ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ರಕ್ಷಣಾ ಇಲಾಖೆ: ಹೀಗೂ ಉಂಟೆ?

Srinivasa Murthy VN
Updated On : 25 Feb 2013, 9:36 am

ಇಡೀ ದೇಶದ ರಕ್ಷಣೆಯ ಹೊಣೆ ಹೊತ್ತಿರುವ ರಕ್ಷಣಾ ಇಲಾಖೆಯಲ್ಲಿ ಆಗೀಗ, ಅಲ್ಲಿ- ಇಲ್ಲಿ ಪ್ರಾಮಾಣಿಕತೆಯ ಅಭಾವ ಕಂಡು ಬಂದಾಗಲೇ ದೇಶದ ಒಂದು ಪ್ರಬುದ್ಧ, ಕಟ್ಟೆಚ್ಚರದ ಶಿಸ್ತಿನ ಸಂಸ್ಥೆಯ ಒಳನೋಟ ಸಾರ್ವಜನಿಕರಿಗೆ ಸಿಕ್ಕಿದ್ದು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಇತ್ತೀಚಿನ ದಿನಗಳವರೆಗೂ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಅವ್ಯವಹಾರ ಪ್ರಕರಣಗಳು ಬೆಳಕಿಗೆ ಬಂದಿದ್ದು ನಿಜ.
ವಿ.ಕೆ. ಕೃಷ್ಣಮೆನನ್, ಲಂಡನ್‌ನಲ್ಲಿ ಭಾರತದ ಹೈಕಮಿಷನರ್ ಆಗಿದ್ದಾಗ ಕಳಪೆ ಗುಣಮಟ್ಟದ ಜೀಪ್‌ಗಳನ್ನು ದುಬಾರಿ ಹಣ ಕೊಟ್ಟು ಖರೀದಿ ಮಾಡಿದ್ದ ಪ್ರಕರಣದ ತನಿಖೆಯೂ ನಡೆದಿತ್ತು. ಆದರೆ ಆಗಿನ ಸನ್ನಿವೇಶದಲ್ಲಿ ತನಿಖೆ ಅದರ ತರ್ಕಬದ್ಧ ಅಂತ್ಯವನ್ನು ಕಾಣಲೇ ಇಲ್ಲ. ಅನಂತರ ಕೃಷ್ಣ ಮೆನನ್ ಭಾರತಕ್ಕೆ ಹಿಂತಿರುಗಿ ರಕ್ಷಣಾ ಮಂತ್ರಿಯಾಗಿ ವಿಜೃಂಭಿಸಿದಾಗ ಅವರ ವಿರುದ್ಧ ರಾಜಕೀಯ ಆರೋಪಗಳು ಕಂಡುಬಂದರೂ ಅವ್ಯವಹಾರದ ಆರೋಪಗಳು ಇರಲಿಲ್ಲ ಎನ್ನುವುದು ಬೇರೆ ಮಾತು.
ರಕ್ಷಣಾ ಇಲಾಖೆಯಲ್ಲಿನ ವ್ಯವಹಾರಗಳು ಬೆಳಕಿಗೆ ಬರುವುದು ಕಡಿಮೆ. ಅದಕ್ಕೆ ಅದರದ್ದೇ ಆದ ವಿಶೇಷ ಆಡಿಟ್ ವ್ಯವಸ್ಥೆ ಇದೆ. ಆದರೂ ಅನೇಕ ಸಂದರ್ಭಗಳಲ್ಲಿ ರಕ್ಷಣಾ ಇಲಾಖೆಯ ಭದ್ರ ಕೋಟೆಯನ್ನು ಭೇದಿಸಿ ಹಲವು ಅವ್ಯವಹಾರದ ಪ್ರಕರಣಗಳು ನಮ್ಮ ರಾಜಕೀಯ ಇತಿಹಾಸದಲ್ಲಿ ಸೇರಿ ಹೋಗಿವೆ. ಕಪ್ಪು ಚುಕ್ಕಿಗಳವು.
ಬೊಫೋರ್ಸ್ ಹಗರಣ ಅಂತಹ ಪ್ರಕರಣಗಳಿಗೆ ಒಂದು ಜ್ವಲಂತ ಉದಾಹರಣೆ. ಆಗ ರಾಜೀವ ಗಾಂಧಿ ಅವರ ಮೇಲೇ ನೇರವಾದ ಆರೋಪ ಇದ್ದರೂ, ಪ್ರತ್ಯಕ್ಷ ಸಾಕ್ಷ್ಯ ಸಿಗಲಿಲ್ಲ. ಇನ್ನೂ ಬೊಫೋರ್ಸ್ ಪ್ರಕರಣದ ವಿಚಾರಣೆ ಪೂರ್ತಿಯಾಗಿ ಮುಗಿದಿಲ್ಲ.
ಜಾರ್ಜ್ ಫರ್ನಾಂಡಿಸ್ ಅವರ ಕಾಲದಲ್ಲಿ ಹಲವು ಹಗರಣಗಳು ಪ್ರಚಾರ ಪಡೆದು ಕೆಲವು ಕಾಲ ಅವರು ಸರ್ಕಾರದಿಂದ ಹೊರಗೇ ಇರಬೇಕಾಯಿತು. ಅದರಲ್ಲಿ ಶವಪೆಟ್ಟಿಗೆಗಳ ಹಗರಣ ಪ್ರಮುಖವಾದದ್ದು. ಆದರೆ ಆ ಹಗರಣದ ತನಿಖೆಯ ಅನಂತರ ಅದನ್ನು ಎಲ್ಲರೂ ಮರೆತರು. ಈಗ ಇಟಲಿಯ ಹೆಲಿಕಾಪ್ಟರ್ ಕೊಳ್ಳುವ ಹಗರಣ ದೊಡ್ಡ ರೀತಿಯಲ್ಲೇ ಪ್ರಚಾರ ಪಡೆಯುತ್ತಿದೆ.
ಇವೆಲ್ಲವೂ ರಕ್ಷಣಾ ಇಲಾಖೆಯ ವ್ಯವಹಾರಕ್ಕೆ ಸಂಬಂಧಿಸಿದ್ದು. ಸೋಮವಾರದ ಪತ್ರಿಕೆಗಳಲ್ಲಿ ವರದಿಯಾಗಿರುವ ಒಂದು ಪ್ರಕರಣದಲ್ಲಿ ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಲ್ಲಿ ಒಬ್ಬರು ಹಾಗೂ ಅವರ ಐವರು ಸಂಗಾತಿಗಳನ್ನು ಮಣಿಪುರದ ಪೊಲೀಸಲು ಬಂಧಿಸಿರುವುದು ಆ ಇಲಾಖೆಯಲ್ಲಿ, ಶಿಸ್ತಿನ ಸ್ಥಾನದಲ್ಲಿ ಬೇಜವಾಬ್ದಾರಿತನದ ವಿಜೃಂಭಣೆ ಎದ್ದು ಕಾಣುತ್ತಿದೆ.
ಆ ಅಧಿಕಾರಿಯ ಸಂಗಾತಿಗಳ ತಂಡ ಸುಮಾರು 16 ಕೋಟಿ ರುಪಾಯಿಗಳಷ್ಟು ವೌಲ್ಯದ ಕಳ್ಳ ಔಷಧಿಗಳನ್ನು ಮ್ಯಾನ್‌ಮಾರ್‌ಗೆ ಸಾಗಿಸುತ್ತಿತ್ತು ಎನ್ನುವ ಆರೋಪ ಇದೆ. ಆರೋಪಿಗಳನ್ನು, ಅದರಲ್ಲಿ ಕರ್ನಲ್ ಸ್ಥಾನ ಪಡೆದ ಹಿರಿಯ ಅಧಿಕಾರಿಯೂ ಒಬ್ಬರಿದ್ದಾರೆ. ಮಣಿಪುರ ಪೊಲೀಸರು ಪ್ರಶ್ನಿಸುತ್ತಿದ್ದಾರೆ.
ಈ ಪ್ರಕರಣದ ವಿವರಗಳನ್ನು ಮಣಿಪುರ ಸರ್ಕಾರ ರಕ್ಷಣಾ ಇಲಾಖೆಯ ಕಾರ್ಯಾಲಯಕ್ಕೆ ತಿಳಿಸಿದೆ. ಎಂದಿನಂತೆ, ಅಲ್ಲಿ ಕೇಳಿ ಬಂದಿರುವುದು ವಿರಾವೇಶದ ಆಶ್ವಾಸನೆಯ ವಿಜೃಂಭಣೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಶಿಕ್ಷಿಸಲು ಹಿಂದೆ ಮುಂದೆ ನೋಡಲ್ಲ ಎನ್ನುವ ವಚನ.
ಆ ಅಧಿಕಾರಿ ಔಷಧಿಗಳ ಕಳ್ಳ ಸಾಗಾಣಿಕೆಯ ವಿಚಾರ ತಮಗೆ ಗೊತ್ತಿರಲಿಲ್ಲವೆಂದೂ, ಯಾರೋ ತಮ್ಮನ್ನು ತಮ್ಮ ಹಿತ ಸಾಧನೆಗೆ ಮೋಸದಿಂದ ಸಿಕ್ಕಿಸಿದ್ದಾರೆಂದೂ ಹೇಳಲಾಗಿದೆ. ದೇಶವನ್ನು ಶತ್ರುಗಳಿಂದ ರಕ್ಷಿಸಬೇಕಾದ ಇಲಾಖೆಯಲ್ಲೇ ಇಂತಹ ಅಪ್ರಾಮಾಣಿಕ ಪ್ರಕರಣಗಳು ನಡೆದಿವೆ ಎಂದರೆ, ಜನ ಅದನ್ನು ನಂಬುವ ಸ್ಥಿತಿ ಬಂದರೆ, ದೇಶದ ಗತಿ ಏನು? ಅದು ನಿರಂತರವಾದ ಪ್ರಶ್ನೆ. ಪ್ರಾಯಶಃ ಉತ್ತರ ಸಿಗುವುದೇ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement