ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪ್ರಗತಿ ... ಜನ ಕಲ್ಯಾಣ

Srinivasa Murthy VN
Updated On : 28 Feb 2013, 11:29 am

ಮುಂದಿನ ಲೋಕಸಭೆ ಚುನಾವಣೆಗೆ ಮುನ್ನ ಮನಮೋಹನ ಸಿಂಗ್ ನೇತೃತ್ವದ ಸರ್ಕಾರದ ಕಟ್ಟ ಕಡೆಯ ಬಜೆಟ್ ಮಂಡನೆಯ ಅವಕಾಶವನ್ನು ವಿತ್ತಮಂತ್ರಿ ಪಿ. ಚಿದಂಬರಮ್ ಅವರನ್ನು, ಧಾರಾಳವಾಗಿ ಆಳುವ ಕೂಟದ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ.
  ದೇಶದ ಪ್ರಗತಿಯ ವೇಗದ ಹೆಚ್ಚಳಕ್ಕೆ ಅಗತ್ಯವಾದ ಬಂಡವಾಳ ಹೂಡಿಕೆಯ ಪ್ರಮಾಣ ಅಗಾಧವಾದದ್ದು. ಆದರೆ ಚಿದಂಬರಮ್ ಗುರುವಾರ ತಮ್ಮ ಬಜೆಟ್ ಭಾಷಣದಲ್ಲಿ ಪ್ರಕಟಿಸಿದ ತೆರಿಗೆ ನೀತಿಯಿಂದ ಲಭ್ಯವಾಗುವುದು 18000 ಕೋಟಿ ರುಪಾಯಿಗಳಷ್ಟು ಮಾತ್ರ.
  ಪ್ರಗತಿಯ ಜತೆಗೇ ಜನಕಲ್ಯಾಣ ಕಾರ್ಯಕ್ರಮಗಳ ಜಾರಿಯ ವೇಗ ಹಾಗೂ ವ್ಯಾಪ್ತಿಯನ್ನು ಹಿಗ್ಗಿಸುವ ಪ್ರಯತ್ನದ ಸೂಚನೆ ಕಂಡು ಬಂದಿದ್ದರೂ, ಭಾಷಣದಲ್ಲಿ ಕಂಡು ಬಂದಿರುವ ಅಂಕಿ-ಅಂಶಗಳನ್ನು ಗಮನಿಸಿದರೆ, ಬಜೆಟ್‌ನಲ್ಲಿ ಆರ್ಥಿಕ ವ್ಯವಸ್ಥೆಯ ಆರೋಗ್ಯಕ್ಕಿಂತ ಹೆಚ್ಚಾಗಿ ವೋಟುಗಳನ್ನು ತಂದು ಕೊಡುವ ಹತ್ತಾರು ಸಾವಿರ ಕೋಟಿ ರುಪಾಯಿಗಳ ಯೋಜನೆಗಳಿಗೇ ಹೆಚ್ಚು ಒತ್ತು.
  ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ, ಚಿದಂಬರಮ್ ಅವರ ಭಾಷಣದಲ್ಲಿ ಪ್ರಸ್ತಾಪಿಸದೇ ಬಿಟ್ಟಿರುವ ವಿಚಾರವೇ ಇಲ್ಲ. ಹಿಂದಿನಿಂದಲೂ ಕೇಳಿಬರುತ್ತಿರುವ ಬೆಂಗಳೂರು - ಮುಂಬೈ, ಬೆಂಗಳೂರು-ಚೆನ್ನೈ ಔದ್ಯಮಿಕ ಕಾರಿಡಾರ್‌ಗಳಿಂದ ಹಿಡಿದು, ಒಂದು ರೀತಿಯಲ್ಲಿ ಹೊಚ್ಚ ಹೊಸ ಕಲ್ಪನೆಯ ರೂಪದಲ್ಲಿ ಮಹಿಳಾ ಅಭಿವೃದ್ಧಿ ಯೋಜನೆಗಳಿಗೆಂದು ಒಂದು ವಿಶೇಷ ಮಹಿಳಾ ಸರ್ಕಾರಿ ಬ್ಯಾಂಕಿನ ರಚನೆಯವರೆಗೆ ಎಲ್ಲ ವಿಷಯಗಳ ಪ್ರಸ್ತಾಪವಾಗಿದೆ.
  ಭಾರತ ಈಗ ವಿಶ್ವದಲ್ಲಿ ಆರ್ಥಿಕ ವ್ಯವಸ್ಥೆಯ ಗಾತ್ರದ ಲೆಕ್ಕದಲ್ಲಿ ಹತ್ತನೆಯ ರಾಷ್ಟ್ರ. ಇನ್ನು ಹನ್ನೆರಡು ವರ್ಷಗಳಲ್ಲಿ ವಿಶ್ವದ ಮೊದಲ ಐದು ರಾಷ್ಟ್ರಗಳಲ್ಲಿ ಒಂದಾಗಲಿದೆ ಎನ್ನುವ ಮಾತಿನ ಪ್ರಸ್ತಾಪವಿತ್ತು. ಆದರೆ ಆ ಪರಿವರ್ತನೆಗೆ ಅಗತ್ಯವಾದ ಬ್ರಹ್ಮಾಂಡ ಪ್ರಮಾಣದ ಬಂಡವಾಳ ಹೂಡಿಕೆಗೆ ದೇಶ ಸಂಪೂರ್ಣವಾಗಿ ವಿದೇಶೀ ಸಾಲವನ್ನೇ ಅವಲಂಬಿಸಿದೆ. ಯಾರು ಏನೇ ಹೇಳಲಿ, ಈಗ ಅಭಿವೃದ್ಧಿಗೆ ವಿದೇಶಿ ಹೂಡಿಕೆಯ ವಿಚಾರದಲ್ಲಿ ಬೇರೆ ಆಯ್ಕೆಯೇ ಇಲ್ಲ.  ಅದನ್ನು ನೇರವಾಗಿ ಒಪ್ಪಿಕೊಂಡ ಚಿದಂಬರಮ್ ಬಂಡವಾಳ ಹೂಡಿಕೆಗೆ ವಿಶೇಷ ಆಕರ್ಷಣೆ ಅಗತ್ಯ ಎನ್ನುವುದನ್ನು ಹೇಳಲು ಮರೆಯಲಿಲ್ಲ. ಉಳಿದಂತೆ ಅವರ ಭಾಷಣದ ಪುಟ-ಪುಟಗಳಲ್ಲೂ ಕಂಡು ಬಂದಿದ್ದು ಎಲ್ಲ ಜನವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಸ್ರ ಸಹಸ್ರ ಕೋಟಿ ರುಪಾಯಿಗಳ ವೆಚ್ಚದ ಲೆಕ್ಕಾಚಾರ.
  ಮಹಿಳೆಯರಿಗೆ, ಅಸಂಘಟಿತ ಕಾರ್ಮಿಕ ವಲಯದ ಶ್ರಮಿಕರಿಗೆ, ಬಡವರಿಗೆ ಹೊಸ ಸ್ವಾಸ್ಥ್ಯ ವಿಮಾಯೋಜನೆ, ಸರ್ವರಿಗೂ ಹಸಿವಿನಿಂದ ಮುಕ್ತಿ ದೊರಕಿಸುವ ಆಹಾರ ಭದ್ರತೆ ಯೋಜನೆ ಹಾಗೂ ಎಲ್ಲ ಹಂತಗಳಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯ ಯೋಜನೆಗಳನ್ನು ಪದರ ಪದರವಾಗಿ ಬಿಡಿಸಿಟ್ಟರು.  ಯುವ ಜನಾಂಗವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ಅವರ ಮದ್ದು; ಅರ್ಹರಿಗಲ್ಲ ಕೌಶಲ್ಯದಲ್ಲಿ ಶಿಕ್ಷಣ, ಕೌಶಲ್ಯವಿದ್ದರೆ ಲಾಭದಾಯಕ ಉದ್ಯೋಗ ಕಷ್ಟವಾಗಲಾರದು ಎನ್ನುವ ನಂಬಿಕೆ. ಆ ಯೋಜನೆಗೆ ಬೇಕಾದ ಕೌಶಲ್ಯ ಕಲಿಸುವ ಶಿಕ್ಷಕರು ಎಲ್ಲಿದ್ದಾರೆ?
  ದೇಶದಲ್ಲಿನ ಪ್ರಬುದ್ಧ ಉತ್ಕೃಷ್ಟ ಸಂಸ್ಥೆಗಳಿಗೆ ನೀಡುವ ನೂರು ಕೋಟಿ ರು. ವಿಶೇಷ ನೆರವಿಗೆ ಈ ವರ್ಷ ಉತ್ತರ ಪ್ರದೇಶದ ಅಲಿಘರ ಮುಸ್ಲಿಮ್ ವಿಶ್ವವಿದ್ಯಾಲಯ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳ ಆಯ್ಕೆ.
  ವಿಜ್ಞಾನ - ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ, ಅಣುಶಕ್ತಿ ವಲಯಗಳ ಯೋಜನೆಗಳಿಗೆ ಒಟ್ಟು 18000 ಕೋಟಿ ರುಪಾಯಿಗಳ ಮೀಸಲು.
  ಈಗಾಗಲೇ ಸರ್ಕಾರ ರೂಪಿಸಿರುವ ಎಲ್ಲ ಜನಕಲ್ಯಾಣ ಯೋಜನೆಗಳಿಗೂ ಅಗತ್ಯವಿರುವಷ್ಟು ಹಣ ಪೂರೈಸುವ ಭರವಸೆಯನ್ನೂ ನೀಡಲಾಗಿದೆ. ತುಂಬ ಕಷ್ಟ ಕಾಲದಲ್ಲೂ ದೊಡ್ಡ ರೀತಿಯ ಸಾಧನೆಯನ್ನೇ ಮಾಡಿರುವ ಕೃಷಿ ವಲಯಕ್ಕೆ ಇನ್ನಷ್ಟು ಉತ್ತೇಜನ. ಹಸಿರು ಕ್ರಾಂತಿಯನ್ನು ಪೂರ್ವ ಭಾರತದ ರಾಜ್ಯಗಳಿಗೂ ವಿಸ್ತರಣೆ.
  ತೆರಿಗೆಗಳ ವಿಚಾರದಲ್ಲಿ ಚಿದಂಬರಮ್ ಜನರ ನಿರೀಕ್ಷೆಯನ್ನು ಮುಟ್ಟಿಲ್ಲ. ಆದಾಯ ತೆರಿಗೆಯ ಬಾಬಿನಲ್ಲಿ ಈಗಿನ ಪದ್ಧತಿಯೇ ಮುಂದುವರಿಯಲಿದೆ. 2.5 ಲಕ್ಷದಿಂದ ಐದು ಲಕ್ಷದವರೆಗೆ ವಾರ್ಷಿಕ ವರಮಾನವಿರುವವರಿಗೆ ಎರಡು ಸಾವಿರ ರುಪಾಯಿಗಳ ವಿನಾಯಿತಿಯಷ್ಟೇ ವಿಶೇಷ. ವಾರ್ಷಿಕ ಆದಾಯ ಒಂದು ಕೋಟಿಗಿಂತ ಅಧಿಕವೆಂದು ಘೋಷಿಸಿಕೊಂಡಿರುವ 42,800 ಮಂದಿ ಅತಿ ಶ್ರೀಮಂತರಿಗೆ ತೆರಿಗೆಯ ಶೇಕಡಾ ಹತ್ತರಷ್ಟು ಅಧಿಭಾರ.   ಸಿಗರೇಟ್ ಮೇಲಿನ ತೆರಿಗೆಯಲ್ಲಿ ಸ್ವಲ್ಪ ಹೆಚ್ಚಳ, ದುಬಾರಿ ಕಾರ್‌ಗಳ ಮೇಲೆ ಅಧಿಕ ತೆರಿಗೆ ಇತರ ಕೆಲವು ಕ್ರಮಗಳು. ಈ ಎಲ್ಲ ಕ್ರಮಗಳಿಂದ ಅಗತ್ಯ ಅಥವಾ ವೆಚ್ಚದ ಲೆಕ್ಕ ಹಿಡಿದರೆ ಅತಿದೊಡ್ಡ ಮೊತ್ತದ ಸಂಗ್ರಹದ ಉದ್ದೇಶವಿಲ್ಲ. ಉಳಿದಿದ್ದಕ್ಕೆ ಸಾಲವೇ ಗತಿ.  ಬಂಡವಾಳ ಪೇಟೆಯ ವ್ಯವಹಾರ ಹೆಚ್ಚಿಸಲು ಅನೇಕ ಕ್ರಮಗಳ ಪ್ರಕಟಣೆ. ಪ್ರಕಟಿಸಿದ ಎಲ್ಲ ಗುರಿಗಳನ್ನೂ ಮುಟ್ಟುವ ವಿಶ್ವಾಸ ಅವರಲ್ಲಿದೆ.
  ಕೇಂದ್ರ-ರಾಜ್ಯಗಳ ತೆರಿಗೆಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಎನ್ನಬಹುದಾದ ಸಾಮಾನ್ಯ ತೆರಿಗೆ ಹಾಗೂ ಸೇವಾ ತೆರಿಗೆಯ ವಿಲೀನದ ಕನಸು ನನಸಾಗುವಂತಿದೆ. ಅದಕ್ಕಾಗಿ ಕೇಂದ್ರ, ರಾಜ್ಯಗಳಿಗೆ ಕೊಡಬೇಕಾದ ಹಣದ ವ್ಯವಸ್ಥೆಯೂ ಬಜೆಟ್‌ನಲ್ಲಿ ಆಗಿದೆ. ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ 80,000 ಕೋಟಿ ರುಪಾಯಿಗಳನ್ನು ಒದಗಿಸಲಾಗಿದೆ.
  ಮೇಲ್ನೋಟಕ್ಕೆ, ಈ ಬಜೆಟ್ ಮಹತ್ವಾಕಾಂಕ್ಷಿಯಲ್ಲ. ಯಾವ ಜನವರ್ಗಕ್ಕೂ ವಿಶೇಷವಾದ ಹೊರೆಯನ್ನು ಹೊರಿಸುವ ಪ್ರಯತ್ನ ಕಂಡು ಬಂದಿಲ್ಲ. ಆದರೆ ಸರ್ಕಾರದ ವೆಚ್ಚದಲ್ಲಿ ಅನಗತ್ಯ, ನಿರುಪಯುಕ್ತ, ನಿರರ್ಥಕ ಯೋಜನೆಗಳಗೆ ಕತ್ತರಿ ಹಾಕುವ ಒಂದೇ ಒಂದು ಕ್ರಮವೂ ಕಂಡುಬಂದಿಲ್ಲ. ಚಿದಂಬರಮ್ ಈ ಬಾರಿ ದೊಡ್ಡ ಕನಸನ್ನೇನೂ ಕಟ್ಟಿಕೊಟ್ಟಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments