ಒಳಗೊಂಡಂತೆ ವರದಿಗಳನ್ನು ಪ್ರಕಟಿಸುತ್ತಿರುವುದು ನಿಜ. ದೆಹಲಿಯ ಯುವತಿಯ ಮೇಲೆ ಭಯಾನಕವಾಗಿ ಆರು ಮಂದಿ ಅತ್ಯಾಚಾರ ನಡೆಸಿದ್ದು, ಅನಂತರ ಆಕೆ ನಿಧನರಾಗಿದ್ದು, ಅಂತಾರಾಷ್ಟ್ರೀಯ ಸುದ್ದಿಯಾದ ಅನಂತರ, ಇಂತಹ ಪ್ರಕರಣಗಳಿಗೆ ಹೆಚ್ಚು ಪ್ರಾಮುಖ್ಯ ಬಂದಿದೆ. ಅತ್ಯಾಚಾರದಂತಹ ಅಪರಾಧದ ವಿಚಾರದಲ್ಲಿ ಸಾಮಾನ್ಯ ಜನರ ಕ್ರೋಧ ಯಾವ ಮಟ್ಟ ಮುಟ್ಟಿದೆ ಎಂದರೆ ಅತ್ಯಾಚಾರಿಗಳಿಗೆ ಗಲ್ಲು ಎನ್ನುವುದು ಸಾರ್ವಜನಿಕ ಘೋಷಣೆಯೇ ಆಗಿ ಬಿಟ್ಟಿದೆ.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕಾಯಿದೆಯ ವಿಧಿ-ನಿಯಮಗಳನ್ನು ಮಾರ್ಪಾಟು ಮಾಡಲು ಶಿಫಾರ್ಸು ಮಾಡುವಂತೆ ಸರ್ಕಾರ ಸುಪ್ರೀಮ್ ಕೋರ್ಟಿನ ನಿವೃತ್ತ ಶ್ರೇಷ್ಠ ನ್ಯಾಯಾಧೀಶ ವರ್ಮಾ ಅವರ ನೇತೃತ್ವದಲ್ಲಿ ನೇಮಿಸಿದ್ದ ಆಯೋಗದ ಶಿಫಾರ್ಸನ್ನು ಭಾಗಶಃ ಅಂಗೀಕರಿಸಿ, ಕಾಯಿದೆಗೆ ಹಲವು ಸುಧಾರಣೆಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿದೆ. ಅಂದರೆ, ಸರ್ಕಾರ ಈ ವಿಚಾರದಲ್ಲಿ ತೀವ್ರವಾದ ಆಸಕ್ತಿಯನ್ನೇ ಪ್ರದರ್ಶಿಸಿದೆ ಎನ್ನಬಹುದು.
ಈಗ ಹಲವು ವಲಯಗಳಲ್ಲಿ ತುಂಬಾ ಗಂಭೀರವಾಗಿ ಚರ್ಚೆಯಾಗುತ್ತಿರುವ ವಿಚಾರ ಎಂದರೆ ಅತ್ಯಾಚಾರಿಗಳಿಗೆ ಕೊಡಬಹುದಾದ ಶಿಕ್ಷೆ. ಅದೇ ಸಮಯದಲ್ಲೇ ಮುಂಬೈ ಹತ್ಯಾಕಾಂಡದಲ್ಲಿ ಸಿಕ್ಕಿಬಿದ್ದ ಏಕೈಕ ಅಪರಾಧಿ ಕಸಬ್ ಹಾಗೂ ಪಾರ್ಲಿಮೆಂಟ್ ಭವನದ ಮೇಲಿನ ದಾಳಿಯ ರೂವಾರಿ ಅಫ್ಜಲ್ ಗುರು ಅವರನ್ನು ನೇಣು ಹಾಕಿದ್ದು, ವೀರಪ್ಪನ್ ಜತೆ ಇದ್ದ ನಾಲ್ವರು ಸಂಗಾತಿಗಳನ್ನು ಗಲ್ಲಿಗೇರಿಸಲು ಸುಪ್ರೀಮ್ ಕೋರ್ಟ್ ನೀಡಿರುವ ತಡೆಯಾಜ್ಞೆಯ ಹಿನ್ನೆಲೆಯಲ್ಲಿ, ಗಲ್ಲು ಶಿಕ್ಷೆಗೆ ಸಂಬಂಧಿಸಿದ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ.
ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಒಂದು ಪತ್ರವನ್ನು ಬರೆದಿದೆ. ವರ್ಮಾ ಆಯೋಗದ ಶಿಫಾರ್ಸುಗಳನ್ನು ಜಾರಿಗೆ ತರುವ ಸಂಬಂಧದಲ್ಲಿ ಕಾಯಿದೆಯನ್ನು ಮಾರ್ಪಾಡು ಮಾಡುವುದಕ್ಕೆ ಹಾರ್ವರ್ಡ್ ಕಾನೂನು ಶಾಲೆಯ ಒಂದು ತಂಡದ ನೆರವನ್ನು ಸರ್ಕಾರ ಕೇಳಿದೆ. ಎರಡೂ ವಿಚಾರಗಳು ಅಂತಾರಾಷ್ಟ್ರೀಯ ವೇದಿಕೆಯನ್ನು ಏರಿದಂತಾಗಿದೆ.
ಈ ಎರಡೂ ವಿಚಾರಗಳಿಗೆ ಸಂಬಂಧಿಸಿದಂತೆ, ಅರ್ಥಪೂರ್ಣವಾದ ದೇಶವ್ಯಾಪಿ ಗಂಭೀರ ಚರ್ಚೆ ನಡೆಯಬೇಕಾದರೆ ಅದಕ್ಕೆ ಅಗತ್ಯವಾದ ಗಂಭೀರವಾದ ವಾತಾವರಣ ಸೃಷ್ಟಿಯಾಗಬೇಕು. ಈಗ ಅಂತಹ ವಾತಾವರಣ ಇಲ್ಲ. ಎಲ್ಲರೂ ಭಾವಾವೇಶದಿಂದ ಸಮೂಹ ಸನ್ನಿಗೆ ಒಳಗಾದವರಂತೆ ಮಾತಾಡುತ್ತಿರುವಂತಿದೆ.
ದೆಹಲಿಯ ಯುವತಿಯ ಮೇಲಿನ ಅತ್ಯಾಚಾರದ ಪ್ರಕರಣದ ಅನಂತರ ಒಂದು ಅತಿಪ್ರತಿಷ್ಠಿತ ಪತ್ರಿಕೆಯ ಪ್ರಬುದ್ಧ ಅಗ್ರಲೇಖನದಲ್ಲಿ, ಅತ್ಯಾಚಾರಕ್ಕೆ ಈಡಾಗಿದ್ದ ಯುವತಿ ಕೆಳಮಧ್ಯಮ ವರ್ಗದವರಾಗಿದ್ದರೂ ಸಾಮಾಜಿಕ ಶ್ರೇಣಿಯಲ್ಲಿ ಮೇಲೇರಲು ಪ್ರಯತ್ನಿಸುತ್ತಿರುವ ವರ್ಗಕ್ಕೆ ಸೇರಿದ್ದವರಾಗಿರುವುದನ್ನು ಗುರ್ತಿಸಲಾಗಿದೆ. ಆಕೆಗೆ ಭವಿಷ್ಯದ ಬದುಕಿನಲ್ಲಿ ಆಸೆ ಇತ್ತು. ಅವರ ಮೇಲೆ ಅತ್ಯಾಚಾರ ನಡೆಸಿದವರೆಲ್ಲರೂ ಹೆಚ್ಚು ಕಡಿಮೆ ಭವಿಷ್ಯದ ಜೀವನದ ಕನಸನ್ನು ಕಾಣಲು ಸಾಧ್ಯವಿಲ್ಲದ ದಿನಗೂಲಿಗಳು. ಎಲ್ಲರಿಗೂ ಕುಡಿತದ ಚಟವಿತ್ತು.
ಉದಾರೀಕರಣದ ಯುಗದಲ್ಲಿ ಕಾರ್ಮಿಕ ಕಾಯಿದೆಗಳ ಸುಧಾರಣೆಯೇ ಆಗದೇ, ಸಂಘಟಿತ ಉದ್ಯಮವಲಯದಲ್ಲೂ ಬಹುಸಂಖ್ಯಾತರಾಗುತ್ತಿರುವ ದಿನಗೂಲಿಗಳಿಗೆ ಭದ್ರತೆಯೇ ಇಲ್ಲದಂತಾಗಿದೆ. ಅವರು ಜೀವನದ ಮೌಲ್ಯಗಳನ್ನೇ ಕಳಚಿಕೊಳ್ಳುತ್ತಿದ್ದಾರೆ ಎನ್ನುವ ಮಾತೂ ಆ ಅಗ್ರಲೇಖನದಲ್ಲಿತ್ತು. ಇದು ಅಧ್ಯಯನಕ್ಕೆ ಅರ್ಹವಾದ ವಿಚಾರ.
ಮೈಸೂರಿನ ಬಳಿಯ ಘಟನೆಯಲ್ಲೂ ಅಷ್ಟೇ. ಅಪರಾಧಿ ಭದ್ರತೆಯ ಭರವಸೆಯೇ ಇಲ್ಲದಿದ್ದ ವ್ಯಕ್ತಿ. ಅವನೂ ಘಟನೆ ನಡೆದಾಗ ಪಾನಮತ್ತನಾಗಿದ್ದನೆಂದು ನ್ಯಾಯಾಲಯದ ಮುಂದೆ ಸಾಕ್ಷ್ಯ ಮಂಡನೆಯಾಗಿದೆ.
ಪಾಲಾರ್ ಸೇತುವೆಯನ್ನು ಕೆಡವಿ 22 ಮಂದಿಯ ಸಾವಿಗೆ ಕಾರಣವಾಗಿದ್ದ ನಾಲ್ವರನ್ನು ಗಲ್ಲಿಗೇರಿಸುವುದನ್ನು ತಡೆಹಿಡಿದಿರುವ ಸುಪ್ರೀಮ್ ಕೋರ್ಟ್ ಬೇಗ ತೀರ್ಪು ನೀಡಬೇಕಾಗಿದೆ. ರಾಜೀವ ಗಾಂಧಿಯ ಹಂತಕರ ಶಿಕ್ಷೆಯ ವಿಚಾರವೂ ಪ್ರಸ್ತಾಪವಾಗಲೇ ಬೇಕಾದ ಸಮಯವಿದು. ಇಲ್ಲಿ ರಾಜಕೀಯ ಒತ್ತಡಗಳೂ ಇವೆ. ಚಿಕ್ಕಮಗಳೂರು ಪೊಲೀಸರ ವಿರುದ್ಧ ಈಗ ಇರುವ ಸಾಕ್ಷ್ಯ ಒಂದೇ; ಆ ಮಹಿಳೆಯ ದೂರು. ಆದರೂ ಅತ್ಯಾಚಾರ ಎಂದ ಕೂಡಲೇ ಭಾವನಾಪ್ರಧಾನ ಕ್ರಮವೇ ಮುಖ್ಯವಾಗುತ್ತದೆ.
ಈ ಪ್ರಶ್ನೆಗಳ ನಿರ್ವಿಕಾರ ಪರಿಶೀಲನೆಗೆ ಅಗತ್ಯವಾದ ವಾತಾವರಣ ಸೃಷ್ಟಿಯಾದ ಅನಂತರವೇ ಮುಂದಿನ ಹೆಜ್ಜೆ ಇಡುವುದು ಒಳ್ಳೆಯದು.