ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 28 Feb 2013, 11:32 am

ಮೈಸೂರು ಜಿಲ್ಲೆ ಬೆಟ್ಟದಪುರದಿಂದ ಬಿ.ಕೆ. ಶ್ರೀಕಾಂತ್ ಅವರು ಬರೆಯುತ್ತಾರೆ- 'ಫೆ.13ರಂದು (ಮೈಸೂರು ಆವೃತ್ತಿ) ಪುಟ 2ರಲ್ಲಿ 'ಬೈಲಕುಪ್ಪೆಯಲ್ಲಿ ಪಾರಂಪರಿಕ ಕಾಲ್ನಡಿಗೆ ಜಾಥಾ' ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿದೆ. ಈ ಜಾಥಾ ನಡೆದಿದ್ದು ತಾಲ್ಲೂಕಿನ ಬಹುದೊಡ್ಡ ಹೋಬಳಿ ಕೇಂದ್ರವಾದ 'ಬೆಟ್ಟದಪುರ'ದಲ್ಲಿ ಮತ್ತು ಜಾಥಾವನ್ನು ಉದ್ಘಾಟಿಸಿದವರು, ಸ್ಥಳೀಯ ಪಂಚಾಯ್ತಿಯ ಮಾಜಿ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುಂಜಪ್ಪ ಕಾರ್ನಾಡರು. ಆದರೆ ದೂರದ ಬೈಲುಕುಪ್ಪೆಯ ಹೆಸರೇಕೆ ಸಾರ್?'
'ಪುಟ 5ರಲ್ಲಿ (ರಾಜ್ಯ ಪುಟ) 'ಸದನದಲ್ಲಿ ಸಿಎಂ ಅಭ್ಯರ್ಥಿಗಳ ಚರ್ಚೆ' ಶೀರ್ಷಿಕೆಯ ವಿವರಣೆಯ ಕೊನೆಯ ಕಾಲಂನಲ್ಲಿ 'ಬೇಲ್ ಬೇಲ್ ಎಂದು ಎಲ್ಲ ಕಡೆ ಹೋಗು ತೆಗೆದುಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು' ಎಂದಿದೆ. 'ಹೋಗಿ' ಎಂದಾಗಬೇಕಿತ್ತು.'
'ಫೆ.12ರಂದು 'ಕ್ರೀಡಾಪುಟ'ದಲ್ಲಿ (ಪುಟ 11) 'ವಿಂಡೀಸ್‌ಗೆ 48 ರನ್‌ಗಳ ಗೆಲುವು' ಶೀರ್ಷಿಕೆಯಲ್ಲಿ ಸಂಕ್ಷಿಪ್ತ ಸ್ಕೋರ್, 'ವೆಸ್ಟ್ ಇಂಡೀಸ್‌' 207/9 (50 ಓವರ್) ಎಂದು ಎರಡು ಸಲ ಪ್ರಕಟವಾಗಿದೆ ಮತ್ತು ಪಂದ್ಯಶ್ರೇಷ್ಠ ಅಸೀನಾ ಮಹಮ್ಮದ್ ಎಂದಿದೆ.
ಮಹಿಳಾ ಕ್ರಿಕೆಟ್ ಆಗಿದ್ದರಿಂದ 'ಪಂದ್ಯಶ್ರೇಷ್ಠೆ' ಆಗಿದ್ದರೆ ಒಳ್ಳೆಯದಿತ್ತು. ಹಾಗಂತ ಬ್ಯಾಟ್ಸ್‌ಮನ್‌ಗೆ 'ಬ್ಯಾಟ್ಸುಮನ್‌' ಅಂತ ಹೇಳೋಕಾಗುತ್ತಾ?' ಎಂದಿದ್ದಾರೆ.
ಬೆಂಗಳೂರಿನ ವಿಜಯನಗರದಿಂದ ಎಸ್.ಶೇಷಾದ್ರಿ ಬರೆಯುತ್ತಾರೆ, 'ಫೆ.22ರ ಪುಟ 4ರಲ್ಲಿ 'ಅರವಳಿಕೆ ಮದ್ದು ಹೆಚ್ಚಾಗಿ ನೀಡಿದ್ದರಿಂದ ಆಕೆ..... ಕೊನೆಯುಸಿರೆಳೆದಿದ್ದಾಳೆ' ಎಂದಿದೆ. ಅರವ ಎಂಬುದು ತಮಿಳು ಶಬ್ದ. ಅರಿವು ಎಂದರೆ ಜ್ಞಾನ, ಪ್ರಜ್ಞೆ. ಅರಿವಳಿಕೆ ಎಂದರೆ ಅನಸ್ತೇಷಿಯಾ. ಆದರೆ ಈ ಅರವಳಿಕೆ ಎಂದರೇನು ತಿಳಿಯದು.'
'ಫೆ.23ರ ಮುಖಪುಟದಲ್ಲೇ ಮತ್ತೊಂದು ತಪ್ಪಾಗಿದೆ. ತಮಿಳುನಾಡು ಗಡಿಭಾಗದ ಪಾಲಾರ್‌ನಲ್ಲೊಂದು ಶಾಲೆಯಂತಿರುವ ದೊಡ್ಡಿ ಎಂದು ಸುದ್ದಿಯಿದೆ. ಇಲ್ಲಿ ಶಾಲೆಯನ್ನು ದೊಡ್ಡಿಗೆ ಹೋಲಿಸಿದ್ದೀರಲ್ಲದೇ, ದೊಡ್ಡಿಯನ್ನು ಶಾಲೆಗಲ್ಲ. ದೊಡ್ಡಿ ಎನ್ನಬಹುದಾದಂತಹ ಒಂದು ಕೋಣೆಯನ್ನು ಶಾಲೆಯಾಗಿ ಪರಿವರ್ತಿಸಲಾಗಿದೆ ಎಂಬರ್ಥವೇ ಇಲ್ಲಿ ಸರಿ. ದೊಡ್ಡಿಯೇ ಇಲ್ಲಿ ಶಾಲೆಯಾಗಿದೆ ಎನ್ನುವುದು ಸೂಕ್ತ ಬಳಕೆ.'
'ಫೆ.21ರ 3ನೇ ಪುಟದ ಮಧ್ಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗಳ ವಿವಾಹೋತ್ಸವ ಫೋಟೋ ಪ್ರಕಟಿಸಿದ್ದೀರಿ. ಇದು ಅವರ ಖಾಸಗಿ ಸಮಾಚಾರ. ಇದರಿಂದ ಸಾರ್ವಜನಿಕರಿಗೆ ಏನೂ ಆಗಬೇಕಿಲ್ಲ. ಅದನ್ನು ಹೇಗೆ ಪ್ರಕಟಿಸಿದ್ದೀರಿ? ಅವರು ಮಾಜಿ ಪ್ರಧಾನಿ ಎಂಬ ಕಾರಣದಿಂದಲೇ? ಇಂತಹ ವಿಷಯಗಳನ್ನೇ ಪ್ರೆಸ್ ಕೌನ್ಸಿಲ್ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಅವರು ವಿರೋಧಿಸುವುದು.
ಒಂದು ಕಡೆ ಸಂದಿಗೊಂದಿ ಹುಡುಕಿ ಹೆಕ್ಕಿ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯವನ್ನು ಸ್ತುತ್ಯ ರೀತಿಯಲ್ಲಿ ಪ್ರಕಟಿಸುತ್ತೀರಿ. ಇನ್ನೊಂದು ಕಡೆ ಇಂತಹ ಖಾಸಗಿ ವಿಷಯಗಳನ್ನು ಪ್ರಕಟಿಸುತ್ತೀರಿ. ಅವರು ಹಣಕೊಟ್ಟು ಹಾಕಿಸಿದ್ದರೆ ನನ್ನದೇನು ಆಕ್ಷೇಪವಿಲ್ಲ. ಇಲ್ಲದಿದ್ದರೆ ನನ್ನ ಆಕ್ಷೇಪ' ಎಂದು ಹೇಳಿದ್ದಾರೆ.
ಎಲ್ಲ ರೀತಿಯ ಸುದ್ದಿಗಳಿಗೂ ಓದುಗರಿರುತ್ತಾರೆ. ಕೆಲವರಿಗೆ ಇಷ್ಟವಾಗದೇ ಹೋಗಬಹುದು. ಐಶ್ವರ್ಯಾ ರೈ ಬಸಿರಾಗಿದ್ದು ಕೂಡ ಅವರ ಖಾಸಗಿ ವಿಷಯ. ದರ್ಶನ್ ತನ್ನದೇ ಪತ್ನಿಗೆ ಹೊಡೆದಿದ್ದು ಕೂಡ ಖಾಸಗಿ ವಿಷಯ.

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement